ಮಾಗಡಿಯ ರೈತರ ಮೇಲೆ ಗಜಪಡೆ ದಾಳಿ

Elephants menance
ಮಾಗಡಿ,ಜು.27: ನೇಗಿಲಯೋಗಿಗಳು ವರ್ಷವಿಡೀ ಬೆವರು ಸುರಿಸಿ ದುಡಿದರೂ ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಪ್ರಕೃತಿಯ ಮುನಿಸು, ಕೀಟ ಬಾಧೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ರೈತನಿಗೆ ಸಮಸ್ಯೆಗಳು ಎದುರಾಗುತ್ತಿದೆ. ಸಾಲಸೋಲ ಮಾಡಿ ಬಂಡವಾಳ ಹೂಡಿ ಕೃಷಿಯಿಂದ ಬದುಕು ಹಸನು ಮಾಡಬೇಕೆಂಬ ಕನಸು ಕಟ್ಟಿಕೊಂಡ ರೈತರ ಬೆಳೆಯನ್ನ ಗಜಪಡೆ ದಾಳಿ ನಡೆಸಿ ನಾಶ ಪಡಿಸುತ್ತಿದೆ.

ರಾಮನಗರ ಜಿಲ್ಲೆಯ ಮಾಗಡಿಯ ಸಾವನದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತಲ ವ್ಯಾಪ್ತಿಯ ಹಳ್ಳಿಗಳ ರೈತರ ಕೃಷಿ ಭೂಮಿಯ ಮೇಲೆ ಗಜಪಡೆಯ ನಿರಂತರ ದಾಳಿಯಿಂದ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ. ಆನೆಗಳ ದಾಳಿಯಿಂದ ಬೆಳೆ ನಷ್ಟ ಮಾಡಿಕೊಂಡ ರೈತರು ಮುಂದಿನ ದಾರಿ ಕಾಣದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ನಾಯ್ಕನಪಾಳ್ಯ ಸುತ್ತಮುತ್ತಲ ವ್ಯಾಪ್ತಿಯ ಹಳ್ಳಿಗಳಲ್ಲಿ ವರ್ಷಕ್ಕೆ ಐದಾರು ಬಾರಿಯಾದರೂ ಬೆಳೆದ ಬೆಳೆಗಳ ಮೇಲೆ ಗಜಪಡೆ ದಾಳಿ ನಡೆಯುತ್ತಲೇ ಇದೆ. ರೈತಾಪಿ ವರ್ಗದವರು ಇರುವ ಜಮೀನಿನಲ್ಲಿ ಮಿಶ್ರತಳಿಯ ಬೇಸಾಯ ಮಾಡಿಕೊಂಡು ತಮ್ಮ ಬದುಕಿನ ಮಾರ್ಗವನ್ನ ಕಂಡು ಕೊಂಡಿದ್ದಾರೆ. ಆದರೆ ವರ್ಷದಲ್ಲಿ ಐದಾರು ಬಾರಿಯಾದರೂ ಗಜಪಡೆಗಳು ಸಮೀಪದಲ್ಲೇ ಅರಣ್ಯ ಪ್ರದೇಶವಿರುವುದರಿಂದ ರೈತರ ಕೃಷಿ ಭೂಮಿಯ ಮೇಲೆ ದಾಳಿಯಿಡುತ್ತಿವೆ.

ಇದರಿಂದ ಈ ಬಾರಿ ಹತ್ತಾರು ಎಕರೆ ಜಮೀನಿನಲ್ಲಿ ಬಾಳೆ, ತೆಂಗು, ಮಾವು, ಸೀಬೆ, ಅಡಿಕೆ ಬೆಳೆಯ ಮೇಲೆ ಆನೆಗಳು ದಾಳಿಯಿಟ್ಟಿರುವುದರಿಂದ ಬೆಳೆದ ಬೆಳೆ ಮಣ್ಣು ಪಾಲಾಗಿ ಹಾಕಿದ ಬಂಡವಾಳ ಕೈಗೆ ಬರದಂತಾಗಿದೆ. ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ರೈತನ ಬೆಳೆಯನ್ನ ಕ್ಷಣಾರ್ಧದಲ್ಲಿ ಗಜಪಡೆ ನಾಶ ಪಡಿಸುತ್ತಿದೆ. ಇದರಿಂದ ಕುಂಬಾರನಿಗೆ ವರುಷ ಬಡಿಗೆಗೆ ನಿಮಿಷವೆಂಬಂತೆ ವರ್ಷಪೂರಾ ಬೆಳೆದ ಬೆಳೆ ಕ್ಷಣಾರ್ಧದಲ್ಲ ಗಜಗರ್ಭಕ್ಕೆ ಸೇರುತ್ತಿದ್ದು ಅಳಿದುಳಿದಿದ್ದು ಮಣ್ಣುಪಾಲಾಗುತ್ತಿದೆ.

