ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!

ಅಮೆರಿಕದಲ್ಲಿ ಮತದಾನ ಮುಕ್ತಾಯವಾಗಿ ಇಡೀ ಜಗತ್ತು ಫಲಿತಾಂಶಕ್ಕೆ ಕಾಯುತ್ತಿದೆ. ಆದರೆ ಸ್ಪಷ್ಟವಾದ ಫಲಿತಾಂಶ ಬರಲು ಇನ್ನೆಷ್ಟು ದಿನ ಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಸಾಮಾನ್ಯವಾಗಿ ಮೂಡಬಹುದು, ಇಲ್ಲವೇ ಕಾಡಬಹುದು. ಅಂದಹಾಗೆ ನಿಮ್ಮ ಈ ಪ್ರಶ್ನೆಗೆ ಸರಳ ಉತ್ತರವಿದೆ. ಅಮೆರಿಕದಲ್ಲಿ ಫಲಿತಾಂಶ ನಿಧಾನವಾಗಲು ಕಾರಣ ಅಲ್ಲಿನ ಮತದಾನ ಪದ್ಧತಿ. ಆದರೆ ಈ ಬಾರಿ ಸಾಮಾನ್ಯಕ್ಕಿಂತಲೂ ಹೆಚ್ಚು ತಡವಾಗುತ್ತಿದೆ. ಇದಕ್ಕೆ ಮತ್ತೊಂದು ಬಲವಾದ ಕಾರಣ ಅಂಚೆ ಮತದಾನ. ಇದರ ಜೊತೆ ಶತ ಶತಮಾನಗಳಿಂದಲೂ ಅಮೆರಿಕದಲ್ಲಿ ಪಾಲಿಸಿಕೊಂಡು ಬರುತ್ತಿರುವ ಎಲೆಕ್ಟೊರಾಲ್ ಕಾಲೇಜು ಪದ್ಧತಿಯೂ ಫಲಿತಾಂಶ ತಡವಾಗಲು ಪ್ರಮುಖ ಕಾರಣ.

ಅಮೆರಿಕದಲ್ಲಿ ಅಧ್ಯಕ್ಷರನ್ನು 2 ಮತಗಳ ಮೂಲಕ ಅಳೆಯಲಾಗುತ್ತದೆ. ಅದರಲ್ಲಿ ಒಂದು ಪಾಪ್ಯುಲರ್ ವೋಟ್, ಇದನ್ನು ಒಟ್ಟು ಮತದಾನ ಎಂದು ಕೂಡ ಕರೆಯಬಹುದು. ಅಂದರೆ ಇಡೀ ಅಮೆರಿಕದಲ್ಲಿ ಒಟ್ಟು 15 ಕೋಟಿ ಮತದಾರರು ಇದ್ದರೆ, ಈ ಪೈಕಿ ಅಭ್ಯರ್ಥಿ ಪಡೆಯುವ ಒಟ್ಟು ಮತಗಳ ಸಂಖ್ಯೆಯನ್ನ ಪಾಪ್ಯುಲರ್ ವೋಟ್ ಎನ್ನಲಾಗುತ್ತದೆ. ಆದರೆ ಅಧ್ಯಕ್ಷರ ಆಯ್ಕೆಗೆ ಇದು ಮಾತ್ರ ಮುಖ್ಯವಾಗಲ್ಲ. ಪಾಪ್ಯುಲರ್ ವೋಟ್ ಮಾತ್ರ ಪಡೆದರೆ ಅಧ್ಯಕ್ಷರಾಗುವುದಕ್ಕೆ ಅರ್ಹತೆ ಪಡೆಯುವುದಿಲ್ಲ. ಎಲೆಕ್ಟೊರಾಲ್ ಕಾಲೇಜುಗಳ ಸಂಖ್ಯೆಯೂ 270ರ ಮ್ಯಾಜಿಕ್ ನಂಬರ್ ತಲುಪಲೇಬೇಕು. 538 ಎಲೆಕ್ಟೊರಾಲ್ ಕಾಲೇಜುಗಳಲ್ಲಿ ಕನಿಷ್ಠ 270 ಮತಗಳನ್ನು ಅಭ್ಯರ್ಥಿ ಪಡೆಯಬೇಕು. ಅಷ್ಟಕ್ಕೂ 'ಎಲೆಕ್ಟೊರಾಲ್ ಕಾಲೇಜುಗಳ' ಅರ್ಥ ಮತ್ತು ಮತದಾನ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನ ಇಲ್ಲಿ ತಿಳಿಯೋಣ.

