ಶಿಂಷಾ ಜಲಪಾತ: ಇದು ಮಳೆಗೆ ಮೈಕೈತುಂಬುವ ಮಂಡ್ಯದ ಜಲಬೆಡಗಿ

ಮಂಡ್ಯ, ಆಗಸ್ಟ್‌ 06: ಮಂಡ್ಯ ಜಿಲ್ಲೆಯಲ್ಲಿರುವ ಶಿಂಷಾ ಜಲಪಾತ ಇದು ಮಳೆಗಾಲದ ಜಲಬೆಡಗಿಯಾಗಿದ್ದು, ಇದರ ಜಲವೈಭವ ನೋಡಬೇಕೆಂದರೆ ಧಾರಾಕಾರವಾಗಿ ಮಳೆ ಸುರಿದು ಕೆರೆಗಳು ಕೋಡಿ ಬಿದ್ದು ಶಿಂಷಾ ನದಿ ಭೋರ್ಗರೆದು ಹರಿಯಬೇಕಾಗುತ್ತದೆ. ಹೀಗಾಗಿ ಎಲ್ಲ ದಿನಗಳಲ್ಲಿ ಇದರ ಚೆಲುವನ್ನು ನೋಡುವುದು ಕಷ್ಟವಾಗುತ್ತದೆ. ಆದ್ದರಿಂದ ಮಳೆ ಸುರಿದಾಗ ಮಾತ್ರ ಧುಮ್ಮಿಕ್ಕುವ ಈ ಜಲಪಾತದತ್ತ ನಿಸರ್ಗ ಪ್ರಿಯರು ಹೆಜ್ಜೆ ಹಾಕುತ್ತಾರೆ. ಉಳಿದಂತೆ ಇದು ಅಜ್ಞಾತ ಜಲಪಾತವಾಗಿ ಉಳಿದು ಬಿಡುತ್ತದೆ.

ಜಲಪಾತವು ಎಲ್ಲ ದಿನಗಳಲ್ಲಿ ಮಾತ್ರವಲ್ಲ ಮಳೆಗಾಲದಲ್ಲಿಯೂ ಅಬ್ಬರಿಸುವುದಿಲ್ಲ. ಬದಲಿಗೆ ಎಲ್ಲೆಡೆ ಉತ್ತಮವಾಗಿ ಮಳೆ ಸುರಿದು ಬಯಲು ಸೀಮೆಯಲ್ಲಿ ಹರಿವ ನದಿಗಳಲ್ಲಿಯೂ ಜೀವ ಕಳೆ ಬಂದಾಗ ಅದರಲ್ಲೂ ಶಿಂಷಾ ನದಿಗೆ ಜೀವ ಕಳೆ ಬಂದಾಗ ಇದು ಹೆಬ್ಬಂಡೆಗಳ ಮೇಲೆ ತನ್ನ ಅಸಲಿ ಸೌಂದರ್ಯವನ್ನು ಹೊರಗೆಡವಲು ಶುರುಮಾಡುತ್ತದೆ. ಆಗ ಕರ್ರಗಿನ ಹೆಬ್ಬಂಡೆಗಳ ಮೇಲೆ ಭೂಒಡಲ ಬೆಳ್ಳಿ ಕರಗಿ ನೀರಾಗಿ ಹರಿಯುತ್ತದೆಯೇನೋ ಎಂಬಂತೆ ತನ್ನ ಚೆಲುವನ್ನು ಹೊರಕ್ಕೆ ಹಾಕಿ ನೋಡ ಬಂದವರ ಮೈಮನವನ್ನು ಪುಳಕಗೊಳಿಸುತ್ತದೆ.

What Is The Speciality Of Mandya Shimsha Waterfalls

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಶಿಂಷಾನದಿಯಿಂದ ಸೃಷ್ಠಿಯಾಗಿರುವ ಶಿಂಷಾ ಜಲಪಾತದ ಸೌಂದರ್ಯವನ್ನು ಎಲ್ಲರಿಗೂ ಆಸ್ವಾದಿಲು ಸಾಧ್ಯವಾಗುವುದಿಲ್ಲ. ಕಾರಣ ಇದರ ಜಲನರ್ತನವೇನಿದ್ದರೂ ಮಳೆ ಸುರಿದಾಗ ಮಾತ್ರ. ಅದು ಕೂಡ ಕೆಲವು ದಿನಗಳಿಗಷ್ಟೆ ಸೀಮಿತ. ಹೀಗಾಗಿ ಆ ಸಮಯದಲ್ಲಿ ಯಾರು ಅದರತ್ತ ಹೋಗುತ್ತಾರೋ? ಅವರಿಗೆ ಮಾತ್ರ ಜಲಪಾತದ ಸೊಬಗು ಸವಿಯುವ ಅವಕಾಶ ದೊರೆಯುತ್ತದೆ.

