ಈ ವೀಕೆಂಡ್‌ಗೆ ಧರ್ಮಸ್ಥಳ ಟ್ರಿಪ್ ಪ್ಲಾನ್: ದೇವರ ಜೊತೆಗೆ ದೇವಲೋಕದ ಸೌಂದರ್ಯ ದರ್ಶನ..!
ಮಂಗಳೂರು, ಡಿಸೆಂಬರ್ 09: ಈ ವೀಕೆಂಡ್‌ಗೆ ಯಾವ ಕಡೆ ಪ್ರವಾಸ ಹೋಗಲಿ ಅಂತಾ ಯೋಚನೆ ಮಾಡುತ್ತಿದ್ದೀರಾ..? ಈ ಬಾರಿ ಎಂಜಾಯ್ ಮಾಡುವ ಸ್ಥಳಗಳಿಗಿಂತ ಕುಟುಂಬಸ್ಥರ ಜೊತೆ ಸಮಯ ಕಳೆಯಬೇಕು, ತಂದೆ-ತಾಯಿಗೆ ಇಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗಬೇಕು ಆಂತಾ ಅಂದುಕೊಳ್ಳುತ್ತೀದ್ದೀರಾ..? ಹಾಗದರೆ ಈ ಭಾನುವಾರ ಕರಾವಳಿಯತ್ತ ಮುಖಮಾಡಿ.
ಕರಾವಳಿಯಲ್ಲಿ ಹಲವಷ್ಟು ಪುಣ್ಯಕ್ಷೇತ್ರಗಳಿದ್ದು ಈ ವಾರದ ವೀಕೆಂಡ್ ಕುಟುಂಬಸ್ಥರ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡಿ. ಪ್ರವಾಸದ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ಎಂದೋ ಕಟ್ಟಿಕೊಂಡ ಹರಕೆಗಳು ಸಹ ತೀರಿದಂತಾಗುತ್ತದೆ. ಹಾಗಾದರೆ ಕರಾವಳಿಯಲ್ಲಿ ಈ ಸಮಯದಲ್ಲಿ ಯಾವ ದೇವಸ್ಥಾನಕ್ಕೆ ಭೇಟಿ ನೀಡಿಬಹುದು ಎನ್ನುವ ಪ್ರಶ್ನೆ ಇದ್ದರೆ, ಇಲ್ಲಿದೆ ಓದಿ ನಿಮ್ಮ ಉತ್ತರ.

ಈ ವೀಕೆಂಡ್‌ಗೆ ನೀವು ಕುಟುಂಬಸ್ಥರ ಜೊತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ. ಯಾಕೆಂದರೆ ಈ ಸಮಯದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡುವುದರಿಂದ ಶ್ರೀ ಮಂಜುನಾಥನ ದರ್ಶನದ ಜೊತೆಗೆ ದೇವಲೋಕದ ಅನುಭವ ನೀಡುವ ಧರ್ಮಸ್ಥಳದ ಸೌಂದರ್ಯವನ್ನು ಸಹ ಸವಿಯಬಹುದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈಗಾಗಲೇ ಲಕ್ಷ ದೀಪೋತ್ಸವ ಆರಂಭವಾಗಿದ್ದು, ಎಲ್ಲೆಲ್ಲೂ ದೀಪಾಲಂಕಾರ ಕಣ್ಣುಕುಕ್ಕುತ್ತಿದೆ.
ಶ್ರೀ ಮಂಜುನಾಥೇಶ್ವರ ದೇವಾಲಯ ಹಾಗೂ ಸುತ್ತಲಿನ ಕಟ್ಟಡಗಳು, ಧರ್ಮಸ್ಥಳ ಮುಖ್ಯದ್ವಾರ ಹಾಗೂ ಧರ್ಮಸ್ಥಳಕ್ಕೆ ಸಂಬಂಧಿಸದ ಎಲ್ಲಾ ಕಟ್ಟಗಳಿಗೂ ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ಮಾದರಿಯಲ್ಲಿ ಅಲಂಕಾರ ಮಾಡಲಾಗಿದ್ದು, ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ದೀಪೋತ್ಸವ ಹಿನ್ನೆಲೆಯಲ್ಲಿ ಬೆಳ್ತಂಗಡಿ, ಉಜಿರೆಯಿಂದಲೇ ದೀಪಾಲಂಕಾರ ಆರಂಭವಾಗಿದ್ದು, ನೋಡುಗರು ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಧರ್ಮಸ್ಥಳದಲ್ಲಿ ಈ ವೀಕೆಂಡ್ ವಿಶೇಷವೇನು..?