ಎಲೆಕ್ಟೊರಾಲ್ ಕಾಲೇಜು ಇತಿಹಾಸ

ಎಲೆಕ್ಟೊರಾಲ್ ಕಾಲೇಜು ಇತಿಹಾಸ

ಅಮೆರಿಕ 1776ರ ಜುಲೈ 4ರಂದು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆಯಿತು. ಬಳಿಕ 1789ರಲ್ಲಿ ಅಮೆರಿಕದಲ್ಲಿ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂತು. ಹೀಗೆ ಸ್ವತಂತ್ರ ಅಮೆರಿಕದ ಮೊಟ್ಟಮೊದಲ ದೊರೆಯೇ ಜಾರ್ಜ್ ವಾಷಿಂಗ್ಟನ್. ಅಂದಿನ ಸಂದರ್ಭದಲ್ಲಿ ಜಾರ್ಜ್ ವಾಷಿಂಗ್ಟನ್ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದ ಅಮೆರಿಕನ್ನರು ಅವರನ್ನೇ ಮೊದಲ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. 1789 ಅಧ್ಯಕ್ಷ ಪಟ್ಟಕ್ಕೆ ಆಯ್ಕೆಯಾದ ವಾಷಿಂಗ್ಟನ್ ಹಾಗೂ ಅವರ ಸಂಗಡಿಗರು ಎಲೆಕ್ಟೊರಾಲ್ ಕಾಲೇಜು ಪದ್ಧತಿಯನ್ನು ಪರಿಚಯ ಮಾಡಿದರು. ಅಂದಿನಿಂದಲೂ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಈ ಪದ್ಧತಿ ಅನುಸರಿಸಲಾಗುತ್ತಿದೆ.

ಎಲೆಕ್ಟೊರಾಲ್ ಕಾಲೇಜು ಎಂದರೇನು..?

ಎಲೆಕ್ಟೊರಾಲ್ ಕಾಲೇಜು ಎಂದರೇನು..?

1789ರಿಂದ ಅಮೆರಿಕದಲ್ಲಿ ನಡೆದ ಪ್ರತಿಯೊಂದು ಚುನಾವಣೆಯಲ್ಲೂ ಅಧ್ಯಕ್ಷರ ಆಯ್ಕೆ ಎಲೆಕ್ಟೊರಾಲ್ ಕಾಲೇಜು ಮೂಲಕವೇ ನಡೆಯುತ್ತದೆ. ಹಾಗಾದರೆ ಎಲೆಕ್ಟೊರಾಲ್ ಕಾಲೇಜು ಎಂದರೇನು..? ಇಂತಹ ಪ್ರಶ್ನೆಗಳು ಕಾಡುವುದು ಸಹಜ. ಅಷ್ಟಕ್ಕೂ ಎಲೆಕ್ಟೊರಾಲ್ ಕಾಲೇಜು ಎಂದರೆ ಒಂದು ಪ್ರದೇಶದ ಅಥವಾ ಕ್ಷೇತ್ರದ ಹೆಸರಲ್ಲ. ಇದು ಒಂದು ಮತ. ಪ್ರತಿಯೊಂದು ರಾಜ್ಯಗಳಿಗೂ ಅದರ ಸಂಖ್ಯೆಗೆ ಅನುಗುಣವಾಗಿ ಹಂಚಿಕೆಯಾಗುವ ಮತಗಳನ್ನೇ ಎಲೆಕ್ಟೊರಾಲ್ ಕಾಲೇಜು ಎಂದು ಕರೆಯಲಾಗುತ್ತದೆ. ಈ ಎಲೆಕ್ಟೊರಾಲ್ ಕಾಲೇಜುಗಳ ಮೂಲಕವೇ ಅಧ್ಯಕ್ಷರು ಆಯ್ಕೆಯಾಗುತ್ತಾರೆ. ಉದಾಹರಣೆಗೆ ಹೇಳುವುದಾದರೆ ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿಯೊಂದು ರಾಜ್ಯವೂ ತನ್ನ ಗಾತ್ರಕ್ಕೆ ತಕ್ಕಂತೆ ಎಲೆಕ್ಟೊರಾಲ್ ಕಾಲೇಜುಗಳ ಬಲ ಪಡೆಯುತ್ತದೆ. ರಾಜ್ಯಗಳ ಗಾತ್ರ ಎಂದರೆ ಅದರ ಭೂಪ್ರದೇಶದ ಆಧಾರದಲ್ಲಿ ನಿರ್ಧಾರ ಮಾಡುವುದಿಲ್ಲ. ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಎಲೆಕ್ಟೊರಾಲ್ ಕಾಲೇಜುಗಳ ಸಂಖ್ಯೆ ಸಿಗುತ್ತದೆ. ಕ್ಯಾಲಿಫೋರ್ನಿಯ 55 ಎಲೆಕ್ಟೊರಾಲ್ ಕಾಲೇಜುಗಳನ್ನ ಹೊಂದಿದೆ ಹಾಗೂ ಅಲಾಸ್ಕಾ 3 ಎಲೆಕ್ಟೊರಾಲ್ ಕಾಲೇಜುಗಳನ್ನು ಹೊಂದಿದೆ. ಆದರೆ ಭೂ ಪ್ರದೇಶದ ಆಧಾರದಲ್ಲಿ ಅಲಾಸ್ಕಾ ಕ್ಯಾಲಿಫೋರ್ನಿಯ ರಾಜ್ಯಕ್ಕಿಂತ ದೊಡ್ಡದಾಗಿದೆ. ಇಷ್ಟಿದ್ದರೂ ಕ್ಯಾಲಿಫೋರ್ನಿಯ ಜನಸಂಖ್ಯೆ ಆಧಾರದಲ್ಲಿ 55 ಎಲೆಕ್ಟೊರಾಲ್ ಕಾಲೇಜು ಅಥವಾ ಅಧ್ಯಕ್ಷರ ಆಯ್ಕೆಗೆ ಬೇಕಾದ ಮತಗಳನ್ನು ಪಡೆದಿದೆ. ಅಲಾಸ್ಕಾ ಕೇವಲ 3ಕ್ಕೆ ತೃಪ್ತಿಪಡಬೇಕಿದೆ. ಈ ವ್ಯತ್ಯಾಸಕ್ಕೆ ಕಾರಣ ಜನಸಂಖ್ಯೆ.