ಶಿಂಷಾ ನದಿಗೆ ಜೀವಕಳೆ ಬರಬೇಕು

ಹಾಗೆನೋಡಿದರೆ ಶಿಂಷಾ ಜಲಪಾತವಿರುವ ತಾಣ ಹೆಬ್ಬಂಡೆಗಳಿಂದ ಕೂಡಿದೆ. ಶಿಂಷಾ ನದಿಯಲ್ಲಿ ವರ್ಷದ ಎಲ್ಲ ದಿನಗಳಲ್ಲಿ ನೀರು ತುಂಬಿ ಹರಿಯುವುದಿಲ್ಲ. ಅಷ್ಟೇ ಅಲ್ಲದೆ, ಮಳೆಗಾಲದಲ್ಲಿಯೂ ಇದು ಪ್ರವಾಹ ಸೃಷ್ಟಿಸುವುದಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಧಾರಾಕಾರವಾಗಿ ಸುರಿಯುವ ಮುಂಗಾರು ಮಳೆ ಶಿಂಷಾ ನದಿಯಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿಯುವಂತೆ ಮಾಡಿಬಿಡುತ್ತದೆ. ಆಗ ಶಿಂಷಾ ಜಲಪಾತಕ್ಕೆ ಜೀವಕಳೆ ಬಂದು ಬಿಡುತ್ತದೆ.

ಇಂತಹ ಸಂದರ್ಭಗಳನ್ನು ನೋಡಿಕೊಂಡು ಶಿಂಷಾ ಜಲಪಾತದತ್ತ ತೆರಳಿದರೆ ಜಲಪಾತದ ರುದ್ರರಮಣೀಯ ದೃಶ್ಯಗಳನ್ನು ಸವಿಯಲು ಸಾಧ್ಯವಾಗುತ್ತದೆ. ಭಾರೀ ಮಳೆ ಸುರಿದಾಗ ಶಿಂಷಾ ನದಿ ತುಂಬಿ ಹರಿಯುತ್ತದೆ. ಹೀಗೆ ಹರಿಯುವ ನದಿ ಹಲಗೂರು ಬಳಿ ಸಾಗುವಾಗ ಹೆಬ್ಬಂಡೆಗಳ ಮೇಲಿಂದ ಬೆಳ್ನೊರೆಯುಕ್ಕಿಸುತ್ತಾ ಧುಮುಕುತ್ತದೆ. ಈ ಸುಂದರ ದೃಶ್ಯ ಕಣ್ಮನ ಸೆಳೆಯುತ್ತಿದೆ. ಈ ವಿಶಾಲ ಬಂಡೆಗಳ ಮೇಲೆ ಇತರ ದಿನಗಳಲ್ಲಿ ನದಿ ಹರಿಯುತ್ತದೆಯಾದರೂ ಕ್ಷೀಣವಾಗಿರುತ್ತದೆ.

ಈ ಜಲಪಾತಕ್ಕಿದೆ ಹಲವು ಹೆಸರು

ಅಪರೂಪಕ್ಕೆ ನದಿಯಲ್ಲಿ ಭೋರ್ಗರೆತ ಕಾಣಿಸಿದಾಗ ಜಲಪಾತಕ್ಕೆ ವೈಭವ ಮರುಳಿಸುತ್ತದೆ. ಇನ್ನು ಈ ಜಲಪಾತಕ್ಕೆ ನಿರ್ದಿಷ್ಟ ಯಾವುದೇ ಹೆಸರು ಇಲ್ಲದ ಕಾರಣ ಜನ ಅವರಿಷ್ಟ ಬಂದ ಹೆಸರಿನಲ್ಲಿ ಕರೆಯುತ್ತಿರುವುದನ್ನು ಕಾಣಬಹುದು. ಕೆಲವರು ಶಿಂಷಾ ಜಲಪಾತ, ಕೊಂಡ ಜಲಪಾತ, ಬೆಂಕಿಜಲಪಾತ ಹೀಗೆ ಹಲವು ಹೆಸರುಗಳಲ್ಲಿ ಕರೆಯುತ್ತಾರೆ ಒಂದು ವೇಳೆ ಸದಾ ಈ ಜಲಪಾತದಲ್ಲಿ ನೀರಿದ್ದು ಅದು ಧುಮುಕುವಂತಿದ್ದರೆ, ಮಂಡ್ಯದ ನಯಾಗರವಾಗುತ್ತಿದ್ದುದರಲ್ಲಿ ಎರಡು ಮಾತಿಲ್ಲ.

