ಸಿಗಂದೂರು ದೇವಾಲಯಕ್ಕೆ ಹೋಗುವ ಭಕ್ತರ ಗಮನಕ್ಕೆ
ಶಿವಮೊಗ್ಗ, ಜೂನ್ 14; ಈ ಬಾರಿಯ ಬೇಸಿಗೆ ಜನರ ನೆತ್ತಿಯ ಸುಡುತ್ತಿದೆ. ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಕುಸಿತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಲ್ಲಿಯೂ ನೀರಿನ ಮಟ್ಟ ಕುಸಿತ ಕಂಡಿದೆ.
ಲಿಂಗನಮಕ್ಕಿ ಹಿನ್ನೀರಿನಲ್ಲಿ ಸಾಗಿ ಸಿಗಂದೂರು ಚೌಡೇಶ್ವರಿ ದೇವಾಲಯ ಸಂಪರ್ಕಿಸುವ ಹೊಳೆಬಾಗಿಲು ಲಾಂಚ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಲಾಂಚ್‌ನಲ್ಲಿ ಜನರು ಮಾತ್ರ ಸಂಚಾರ ನಡೆಸಬಹುದು ಎಂದು ಹೇಳಿದೆ.

ಈ ಆದೇಶ ಜೂನ್ 14ರ ಬುಧವಾರದಿಂದಲೇ ಜಾರಿಗೆ ಬಂದಿದೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆದ್ದರಿಂದ ಕೆಲವು ದಿನಗಳಿಂದ ಲಾಂಚ್ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದ್ದರಿಂದ ವಾಹನವನ್ನು ಲಾಂಚ್‌ನಲ್ಲಿ ಸಾಗಿಸುವುದು ನಿರ್ಬಂಧಿಸಲಾಗಿದೆ.
ಲಾಂಚ್‌ನಲ್ಲಿ ಜನರು ಮಾತ್ರ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಸಿಗಂದೂರು ದೇವಾಲಯಕ್ಕೆ ತೆರಳುವ ನೂರಾರು ಭಕ್ತರು, ತುಮರಿ, ಬ್ಯಾಕೋಡು ಭಾಗದ ಜನರ ದಿನನಿತ್ಯದ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಆತಂಕವಿದೆ.
ಮಳೆಯ ಕೊರತೆ; ಈ ಬಾರಿಯ ಬೇಸಿಗೆ ಮತ್ತು ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆಯ ಕೊರತೆಯ ಕಾರಣದಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಡ್ಯಾಂನಲ್ಲಿ ಮುಳುಗಿದ್ದ ಮಡೆನೂರು ಜಲಾಶಯ ಸಹ ಕಾಣಿಸುತ್ತಿದೆ.
ಲಾಂಚ್‌ನ ಪ್ಲಾಟ್‌ಫಾರಂನಿಂದ ನೀರು ಬಹಳ ದೂರದಲ್ಲಿದೆ. ಆದ್ದರಿಂದ ಲಾಂಚ್‌ನಲ್ಲಿ ವಾಹನವನ್ನು ಸಾಗಣೆ ಮಾಡಿದರೆ ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಸಾಗಣೆಗೆ ನಿರ್ಬಂಧ ಹೇರಿ, ಜನರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುವ ಮಳೆಯೇ ಲಿಂಗನಮಕ್ಕಿ ಜಲಾಶಯಕ್ಕೆ ಆಧಾರ. ಆದರೆ ಈ ಬಾರಿ ಮಳೆಯ ಕೊರತೆ ಎದುರಾಗಿದೆ. ಈ ಭಾಗದಲ್ಲಿ ಉತ್ತಮವಾಗಿ ಮಳೆಯಾದರೆ ಲಾಂಚ್‌ನಲ್ಲಿ ಮತ್ತೆ ವಾಹನ ಸಂಚಾರ ಆರಂಭಿಸಲಾಗುತ್ತದೆ ಎಂಬ ಮಾಹಿತಿ ಇದೆ.
ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಇಳಿಕೆಯಾಗಿದ್ದು ಮಲೆನಾಡಿನ ಮೊದಲ ಅಣೆಕಟ್ಟು ಎಂಬ ಹೆಗ್ಗಳಿಕೆಯ ಮಡೆನೂರು ಡ್ಯಾಂ ಕಾಣುತ್ತಿದೆ. ನೂರಾರು ಪ್ರವಾಸಿಗರು ಕಳೆದ ವಾರ ಡ್ಯಾಂಗೆ ಭೇಟಿ ನೀಡಿ, ಅದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆದರೆ ಈಗ ಡ್ಯಾಂ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.
ಪರ್ಯಾಯ ಮಾರ್ಗದ ವಿವರ; ಜೂನ್ 14ರಿಂದಲೇ ಸಿಗಂದೂರು ಚೌಡೇಶ್ವರಿ ದೇವಾಲಯ ಸಂಪರ್ಕಿಸುವ ಹೊಳೆಬಾಗಿಲು ಲಾಂಚ್‌ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ತುಮರಿ ಭಾಗದಿಂದ ಸಾಗರಕ್ಕೆ ತಲುಪುವ ಮಾರ್ಗ ಇದಾಗಿತ್ತು. ಸ್ಥಳೀಯ ಗ್ರಾಮದ ಜನರು ಲಾಂಚ್‌ನಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗಿ ಸಾಗರಕ್ಕೆ ತಲುಪುತ್ತಿದ್ದರು. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸಹ ಲಾಂಚ್‌ನಲ್ಲಿ ಹೋಗುತ್ತಿತ್ತು.
ಈಗ ಲಾಂಚ್‌ನಲ್ಲಿ ವಾಹನ ನಿರ್ಬಂಧಿಸಿದ ಕಾರಣ ಸ್ಥಳೀಯರು ಸಾಗರ ಪಟ್ಟಣ ತಲುಪಲು ಸುತ್ತಿ ಬಳಸಿ ಹೋಗಬೇಕು. ಇದರಿಂದಾಗಿ ಹಣ, ಸಮಯ ಎರಡೂ ವ್ಯರ್ಥವಾಗಲಿದೆ. ಲಾಂಚ್ ಬಳಕೆ ಮಾಡದೇ ಸಿಗಂದೂರು ತಲುಪಲು ಪರ್ಯಾಯ ಮಾರ್ಗವಿದೆ. ದೇವಾಲಯಕ್ಕೆ ಬರುವ ಭಕ್ತರು ಈ ಮಾರ್ಗದ ಮೂಲಕ ವಾಹನದಲ್ಲಿ ಸಾಗಬಹುದಾಗಿದೆ.
ಹೊಸನಗರ-ನಗರ-ಸಂಪೆಕಟ್ಟೆ-ನಿಟ್ಟೂರು ಮಾರ್ಗವಾಗಿ ಸಿಗಂದೂರು ತಲುಪಬಹುದು. ಈ ಮಾರ್ಗದಲ್ಲಿ ಸುತ್ತಿ ಬಳಸಿ ಸಾಗಲು ಸಮಯ ಹೆಚ್ಚು ಬೇಕಾಗುತ್ತದೆ. ಸರಿಯಾಗಿ ಮಳೆ ಸುರಿದು ಡ್ಯಾಂಗೆ ನೀರು ಹರಿದು ಬರುವ ತನಕ ಪ್ರವಾಸಿಗರು, ದೇವಾಲಯಕ್ಕೆ ಹೋಗುವ ಭಕ್ತರು ಈ ಸಂಕಷ್ಟ ಅನುಭವಿಸುವುದು ತಪ್ಪುವುದಿಲ್ಲ.












Click it and Unblock the Notifications