‘ಎಲೆಕ್ಟೊರಾಲ್ ಕಾಲೇಜು’ ಹಾಕುವವರು ಯಾರು..?

‘ಎಲೆಕ್ಟೊರಾಲ್ ಕಾಲೇಜು’ ಹಾಕುವವರು ಯಾರು..?

ಇದನ್ನು ಹಾಕುವವರು ಪ್ರಜೆಗಳೇ ಆಗಿರುತ್ತಾರೆ. ಇದನ್ನು ಪರೋಕ್ಷ ಮತದಾನ ಪದ್ಧ ಎಂದು ಕರೆಯುವರು. ನಮ್ಮ ಭಾರತದಲ್ಲಿ ಪ್ರಧಾನಿ ಆಯ್ಕೆ ಕೂಡ ಪರೋಕ್ಷ ಚುನಾವಣಾ ಪದ್ಧತಿಯೇ ಆಗಿದೆ. ಆದರೆ ಅಮೆರಿಕದ ಅಧ್ಯಕ್ಷರ ಆಯ್ಕೆಗಿಂತ ಭಾರತದಲ್ಲಿ ಭಿನ್ನ ಚುನಾವಣಾ ಪದ್ಧತಿಯಿದೆ. ಹೀಗೆ ಅಮೆರಿಕದ ಪ್ರತಿ ರಾಜ್ಯಗಳಲ್ಲೂ ಪ್ರಜೆ ಅಧ್ಯಕ್ಷರ ಆಯ್ಕೆಗೆ ಮತವನ್ನು ಹಾಕುವನು. ಉದಾಹರಣೆಗೆ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಸುಮಾರು 1 ಕೋಟಿ ಮತ ಇದ್ದರೆ, ಈ ಪೈಕಿ ಯಾರು ಹೆಚ್ಚು ಮತ ಪಡೆಯುವರೋ ಅವರೇ ಕ್ಯಾಲಿಫೋರ್ನಿಯ ರಾಜ್ಯದ ಅಧ್ಯಕ್ಷೀಯ ಸ್ಥಾನದ ವಿಜಯಿ. ಆಗ ಕ್ಯಾಲಿಫೋರ್ನಿಯ ರಾಜ್ಯದ 55 'ಎಲೆಕ್ಟೊರಾಲ್ ಕಾಲೇಜು' ಮತಗಳು ಒಬ್ಬರಿಗೆ ಸೇರುತ್ತವೆ. ಈ ಬಾರಿ 79 ಲಕ್ಷಕ್ಕೂ ಹೆಚ್ಚು ಮತಗಳನ್ನು ಬೈಡನ್ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಪಡೆದಿದ್ದಾರೆ. ಆದರೆ ಟ್ರಂಪ್ ಪಾಲು ಕೇವಲ 39 ಲಕ್ಷ. ಹೀಗಾಗಿ ಬೈಡನ್‌ಗೆ ಕ್ಯಾಲಿಫೋರ್ನಿಯ ರಾಜ್ಯದ 55 'ಎಲೆಕ್ಟೊರಾಲ್ ಕಾಲೇಜು' ಮತ ಸಿಕ್ಕಿದೆ. ಹೀಗೆ ಅಧ್ಯಕ್ಷರಾಗಲು ಬೈಡನ್‌ಗೆ ಅಗತ್ಯವಿದ್ದ 270 ಎಲೆಕ್ಟೊರಾಲ್ ಕಾಲೇಜು ಮತಗಳ ಪೈಕಿ 55 ಮತಗಳನ್ನು ಬೈಡನ್ ಕೇವಲ ಕ್ಯಾಲಿಫೋರ್ನಿಯ ರಾಜ್ಯದಿಂದ ಗೆದ್ದಿದ್ದಾರೆ.

