South Western Railway: ಈ ನಿಲ್ದಾಣಗಳಲ್ಲಿ ರೈಲು ತಾತ್ಕಾಲಿಕ ನಿಲುಗಡೆ ದಿನಾಂಕಗಳ ವಿಸ್ತರಣೆ-ಮಾಹಿತಿ, ವಿವರ
ಬೆಂಗಳೂರು, ಏಪ್ರಿಲ್, 16: ಭಾರತೀಯ ರೈಲ್ವೆ ವಿಭಾಗಗಳಲ್ಲಿ ಆಗಾಗ ಬದಲಾವಣೆಗಳಾಗುತ್ತಲೇ ಇರುತ್ತವೆ. ಇನ್ನು ಈ ನಿಲ್ದಾಣಗಳಲ್ಲಿ ರೈಲು ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ವಿವರ ಇಲ್ಲಿದೆ ಗಮನಿಸಿ.
ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿದ್ದ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದಿನ 6 ತಿಂಗಳವರೆಗೆ ನೈರುತ್ಯ ರೈಲ್ವೆ ಮುಂದುವರೆಸಿದೆ. ದೇವನಗೋದಿ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಯನ್ನು 3 ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.

ವಿಜಯಪುರ-ಮಂಗಳೂರು ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ಬೀರೂರು ನಿಲ್ದಾಣದಲ್ಲಿ 2 ನಿಮಿಷ ನಿಲ್ಲುವ ವ್ಯವಸ್ಥೆ ತಾತ್ಕಾಲಿಕ ಇತ್ತು. ಯಶವಂತಪುರ-ಸಿಂಧನೂರು ನಿಲ್ದಾಣಗಳ ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ರಾಮಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ವ್ಯವಸ್ಥೆ ತಾತ್ಕಾಲಿಕ ಇತ್ತು. ಇದೀಗ ಏಪ್ರಿಲ್ 16ರವರೆಗೂ ಇದ್ದ ಈ ಅವಧಿಯನ್ನು ಅಕ್ಟೋಬರ್ 16ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಮಾರಿಕೊಪ್ಪಂ ನಿಲ್ದಾಣಗಳ ನಡುವೆ ಸಂಚರ ಮಾಡುವ ಮೆಮು ವಿಶೇಷ ರೈಲು ಮತ್ತು ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ನಡುವೆ ನಿತ್ಯ ಓಡುವ ಮೆಮು ಎಕ್ಸ್‌ಪ್ರೆಸ್ ರೈಲುಗಳಿಗೆ ದೇವನಗೊಂದಿ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಜುಲೈ 16ರವರೆಗೆ ವಿಸ್ತರಣೆ ಮಾಡಲಾಗಿದೆ.
ಮತ್ತೊಂದೆಡೆ ಪ್ರಯಾಣಿಕರ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ದಾನಾಪುರ ನಿಲ್ದಾಣಗಳ ನಡುವೆ ಸಂಚಾರ ಮಾಡುವ 10 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಅಸ್ತತ್ವದಲ್ಲಿರುವ ಮಾರ್ಗ, ನಿಲುಗಡೆ ಮತ್ತು ಸಮಯದೊಂದಿಗೆ ಜುಲೈವರೆಗೆ ಮುಂದುವರೆಸಲು ಪೂರ್ವ ಮಧ್ಯ ರೈಲ್ವೆ ವಲಯ ನಿರ್ಧಾರ ಮಾಡಿದೆ. ಹೀಗೆ ರೈಲ್ವೆ ವಿಭಾಗಗಳಲ್ಲಿ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತವೆ.
ರೈಲು ಸಂಚಾರ ಭಾಗಶಃ ರದ್ದು: ಹಳಿ ಅಳವಡಿಕೆ, ವಿದ್ಯತ್ ಅಳವಡಿಕೆ ಕಮಾಗಾರಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತಿದೆ. ಹಾಗೆಯೇ ಇದೀಗ ಮಡಗಾಂವ್-ಕುಮಟಾ ವಿಭಾಗದ ನಡುವಿನ ರೈಲ್ವೆ ಕಾಮಗಾರಿ ಹಿನ್ನೆಲೆ ಈ ಭಾಗದಲ್ಲಿ ರೈಲು ಸೇವೆಯನ್ನು ರದ್ದು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ಎಲ್ಲಿವರೆಗೂ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಏಪ್ರಿಲ್ 18ರಂದು ಮಧ್ಯಾಹ್ನ 12:10 ಗಂಟೆಯಿಂದ 3:10 ಗಂಟೆವರೆಗೂ 3 ಗಂಟೆ ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಇದರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ರೈಲು ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.
ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ರೈಲು (ರೈಲು ಸಂಖ್ಯೆ 06602) ಏಪ್ರಿಲ್ 18ರಂದು ಕಾರವಾರ ನಿಲ್ದಾಣದವರೆಗೂ ಸಂಚಾರ ಮಾಡಲಿದೆ. ಕಾರವಾರ-ಮಡಗಾಂವ್ ವಿಭಾಗದ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಲಿದೆ. ಇನ್ನು ಮಡಗಾಂವ್ - ಮಂಗಳೂರು ಸೆಂಟ್ರಲ್ ವಿಶೇಷ ರೈಲು (ರೈಲು ಸಂಖ್ಯೆ 06601) ವಿಶೇಷ ರೈಲು ಸಂಚಾರವು ಏಪ್ರಿಲ್ 18ರಂದು ಮಡಗಾಂವ್ - ಕಾರವಾರ ವಿಭಾಗದ ನಡುವೆ ಭಾಗಶಃ ರದ್ದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications