ಕಾವೇರಿ ತವರಲ್ಲಿ ಮುಂಗಾರು ಮಳೆಯಲ್ಲಿ..

ಕಳೆದರೆಡು ದಿನಗಳಿಂದ ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು ಈ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಭಾಗಮಂಡಲ ಜಲಾವೃತಗೊಂಡಿದೆ.
ದ್ವೀಪವಾದ ಸಂಗಮ:ಇಲ್ಲಿನ ಸಂಗಮದಲ್ಲಿ ನೀರು ಹೆಚ್ಚಳವಾಗುತ್ತಿದ್ದು, ಭಾಗಮಂಡಲ ನಾಪೋಕ್ಲು ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿದು ಹೋಗುತ್ತಿರುವುದರಿಂದ ಸಂಪರ್ಕ ಕಡಿದುಕೊಂಡಿದೆ. ಮತ್ತೊಂದೆಡೆ ಭಾಗಮಂಡಲ ಹಾಗೂ ಮಡಿಕೇರಿ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೂ ನೀರು ಹರಿದು ಬರುತ್ತಿದ್ದು ಸಂಪರ್ಕ ಕಳೆದುಕೊಂಡು ದ್ವೀಪವಾಗಿ ಪರಿಣಮಿಸಿದೆ.
ಕಳೆದ ವರ್ಷ ಇದೇ ವೇಳೆಗೆ ಹಲವು ಬಾರಿ ಭಾಗಮಂಡಲ ಜಲಾವೃತವಾಗಿತ್ತಾದರೂ ಈ ಬಾರಿ ಪ್ರವಾಹ ಬಂದಿರುವುದು ಇದೇ ಮೊದಲಾಗಿದೆ. ನಿನ್ನೆ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಸುತ್ತ ಮುತ್ತಲಿನ ತೊರೆಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಗದ್ದೆ ಬಯಲುಗಳು ಜಲಾವೃತಗೊಂಡಿವೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರತ್ತ ಬರೀ ನೀರೇ ಕಂಡು ಬರುತ್ತಿದೆ. ಜಿಲ್ಲಾಡಳಿತ ಪ್ರವಾಹವನ್ನು ಎದುರಿಸಲು ಸಮರ್ಪಕ ಸಿದ್ಧತೆ ಮಾಡಿಕೊಂಡಿದ್ದು, ಅಧಿಕಾರಿಗಳು ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಚುರುಕುಕೊಂಡ ಕೃಷಿ ಚಟುವಟಿಕೆ:ಕೊಡಗಿನಲ್ಲಿ ಮಳೆ ಈ ಬಾರಿ ತಡವಾಗಿ ಆರಂಭಗೊಂಡಿದ್ದರಿಂದ ರೈತರು ಭತ್ತ ಬೆಳೆಯಲು ಸಾಧ್ಯವಿಲ್ಲವೇನೋ ಎಂಬ ಆತಂಕದಲ್ಲಿದ್ದರು. ಆದರೆ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಆಶಾದಾಯಕವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಈಗಾಗಲೇ ಶೇ 50ರಷ್ಟು ನಾಟಿ ಕಾರ್ಯ ಮುಗಿಯ ಬೇಕಿತ್ತಾದರೂ ಮಳೆ ತಡವಾಗಿ ಆರಂಭವಾಗಿರುವುದರಿಂದ ಮಂದಗತಿಯಲ್ಲಿ ಸಾಗುತ್ತಿದೆ.
ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆಗಳಲ್ಲಿಯೂ ಉತ್ತಮ ಮಳೆಯಾಗುತ್ತಿರುವ ಕುರಿತು ವರದಿಯಾಗಿದೆ. ಹಾರಂಗಿ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿರುವ ಜಲಪಾತಗಳು ಮೈಕೈ ತುಂಬಿಕೊಂಡು ಧುಮುಕಲಾರಂಭಿಸಿವೆ.
ಗ್ಯಾಲರಿ: ಮಳೆ ಬಂತು ಮಳೆ ಕೊಡಗಿನಲ್ಲಿ ಕೊಡೆ ಹಿಡಿದು ನಡೆ
ಕಾವೇರಿ ನದಿ ದಂಡೆಯಲ್ಲಿರುವ ನಿವಾಸಿಗಳಿಗೆ ಸೂಕ್ತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದ್ದು, ಗಂಜಿ ಕೇಂದ್ರಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಜಿಲ್ಲೆಯ ಹಲವೆಡೆ ಗಾಳಿ, ಮಳೆಗೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಜನತೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ.
ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್.ನಲ್ಲಿಯೂ ಒಳ ಹರಿವು ಹೆಚ್ಚಾಗಿದೆ. ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಕೂಡ ಇನ್ನೆರಡು ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ.












Click it and Unblock the Notifications