 ‘ಪಾಪ್ಯುಲರ್ ವೋಟ್’ ಎಂದರೇನು..?

‘ಪಾಪ್ಯುಲರ್ ವೋಟ್’ ಎಂದರೇನು..?

ಇದು ಸಾಮನ್ಯವಾಗಿ ಅಮೆರಿಕ ಚುನಾವಣೆಯಲ್ಲಿ ಕೇಳಿಬರುವ ಮತ್ತೊಂದು ಪ್ರಶ್ನೆ. 'ಪಾಪ್ಯುಲರ್ ವೋಟ್' ಎಂದರೆ ಮತದಾರರು ಚಲಾಯಿಸುವ ಒಟ್ಟು ಮತಗಳ ಪೈಕಿ, ಅಭ್ಯರ್ಥಿಯೊಬ್ಬರು ಪಡೆಯುವ ಒಟ್ಟು ಮತ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಪಾಪ್ಯುಲರ್ ವೋಟ್ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಇದಕ್ಕೆ ಉದಾಹರಣೆ ನೀಡಬಹುದಾದರೆ. ಅಮೆರಿಕದಲ್ಲಿ 15 ಕೋಟಿ ಮತ ಚಲಾವಣೆಯಾಗಿ, ಇದರಲ್ಲಿ 8 ಕೋಟಿ ಮತಗಳನ್ನ ಪಡೆದ ತಕ್ಷಣ ಆ ಅಭ್ಯರ್ಥಿ ಅಧ್ಯಕ್ಷನಾಗುವುದಕ್ಕೆ ಸಾಧ್ಯವಿಲ್ಲ. ಪಾಪ್ಯುಲರ್ ವೋಟ್‌ಗಳ ಜೊತೆ ಅಭ್ಯರ್ಥಿಗೆ 'ಎಲೆಕ್ಟೊರಾಲ್ ಕಾಲೇಜು' ಮತಗಳು ಕೂಡ ಮುಖ್ಯ. ಒಟ್ಟು 538 ಎಲೆಕ್ಟೊರಾಲ್ ಕಾಲೇಜು ಮತಗಳ ಪೈಕಿ ಮ್ಯಾಜಿಕ್ ನಂಬರ್ 270ನ್ನು ಅಧ್ಯಕ್ಷನಾಗು ಅಭ್ಯರ್ಥಿ ಪಡೆಯಲೇಬೇಕು.

ಸೋತವರ ಸಂಖ್ಯೆ ಹೆಚ್ಚಾಗಿದೆ..!

ಸೋತವರ ಸಂಖ್ಯೆ ಹೆಚ್ಚಾಗಿದೆ..!