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೀಪೋತ್ಸವದ ಕಾರ್ಯಕ್ರಗಳು ಡಿಸೆಂಬರ್ 8ರಿಂದ ಆರಂಭಗೊಂಡಿದ್ದು ಡಿಸೆಂಬರ್ 12ರವರೆಗೆ ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ಮಂಜುನಾಥಸ್ವಾಮಿಯ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಈಗಾಗಲೇ ಡಿಸೆಂಬರ್ 8ರ ಶುಕ್ರವಾರ ಧರ್ಮಸ್ಥಳದ ಹೊಸಕಟ್ಟೆ ಉತ್ಸವ ನಡೆದಿದ್ದು, ಈ ವೀಕೆಂಡ್ ಅಂದರೆ ಶನಿವಾರ ಮತ್ತು ಭಾನುವಾರ, ಧರ್ಮಸ್ಥಳದ ಕೆರೆಕಟ್ಟೆ ಉತ್ಸವ ಮತ್ತು ಲಲಿತೋದ್ಯಾನ ಉತ್ಸವ ನಡೆಯಲಿದೆ.
ಈ ಎಲ್ಲಾ ಉತ್ಸವದಲ್ಲಿ ಭಕ್ತರು ಭಾಗಿಯಾಗಬಹುದಾಗಿದೆ. ವೀಕೆಂಡ್ ಮುಗಿದು ಸೋಮವಾರ ಒಂದು ದಿನ ಹೆಚ್ಚಿಗೆ ಕ್ಷೇತ್ರದಲ್ಲಿ ಇದ್ದರೆ ಒಂದು ವಿಶೇಷ ಕಾರ್ಯಕ್ರಮಕ್ಕೆ ನೀವು ಸಾಕ್ಷಿಯಾಗಬಹುದಾಗಿದೆ. ಡಿಸೆಂಬರ್ 11 ಸೋಮವಾರದಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಹಲವಾರು ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆದುಕೊಂಡು ಬಂದಿದ್ದು, ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ, ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಡಾ. ಎಂ. ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಈ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಿಂದ ಸುಮಾರು 300 ಕಿಲೋ ಮೀಟರ್ ಇರುವ ಧರ್ಮಸ್ಥಳಕ್ಕೆ ಆರು ಗಂಟೆ ಸಮಯ ಅವಧಿಯಲ್ಲಿ ತಲುಪಬಹುದಾಗಿದೆ. ಇಲ್ಲಿಗೆ ಸಾರಿಗೆ ಬಸ್ ವ್ಯವಸ್ಥೆ ಕೂಡ ಇದ್ದು, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ನೇರವಾಗಿ ಧರ್ಮಸ್ಥಳ ದೇವಾಲಯದ ಬಳಿ ತೆರಳಬಹುದಾಗಿದೆ. ಇನ್ನು ಧರ್ಮಸ್ಥಲದ ಕಡೆಗೆ ಪ್ರವಾಸ ಬಂದವರು ಶ್ರೀ ಕ್ಷೇತ್ರ ಮಾತ್ರವಲ್ಲದೇ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ, ಉಜಿರೆ ಸಮೀಪದ ಸೂರ್ಯ ದೇವಸ್ಥಾನ, ಸೌತಡ್ಕ ಗಣಪತಿ ದೇವಸ್ಥಾನ ಹಾಗೂ ಸಮೀಪದಲ್ಲೇ ಇರುವ ಇತರ ದೇವಸ್ಥಾನಗಳಿಗೂ ಕೂಡ ಭೇಟಿ ನೀಡಬಹುದಾಗಿದೆ.












Click it and Unblock the Notifications