ರಂಗನತಿಟ್ಟಿಗೆ ಮೆರಗು ತಂದ ಪಕ್ಷಿ ಋತು..ಈಗ ಹಕ್ಕಿಗಳದ್ದೇ ಕಲರವ: ಒಮ್ಮೆ ಭೇಟಿ ನೀಡಿ
ಮಂಡ್ಯ, ನವೆಂಬರ್ 25: ಪಕ್ಷಿಪ್ರಿಯರಿಗೆ ರಸದೌತಣ ನೀಡುವ ಸುಂದರ ತಾಣವಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ಸೇರುವ ರಂಗನತಿಟ್ಟು ಪಕ್ಷಿಧಾಮದಲ್ಲೀಗ ಪಕ್ಷಿಗಳ ಕಲರವ ಜೋರಾಗಿದೆ. ಇದು ಪಕ್ಷಿಗಳ ಆಗಮನದ ಋತುವಾಗಿರುವುದರಿಂದ ಚಳಿಯನ್ನು ಸಹಿಸದ ಬಹಳಷ್ಟು ಪಕ್ಷಿಗಳು ಇತ್ತ ಆಗಮಿಸಲಾರಂಭಿಸಿದ್ದು, ಗೂಡುಕಟ್ಟಿ ಮರಿಮಾಡಿ ತನ್ನ ಸಂತಾನೋತ್ಪತ್ತಿ ಮಾಡಿಕೊಂಡು ಹಿಂತಿರುಗುವ ಭರದಲ್ಲಿರುವುದು ಕಂಡು ಬರುತ್ತಿದೆ. ಹೀಗಾಗಿ ಇದೀಗ ರಂಗನತಿಟ್ಟಿಗೆ ತೆರಳಿದವರಿಗೆ ಸುಂದರ ಪಕ್ಷಿಲೋಕ ತೆರೆದುಕೊಳ್ಳುತ್ತದೆ.
ಸಾಮಾನ್ಯವಾಗಿ ಪಕ್ಷಿ ವೀಕ್ಷಣೆಗೆ ಈ ಸಮಯ ಸೂಕ್ತವಾಗಿರುತ್ತದೆ. ಬಹುತೇಕ ಪಕ್ಷಿಗಳು ಇದೇ ಸಮಯದಲ್ಲಿ ಇಲ್ಲಿಗೆ ಬರುತ್ತವೆ. ಮತ್ತು ಇಲ್ಲಿರುವ ಬಿದಿರು ಮೆಳೆಗಳು, ಮರಗಿಡಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿ ಗುಟುಕು ನೀಡಿ ಅವು ರೆಕ್ಕೆಪುಕ್ಕ ಬಂದು ಹಾರಲು ಕಲಿಯುತ್ತಿದ್ದಂತೆಯೇ ಬಂದಿ ದಿಕ್ಕಿಗೆ ಮರಳಿ ಪಯಣ ಆರಂಭಿಸುತ್ತವೆ. ಇದು ಪ್ರಕೃತಿ ನಿಯಮವಾಗಿದ್ದು, ಇದನ್ನು ನೋಡುವುದು ಒಂಥರಾ ಮಜಾ ಎನಿಸುತ್ತದೆ. ಇದೀಗ ಇಲ್ಲಿಗೆ ಆಗಮಿಸಿರುವ ಪಕ್ಷಿಗಳ ಗಣತಿಯನ್ನು ಮಾಡಲಾಗಿದ್ದು, ಸುಮಾರು 72 ಜಾತಿಯ ನೂರಾರು ಪಕ್ಷಿಗಳು ಆಗಮಿಸಿರುವುದು ವಿಶೇಷವಾಗಿದ್ದು, ಸುಮಾರು 3300ಕ್ಕಿಂತ ಹೆಚ್ಚು ಪಕ್ಷಿಗಳು ಇಲ್ಲಿವೆ ಎಂದು ಹೇಳಲಾಗಿದೆ.

ಹಾಗೆನೋಡಿದರೆ ಪ್ರಕೃತಿ ನಡುವೆಯಿದ್ದು, ಪಕ್ಷಿಗಳನ್ನು ನೋಡುತ್ತಾ ಅವುಗಳ ಚಟುವಟಿಕೆಯನ್ನು ಗಮನಿಸಿ ಆಸ್ವಾದಿಸುತ್ತಾ ಖುಷಿಯಾಗಿ ಸಮಯ ಕಳೆಯುವುದು ಆ ಮೂಲಕ ತಮ್ಮೆಲ್ಲ ಜಂಜಾಟವನ್ನು ಬದಿಗೆ ಸರಿಸಲು ರಂಗನತಿಟ್ಟು ಒಂದು ಸುಂದರ ಮತ್ತು ನೆಮ್ಮದಿಯ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಬಿಡುವಿನ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ವಾರ್ಷಿಕವಾಗಿ ಸರಾಸರಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಸುಮಾರು ಮೂರೂವರೆ ಲಕ್ಷ ಎಂದು ಹೇಳಲಾಗಿದೆ.