What Is The Speciality Of Mandya Shimsha Waterfalls

ಇಷ್ಟಕ್ಕೂ ಈ ಜಲಪಾತವನ್ನು ನೋಡಲು ಹೋಗುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಜಲಪಾತ ಸೃಷ್ಠಿಯಾಗಿರುವ ಸ್ಥಳಕ್ಕೆ ಸಮರ್ಪಕವಾದ ರಸ್ತೆಯಿಲ್ಲ. ಜತೆಗೆ ಇಲ್ಲೊಂದು ಜಲಪಾತವಿದೆ ಎಂದು ಹೇಳಲು ಇದು ಪ್ರವಾಸಿ ತಾಣಗಳ ಭೂಪಟಗಳಲ್ಲಿ ಗುರುತಿಸಿಕೊಂಡಿಲ್ಲ. ಹೀಗಾಗಿ ಕಾಲ್ನಡಿಗೆಯಲ್ಲಿ ನಡೆಯುವ ಧೈರ್ಯ ಬೇಕಾಗಿರುವ ಕಾರಣ ಹೆಚ್ಚಿನವರು ಶ್ರಮಪಡಲು ತಯಾರಿಲ್ಲದೆ, ಜತೆಗೆ ಹತ್ತಿರದಿಂದ ನಿಂತು ಜಲಪಾತವನ್ನು ವೀಕ್ಷಿಸಲು ಅನುಕೂಲವಾದ ವ್ಯವಸ್ಥೆಯೂ ಇಲ್ಲದರಿಂದ ಅತ್ತ ಹೋಗುವುದು ಕಡಿಮೆ ಎನ್ನಬೇಕು.

ಜಲಪಾತದ ಬಳಿಗೆ ಹೋಗುವುದು ಹೇಗೆ?

ಒಂದು ವೇಳೆ ಇದರ ವೈಭವನ್ನು ಮಳೆಗಾಲದಲ್ಲಿ ಹತ್ತಿರದಿಂದ ನೋಡಿದರೆ ಚೆಲುವಿಗೆ ಮೈಮನಸೋಲದಿರಲಾರರು. ಏಕೆಂದರೆ ಸುಮಾರು ನೂರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುವ ದೃಶ್ಯ ಸುಂದರ ಸುರಸುಂದರವಾಗಿದ್ದು, ಶ್ವೇತಧಾರೆಗಳು ಸೃಷ್ಠಿಸುವ ಮಂಜಿನ ಮಳೆಯ ಜತೆಗೆ ನೀರ ಹಾಡು ಮನಸ್ಸಿಗೆ ಖುಷಿಕೊಡುವುದರೊಂದಿಗೆ ನೋಡುಗರ ಮಲಕ್ಕೆ ಉಲ್ಲಾಸ ತುಂಬುತ್ತದೆ. ಈ ಜಲಪಾತವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಿಂದ ಸುಮಾರು 15ಕಿ.ಮೀ. ದೂರದಲ್ಲಿದೆ. ಇದನ್ನು ನೋಡಲು ತೆರಳುವವರು ಮಳವಳ್ಳಿ ತಾಲೂಕಿನ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ ಅಂದರೆ ಹಲಗೂರಿನಿಂದ 5 ಕಿ.ಮೀ. ತೆರಳಿದರೆ ಅಲ್ಲಿ ರಸ್ತೆ ಇಬ್ಭಾಗವಾಗುತ್ತದೆ.

ಇಲ್ಲಿ ಬಲಕ್ಕೆ ಬೀರೋಟ ಗ್ರಾಮದ ಕಡೆಗೆ ಹೋಗುವ ಮಾರ್ಗದಲ್ಲಿ ತೆರಳಿ ಕರಲಕಟ್ಟೆ, ಗಾಣಾಳು ಮೂಲಕ ಕೆಂಚಬೋವಿದೊಡ್ಡಿ ಗ್ರಾಮಕ್ಕೆ ತೆರಳಿದರೆ ಅಲ್ಲಿಂದ ಸುಮಾರು 200 ಮೀಟರ್ ದೂರದಲ್ಲಿ ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ತೆರಳಿದರೆ ಜಲಪಾತದ ಬಳಿಗೆ ಹೋಗಬಹುದಾಗಿದೆ. ಮೊದಲಿಗೆ ತೆರಳುವವರು ಸ್ಥಳೀಯರನ್ನು ಜತೆಗೆ ಮಾರ್ಗದರ್ಶಕರನ್ನಾಗಿ ಕರೆದೊಯ್ಯುವುದು ಒಳ್ಳೆಯದು. ಇಲ್ಲದೆ ಹೋದರೆ ರಸ್ತೆ ಹುಡುಕಿಕೊಂಡು ಹೋಗುವುದೇ ದೊಡ್ಡದೊಂದು ಕೆಲಸವಾಗಿ ಬಿಡುತ್ತದೆ. ಮಳೆಗಾಲದಲ್ಲಿ ಅದರಲ್ಲೂ ಮಳೆಯಿಂದ ಸೃಷ್ಠಿಯಾಗುವ ಈ ಜಲಪಾತ ಅಲ್ಪಾಯುಷಿಯಾಗಿರುವುದರಿಂದ ಬಿಸಿಲಿನ ಪ್ರಕರತೆ ಹೆಚ್ಚಾದಂತೆ ತನ್ನ ವೈಭವ ಕಳೆದುಕೊಳ್ಳುವುದರಿಂದ ಸಕಾಲದಲ್ಲಿ ತೆರಳಿ ಜಲಪಾತದ ವೈಭವ ನೋಡಿ ಹಿಂತಿರುಗುವುದು ಜಾಣತನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+