ಪಾಪ್ಯುಲರ್ ವೋಟ್ ಪಡೆದರೂ 'ಎಲೆಕ್ಟೊರಾಲ್ ಕಾಲೇಜು' ಮತಗಳಲ್ಲಿ ಹಿನ್ನಡೆ ಅನುಭವಿಸಿದ ಅಭ್ಯರ್ಥಿ ಸೋತು ಸುಣ್ಣವಾದ ಘಟನೆಗಳು ಇತಿಹಾಸದಲ್ಲಿವೆ. ಜಾರ್ಜ್ ಬುಷ್ ಮೊದಲ ಬಾರಿಗೆ ಆಯ್ಕೆಯಾದಾಗ ಬುಷ್ ಎದುರಾಳಿ ಆಲ್ ಗೊರ್ ಶೇ. 48.4ರಷ್ಟು ಮತ ಪಡೆದಿದ್ದರು. ಆದರೆ ಬುಷ್ ಪಡೆದಿದ್ದು ಕೇವಲ ಶೇ. 47.9 ರಷ್ಟು ಮಾತ್ರ. 2000ದಲ್ಲಿ ನಡೆದಿದ್ದ ಈ ಚುನಾವಣೆಯಲ್ಲಿ 11 ಕೋಟಿಯಷ್ಟು ಅಮೆರಿಕನ್ನರು ಮತ ಹಾಕಿದ್ದರು. ಆದರೆ ಇದರಲ್ಲಿ ಅತಿಹೆಚ್ಚು ಮತ ಪಡೆದಿದ್ದ ಆಲ್ ಗೊರ್ ಸೋತಿದ್ದರು. ಈ ನಡುವೆ ಕೇವಲ ಶೇ. 47.9 ರಷ್ಟು ಮತ ಪಡೆದಿದ್ದ ಬುಷ್ ಅಧ್ಯಕ್ಷರಾಗಿದ್ದರು. ಇದಕ್ಕೆ ಕಾರಣ 'ಎಲೆಕ್ಟೊರಾಲ್ ಕಾಲೇಜು' ಪದ್ಧತಿ. ಬುಷ್ 271 ಎಲೆಕ್ಟೊರಾಲ್ ಕಾಲೇಜು ಮತಗಳನ್ನ ಪಡೆದಿದ್ದರೆ, ಅದೇ ಸಂದರ್ಭ ಆಲ್ ಗೊರ್ ಪಡೆದಿದ್ದು ಕೇವಲ 266 ಎಲೆಕ್ಟೊರಾಲ್ ಕಾಲೇಜು ಮತಗಳನ್ನ. ಹೀಗೆ ಯಾರು 270 ಅಥವಾ ಅದಕ್ಕಿಂತಲೂ ಹೆಚ್ಚು ಎಲೆಕ್ಟೊರಾಲ್ ಮತಗಳನ್ನು ಪಡೆಯುವರೋ ಅವರೇ ಅಮೆರಿಕದ ಅಧಿಪತಿಯಾಗುತ್ತಾರೆ.

 2016ರಲ್ಲಿ ಟ್ರಂಪ್ ಗೆದ್ದಿದ್ದು ಇದೇ ರೀತಿ..!

2016ರಲ್ಲಿ ಟ್ರಂಪ್ ಗೆದ್ದಿದ್ದು ಇದೇ ರೀತಿ..!

2016ರಲ್ಲಿ ಟ್ರಂಪ್ ವಿಚಾರದಲ್ಲೂ ಜಾರ್ಜ್ ಬುಷ್ ರೀತಿಯ ಜಾದೂ ನಡೆದಿತ್ತು. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಒಟ್ಟು ಮತಗಳಲ್ಲಿ ಶೇ. 48.2ರಷ್ಟು ಮತ ಪಡೆದಿದ್ದರು. ಆದರೆ ಟ್ರಂಪ್ ಪಡೆದಿದ್ದು ಕೇವಲ ಶೇ. 46.1ರಷ್ಟು. ಈ ನಡುವೆಯೂ ಟ್ರಂಪ್ 304 ಎಲೆಕ್ಟೊರಾಲ್ ಕಾಲೇಜು ಮತಗಳನ್ನು ಪಡೆದಿದ್ದರು. ಆದರೆ ಹಿಲರಿಗೆ ಸಿಕ್ಕಿದ್ದು 227 ಎಲೆಕ್ಟೊರಾಲ್ ಕಾಲೇಜು ಮತಗಳು. ಹೀಗಾಗಿ 2016ರಲ್ಲಿ ಚುನಾವಣಾ ಸಮೀಕ್ಷೆಗಳು ಮಕಾಡೆ ಮಲಗಿ ಹಿಲರಿ ಕ್ಲಿಂಟನ್ ಸೋತು ಸುಣ್ಣವಾಗಿದ್ದರು. ಆಚ್ಚರಿಯ ರೀತಿಯಲ್ಲಿ ಟ್ರಂಪ್ ಅಧ್ಯಕ್ಷರಾದರು. ಆದರೆ ಈ ಬಾರಿ ಆ ರೀತಿಯ ಜಾದೂ ನಡೆಯುವುದು ಅನುಮಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+