ಪಕ್ಷಿಗಳ ಬೀಡಿಗೆ ಬಂದ ಭೀಮರಾಜ
ಪ್ರಸಕ್ತ ವರ್ಷ ಮೈಸೂರು ವನ್ಯಜೀವಿ ವಿಭಾಗದ ಮೂಲದ ಪ್ರಕಾರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಒಟ್ಟು 1,69,373 ಪ್ರವಾಸಿಗರು ಭೇಟಿ ನೀಡಿದ್ದು, ಇದರಲ್ಲಿ 1,68,141 ಭಾರತೀಯರು ಹಾಗೂ 1232 ವಿದೇಶಿ ಪ್ರವಾಸಿಗರು ಇದ್ದಾರೆ. ಇನ್ನು ಪಕ್ಷಿ ಋತು ಆರಂಭವಾದ ಬಳಿಕ ಬಂದ ಪ್ರವಾಸಿಗರ ಸಂಖ್ಯೆಯನ್ನು ನೋಡುವುದಾದರೆ ಇಲ್ಲಿಯವರೆಗೆ 25,022 ಪ್ರವಾಸಿಗರು ಭೇಟಿ ನೀಡಿದ್ದು ಇದರಲ್ಲಿ 24,707 ಭಾರತೀಯರು ಹಾಗೂ 315 ವಿದೇಶಿ ಪ್ರವಾಸಿಗರು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಪಕ್ಷಿ ಋತುವಿನಲ್ಲಿ ರಂಗತಿಟ್ಟಿಗೆ ಯಾವುದೆಲ್ಲ ಪಕ್ಷಿಗಳು ಆಗಮಿಸಿವೆ ಎನ್ನುವುದನ್ನು ನೋಡಿದ್ದೇ ಆದರೆ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಭೀಮರಾಜ (ಗ್ರೇಟರ್ ರಾಕೆಟ್ ಟೈಯ್ಲ್ ಡ್ ಡ್ರೋಂಗೋ) ಪಕ್ಷಿ ಈ ಬಾರಿ ಆಗಮಿಸಿರುವುದು ಗಮನಾರ್ಹವಾಗಿದೆ. ಇದರ ವಿಶೇಷ ಏನೆಂದರೆ ಬೇರೆ ಬೇರೆ ಧ್ವನಿಗಳಲ್ಲಿ ಕೂಗುವ ಸಾಮರ್ಥ್ಯ ಹೊಂದಿದೆ.
ಮೇಲ್ನೋಟಕ್ಕೆ ಕಪ್ಪು ಬಣ್ಣದ ಉದ್ದ ಬಾಲದ ಈ ಪಕ್ಷಿ ರಂಗನತಿಟ್ಟಿನ ಆಕರ್ಷಣೆಯಾಗಿದೆ ಎಂದರೂ ತಪ್ಪಾಗಲಾರದು. ಇದರ ಜತೆಗೆ ಸ್ಪಾಟ್ ಬಿಲ್ಡ್ ಫೆಲಿಕನ್, ಇಂಡಿಯನ್ ಕಾರ್ಮೊರೆಂಟ್, ಪೈಡ್ ಕಿಂಗ್‌ಫಿಷರ್ಸ್, ಸ್ಟಿಕ್ ಥ್ರೋಟೆಡ್ ಸ್ವಾಲೋ, ಯುರೇಷಿಯನ್ ಸ್ಪೂನ್‌ಬಿಲ್ ಪಕ್ಷಿಗಳು ಬಂದಿದ್ದು ಸಂತಾನೋತ್ಪತ್ತಿ ಮಾಡುವುದರಲ್ಲಿ ತಲ್ಲೀನವಾಗಿವೆ.
ಎಲ್ಲಿಂದಲೋ ಬಂದ ಹಕ್ಕಿಗಳಿಗೆ ಆಶ್ರಯ
ಇಷ್ಟೇ ಅಲ್ಲದೆ, ಬ್ಲೂ ಕ್ಯಾಪ್ಡ್ ರಾಕ್ ಥ್ರಷ್, ಫಾರೆಸ್ಟ್ ವ್ಯಾಗ್ಟೇಲ್, ಬೂಟ್ ಬ್ಯಾಬ್ಲರ್, ಇಂಡಿಯನ್ ಪಿಟ್ಟಾ (ನವರಂಗ), ವುಡ್ ಸ್ಯಾಂಡ್ ಪೈಪರ್ ಮೊದಲಾದ ವಲಸೆ ಪಕ್ಷಿಗಳಲ್ಲದೆ, ಕಿಂಗ್‌ಫಿಷರ್, 4 ಜಾತಿಯ ಹೆರಾನ್, ಲೆಸ್ಸರ್ ಫಿಶ್ ಎಗೇಲ್, ಬ್ರಾಹ್ಮಿನಿ ಕೈಟ್, ರಿವರ್ ಟರ್ನ್, ಓರಿಯೆಂಟಲ್ ಡಾರ್ಟರ್, ಇಂಡಿಯನ್ ಗ್ರೇ ಹಾರ್ನ್ಬಿಲ್, ರೆಡ್-ವಿಸ್ಕರ್ಡ್ ಬುಲ್ ಬುಲ್, ಕಾಮನ್ ಹೂಪೋ ಸೇರಿದಂತೆ ಹಲವು ಪಕ್ಷಿಗಳು ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ. ಮರಗಿಡಗಳಲ್ಲಿ ಪಕ್ಷಿಗಳ ಗೂಡು ಕಂಡು ಬರುತ್ತಿದ್ದು ಸುಮಾರು 350ಕ್ಕೂ ಹೆಚ್ಚು ಪಕ್ಷಿಗಳ ಗೂಡುಗಳಿವೆಯಂತೆ.
