ಕೋಲಾರ; ಪ್ರವಾಸಿ ತಾಣಗಳ ಅಭಿವೃದ್ಧಿ ಕಾರ್ಯಕ್ಕೆ ವೇಗ
ಕೋಲಾರ, ಆಗಸ್ಟ್ 03; ಕೋಲಾರ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಮುಖ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೋಲಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದ ಅವರು. ಪ್ರವಾಸೋದ್ಯಮ ಇಲಾಖೆಯು ಜನಮಾನಸವನ್ನು ಮುಟ್ಟುವಲ್ಲಿ ಹಿಂದುಳಿದಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಅಭಿವೃದ್ಧಿ ಚುರುಕುಗೊಳಿಸಬೇಕು ಎಂದರು.

ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ಅಂತರಗಂಗೆ ಬೆಟ್ಟ, ಚಿಕ್ಕ ತಿರುಪತಿ, ಬಂಗಾರು ತಿರುಪತಿ, ಮೊದಲಾದ ಧಾರ್ಮಿಕ ಹಾಗೂ ಚಾರಣ ಕ್ಷೇತ್ರಗಳಲ್ಲಿ ಆಕರ್ಷಕ ಮಳಿಗೆಗಳು, ಯಾತ್ರಾರ್ಥಿಗಳು ಉಳಿದುಕೊಳ್ಳಲು ಯಾತ್ರಿ ನಿವಾಸ ಮುಂತಾದ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ಪ್ರವಾಸಿಗರಿಗೆ ಅನುಕೂಲ; ಪ್ರವಾಸಿ ತಾಣಗಳಲ್ಲಿ ಶುದ್ಧ ಕುಡಿಯುವ ನೀರು, ಪ್ರವಾಸಿ ಸ್ಥಳಗಳನ್ನು ತಲುಪುವ ರಸ್ತೆಗಳ ಅಭಿವೃದ್ಧಿ, ಪ್ರಮುಖ ರಸ್ತೆಗಳಲ್ಲಿ ಪ್ರವಾಸಿ ಸ್ಥಳಗಳಿಗೆ ತೆರಳುವ ಮಾರ್ಗ ನಕ್ಷೆಗಳು ಮುಂತಾದ ಅತ್ಯಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ವಿಶೇಷವಾಗಿ ಅಂತರಗಂಗೆ ಬೆಟ್ಟವು ಧಾರ್ಮಿಕವಾಗಿ ಹಾಗೂ ಚಾರಣಿಗರ ನೆಚ್ಚಿನ ಪ್ರವಾಸಿ ತಾಣವಾಗಿರುವುದರಿಂದ ಈ ಪ್ರವಾಸಿ ತಾಣವನ್ನು ಆಕರ್ಷಕವಾಗಿ ಮೂಡಿಬರುವಂತೆ ರೂಪಿಸಲು ಕ್ರಿಯಾಯೋಜನೆ ಸಿದ್ದಪಡಿಸಲು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಅಡ್ಡಗಲ್ ಗ್ರಾಮ ಪಂಚಾಯಿತಿ ಕಂಬಾಳಪಲ್ಲಿ, ಯಲ್ದೂರು, ಪುಂಗನೂರು ಕ್ರಾಸ್, ಮದನಹಳ್ಳಿ, ಹೋಳೂರು, ಅಲೇರಿ, ಗುಟ್ಟಹಳ್ಳಿ, ಹನುಮಂತರಾಯನದಿನ್ನೆ, ಚಿಕ್ಕ ತಿರುಪತಿ, ಬೈರಗಾನಪಲ್ಲಿ, ಮುಂತಾದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಯಾತ್ರಿ ನಿವಾಸ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ಶೀಘ್ರವೇ ಪುರ್ಣಗೊಳಿಸಬೇಕು ಇದಕ್ಕೆ ಬೇಕಾಗಿರುವ ಅನುದಾನವನ್ನು ಲಭ್ಯವಿರುವ ಲೆಕ್ಕ ಶೀರ್ಷಿಕೆಯಡಿ ಹೊಂದಿಸಿಕೊಳ್ಳಲು ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿದೆ ಎಂದು ಡಿಸಿ ಸಭೆಯಲ್ಲಿ ತಿಳಿಸಿದರು.
ಕೋಲಾರಮ್ಮ ದೇವಾಲಯ, ಅಂತರಗಂಗೆ ದೇವಾಲಯ ಮತ್ತು ಕೆಜಿಎಫ್ ಸಿನಿಮಾದಲ್ಲಿ ಬಣ್ಣಿಸಿದ ಸ್ಥಳಗಳನ್ನು ವೀಕ್ಷಣೆ ಮಾಡಲು ನೂರಾರು ಜನರು ಆಗಮಿಸುತ್ತಾರೆ. ಅಂತರಗಂಗೆ ಬೆಟ್ಟದಲ್ಲಿ ಚಾರಣ ಮಾಡಲು ಸಹ ಜನರು ಆಗಮಿಸುತ್ತಾರೆ. ರೈಲು, ರಸ್ತೆ ಮಾರ್ಗದ ಮೂಲಕ ಕೋಲಾರ ತಲುಪುವುದು ಸುಲಭವಾಗಿದೆ.
ಅಂತರಗಂಗೆಯಲ್ಲಿ ಕೂಡು ರಸ್ತೆ ಕಾಮಗಾರಿಗಾಗಿ ಮರ ತೆರವು ಮಾಡಲು ಅರಣ್ಯ ಇಲಾಖೆಯ ಸಹಮತಿ ಪಡೆದು ಕಾಮಗಾರಿ ಪುರ್ಣಗೊಳಿಸಲು ಸೂಚಿಸಿದರು. ಕೋಲಾರ ಜಿಲ್ಲೆಯ ಪ್ರಮುಖ ಮತ್ತು ಅಕರ್ಷಕ ಪ್ರವಾಸಿ ತಾಣಗಳ ವಿವರಗಳುಳ್ಳ ಕಾಫಿ ಟೇಬಲ್ ಪುಸ್ತಕವನ್ನು ಮುದ್ರಿಸುವ ಕಾರ್ಯವು ಸ್ಥಗಿತಗೊಂಡಿದ್ದು, ನೂತನ ಸರ್ಕಾರದ ಆಶಯದಂತೆ ಜನಸಮಾನ್ಯರಿಗೆ ಎಟುಕುವ ರೀತಿಯಲ್ಲಿ ಮುದ್ರಿಸಲು ಕ್ರಮಕೈಗೊಳ್ಳಬೇಕು ಎಂದರು.
ಬೆಂಗಳೂರು ನಗರದಲ್ಲಿರುವ ಕೋಲಾರ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ವಾರಾಂತ್ಯದಲ್ಲಿ ಮತ್ತು ರಜೆ ದಿನಗಳಲ್ಲಿ ಬೆಂಗಳೂರು ನಗರದಿಂದಲೇ ನೂರಾರು ಜನರು ಕೋಲಾರ ಕಡೆಗೆ ಪ್ರವಾಸಕ್ಕಾಗಿ, ಧಾರ್ಮಿಕ ಸ್ಥಳಗಳ ಭೇಟಿಗಾಗಿ ಆಗಮಿಸುತ್ತಾರೆ.












Click it and Unblock the Notifications