ರೈತರ ಬೆಳೆ ನಷ್ಟಕ್ಕೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡುತ್ತಿಲ್ಲವಾದ್ದರಿಂದ ರೈತರು ಸಮಸ್ಯೆಯ ಸುಳಿಯಲ್ಲೇ ಬದುಕುವಂತಾಗಿದೆ. ಈ ಭಾಗದ ವ್ಯಾಪ್ತಿಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಗಜಪಡೆಯ ಹಾವಳಿಯನ್ನ ತಡೆಗಟ್ಟುವಲ್ಲಿ ವಿಫಲವಾಗಿದೆ ಇದರಿಂದ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಿದೆ ಎಂಬುದು ಪ್ರಗತಿಪರ ರೈತ ನಾಯಕನಪಾಳ್ಯದ ರಂಗಪ್ಪರ ಅಳಲಾಗಿದೆ.

ಮನೆಮಂದಿಯೆಲ್ಲ ಹಗಲಿರುಳು ಕೃಷಿ ಚಟುವಟಿಕೆ ನಡೆಸಿ ಬದುಕಿನ ಬಂಡಿ ತಳ್ಳಲು ಆಶ್ರಯಿಸಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅತೀವೃಷ್ಟಿ ಅನಾವೃಷ್ಟಿ ಮತ್ತು ಕೀಟಬಾಧೆಯಿಂದ ಬೆಳೆದ ಫಸಲು ಕೈಗೆ ಸಿಗದೇ ನಷ್ಟಅನುಭವಿಸುವಂತಾಗಿದೆ. ಈ ನಡುವೆ ಕಾಡಿನಲ್ಲಿರಬೇಕಾದ ಗಜಪಡೆ ಅನ್ನದಾತರ ಬೆಳೆಯ ಮೇಲೆ ದಾಳಿ ನಡೆಸುತ್ತಿರುವುದರಿಂದ ಸಮಸ್ಯೆಯ ನಡುವೆ ಬದುಕುವಂತಾಗಿದೆ.

ಸಾಲಸೋಲ ಮಾಡಿ ಬೆಳೆ ಬೆಳೆದು ಜೀವನಕ್ಕೆ ದಾರಿ ಮಾಡಿಕೊಳ್ಳಬಹುದೆಂದು ರೈತರು ಕನಸು ಕಾಣುತ್ತಾರೆ. ಆದರೆ ಅರಣ್ಯ ಇಲಾಖೆಯವರು ಗಜಪಡೆಯ ಹಾವಳಿಯನ್ನ ತಪ್ಪಿಸದಿರುವುದರಿಂದ ಬಾಳೆ, ಮಾವು, ಹಲಸು, ಸೀಬೆ, ಮತ್ತು ಅಡಿಕೆ ಬೆಳೆಗಳನ್ನ ನಾಶ ಮಾಡುತ್ತಿವೆ. ನಿರಂತರವಾಗಿ ನಷ್ಟದಿಂದ ಬೇಸತ್ತಿರುವ ರೈತರಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ಪರಿಹಾರ ಧನವನ್ನು ನೀಡಬೇಕು ಇಲ್ಲದಿದ್ದಲ್ಲಿ ಆತ್ಯಹತ್ಯೆಯೇ ದಾರಿಯಾಗುತ್ತದೆಂಬುದು ರೈತ ನರಸಿಂಹಮೂರ್ತಿಯವರ ನೋವಿನ ನುಡಿಯಾಗಿದೆ.

ಸಾವನದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಹಲವಾರು ರೈತರ ಕೃಷಿ ಭೂಮಿಯಲ್ಲಿ ಬೆಳೆಯಲಾಗಿದ್ದ ಬೆಳೆಗಳ ಮೇಲೆ ಗಜಪಡೆ ದಾಳಿ ನಡೆಸಿ ನಷ್ಟವನ್ನುಂಟುಮಾಡಿವೆ. ಕಟಾವಿಗೆ ಬಂದಿದ್ದ ಮಾವು, ಅಡಿಕೆ, ಮತ್ತು ಬಾಳೆ ಬೆಳೆ ನೆಲಕ್ಕುರುಳಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನ ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಂಡು ರೈತರ ಬದುಕನ್ನ ಹಸನುಗೊಳಿಸಬೇಕೆಂಬುದು ರೈತರ ಒತ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+