ರಂಗನತಿಟ್ಟಿನ ಬಗ್ಗೆ ಹೇಳುವುದಾದರೆ ಇದು ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಪಕ್ಷಿಧಾಮ ಎಂಬ ಖ್ಯಾತಿ ಪಡೆದಿದೆ. ಇಲ್ಲಿಗೆ ವಿವಿಧ ದೇಶಗಳಿಂದ ಯಾವುದೇ ಗಡಿಪಹರೆಯನ್ನು ಲೆಕ್ಕಿಸದೆ ನೂರಾರು ವರ್ಷಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತಿವೆ. ಹಾಗೆ ಬರುವ ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಯ ಬಳಿಕ ಸ್ವಸ್ಥಾನಕ್ಕೆ ಮರಳುತ್ತವೆ. ಇದರಲ್ಲಿ ದೂರದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಸೈಬೀರಿಯಾ, ರಷ್ಯಾ, ಅಮೇರಿಕಾ, ನೈಜೀರಿಯಾಗಳಿಂದ ಬರುವ ಪಕ್ಷಿಗಳು ಸೇರಿವೆ..
ಸಲೀಂ ಅಲಿಯವರ ಆಕರ್ಷಿಸಿದ್ದ ಪಕ್ಷಿಧಾಮ
ಇತಿಹಾಸದ ಮೆಲುಕು ಹಾಕಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿಗೆ ಬಂದಿದ್ದ ಖ್ಯಾತ ಪಕ್ಷಿಪ್ರೇಮಿ, ಪಕ್ಷಿ ಶಾಸ್ತ್ರಜ್ಞ ಸಲೀಂ ಆಲಿಯವರು ರಂಗನತಿಟ್ಟಿನಲ್ಲಿ ವಿವಿಧ ಬಗೆಯ ಪಕ್ಷಿಗಳು ವಾಸ್ತವ್ಯ ಹೂಡುತ್ತಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿದ್ದರು. ರಂಗನತಿಟ್ಟಿನ ಪ್ರಾಕೃತಿಕ ಸೌಂದರ್ಯ ಹಾಗೂ ಅಲ್ಲಿನ ಹೆಮ್ಮರಗಳಲ್ಲಿ ಸಾವಿರಾರು ಪಕ್ಷಿಗಳು ನೆಲೆವೂರಿದನ್ನು ಕಂಡ ಸಲೀಂ ಅಲಿಯವರಿಗೆ ಇದನ್ಯಾಕೆ ಪಕ್ಷಿಧಾಮವೆಂದು ಘೋಷಿಸಬಾರದು? ಎಂಬ ಪ್ರಶ್ನೆ ಉದ್ಭವಿಸಿತ್ತು. ತಡಮಾಡದೆ ಅವರು ರಂಗನತಿಟ್ಟನ್ನು ರಕ್ಷಿತ ಪಕ್ಷಿಧಾಮ ಎಂದು ಘೋಷಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಇವರ ಸಲಹೆಯನ್ನು ಪರಿಗಣಿಸಿದ ಸರ್ಕಾರ 1940ರಲ್ಲಿ ರಂಗನತಿಟ್ಟನ್ನು ಪಕ್ಷಿಧಾಮವನ್ನಾಗಿ ಘೋಷಿಸಿ ಆದೇಶ ಹೊರಡಿಸಿತ್ತು.
ಇಲ್ಲಿ ದೋಣಿಯಲ್ಲಿ ಕುಳಿತು ಕಾವೇರಿ ನದಿಯಲ್ಲಿ ವಿಹರಿಸುತ್ತಾ ಪಕ್ಷಿ ವೀಕ್ಷಣೆ ಮಾಡಲು ಇಚ್ಚಿಸುವವರಿಗಾಗಿ ಇಲ್ಲಿ ದೋಣಿ ವಿಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಶ್ರೀರಂಗಪಟ್ಟಣದ ಬಳಿಯಿರುವ ರಂಗನತಿಟ್ಟಿಗೆ ಭೇಟಿ ನೀಡಬಹುದು. ರಂಗನತಿಟ್ಟು ಮೈಸೂರು ಮಂಡ್ಯ ಹೆದ್ದಾರಿ ನಡುವೆ ಸಿಗುವ ಶ್ರೀರಂಗಪಟ್ಟಣದಿಂದ 4ಕಿ,ಮೀ., ಮೈಸೂರಿನಿಂದ 19ಕಿ.ಮೀ. ಹಾಗೂ ಬೆಂಗಳೂರಿನಿಂದ 128ಕಿ.ಮೀ ದೂರದಲ್ಲಿದೆ.












Click it and Unblock the Notifications