ಶಿವಮೊಗ್ಗ; ಗೋವಾ, ತಿರುಪತಿ, ಹೈದರಾಬಾದ್ ವಿಮಾನ ವೇಳಾಪಟ್ಟಿ, ದರ
ಶಿವಮೊಗ್ಗ, ಅಕ್ಟೋಬರ್ 31: ಮಲೆನಾಡು ಭಾಗದ ಜನರಿಗೆ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಸಿಹಿಸುದ್ದಿ ನೀಡಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ ಮತ್ತು ಹೈದರಾಬಾದ್ ನಗರಗಳಿಗೆ ವಿಮಾನ ಸೇವೆ ನವೆಂಬರ್ 21ರಿಂದ ಆರಂಭವಾಗಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ 4 ಮಾರ್ಗಗಳಿಗೆ ವಿಮಾನಯಾನ ಸೇವೆಗೆ ಅನುಮತಿ ಸಿಕ್ಕಿದ್ದು, ಈಗಾಗಲೇ ಶಿವಮೊಗ್ಗ-ಬೆಂಗಳೂರು ಸಂಚಾರ ಆರಂಭವಾಗಿದೆ. ಹೈದರಾಬಾದ್, ಗೋವಾ, ತಿರುಪತಿಗೂ ವಿಮಾನ ಸಂಚಾರ ಆರಂಭವಾಗುತ್ತಿದೆ.

ಸ್ಟಾರ್ ಏರ್ ಶಿವಮೊಗ್ಗ-ಗೋವಾ, ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ ನಡುವಿನ ವಿಮಾನದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಿಮಾನ ಹೊರಡುವ ಸಮಯ, ವಾರದ ಯಾವ ದಿನ ಸಂಚಾರ ನಡೆಸುತ್ತದೆ ಎಂಬ ಮಾಹಿತಿ ನೀಡಲಾಗಿದೆ.
ವಿಮಾನದ ವೇಳಾಪಟ್ಟಿ; ಸ್ಟಾರ್ ಏರ್ ಶಿವಮೊಗ್ಗ-ಹೈದರಾಬಾದ್ ನಡುವೆ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಹೈದರಾಬಾದ್-ಶಿವಮೊಗ್ಗ ವಿಮಾನ 9.30ಕ್ಕೆ ಹೊರಡಲಿದ್ದು, 10.35ಕ್ಕೆ ಆಗಮಿಸಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಈ ವಿಮಾನ ಸಂಚಾರ ನಡೆಸಲಿದೆ.
ಶಿವಮೊಗ್ಗ-ಹೈದರಾಬಾದ್ ವಿಮಾನ 16.30ಕ್ಕೆ ಹೊರಡಲಿದ್ದು, 17.35ಕ್ಕೆ ಆಗಮಿಸಲಿದೆ. ಮಂಗಳವಾರ ಗುರುವಾರ ಮತ್ತು ಶನಿವಾರ ಈ ವಿಮಾನ ಸಂಚಾರ ನಡೆಸಲಿದೆ. ಹೈದರಾಬಾದ್-ಶಿವಮೊಗ್ಗ ವಿಮಾನ ಬುಧವಾರ 9.30ಕ್ಕೆ ಹೊರಡಲಿದ್ದು, 10.35ಕ್ಕೆ ಆಗಮಿಸಲಿದೆ. ಶಿವಮೊಗ್ಗ-ಹೈದರಾಬಾದ್ ವಿಮಾನ ಬುಧವಾರ 16.30ಕ್ಕೆ ಹೊರಡಲಿದ್ದು, 17.25ಕ್ಕೆ ತಲುಪಲಿದೆ.
ಶಿವಮೊಗ್ಗ-ಗೋವಾ ವಿಮಾನ 13.55ಕ್ಕೆ ಹೊರಡಲಿದ್ದು, 14.45ಕ್ಕೆ ತಲುಪಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ. ಗೋವಾ-ಶಿವಮೊಗ್ಗ ವಿಮಾನ 15.15ಕ್ಕೆ ಹೊರಡಲಿದ್ದು, 16.05ಕ್ಕೆ ತಲುಪಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ. ಶಿವಮೊಗ್ಗ-ಗೋವಾರ ವಿಮಾನ ಬುಧವಾರ 11 ಗಂಟೆಗೆ ಹೊರಡಲಿದ್ದು, 11.50ಕ್ಕೆ ಗೋವಾ ತಲುಪಲಿದೆ. ಗೋವಾ-ಶಿವಮೊಗ್ಗ ವಿಮಾನ ಬುಧವಾರ 12.20ಕ್ಕೆ ಹೊರಡಲಿದ್ದು, 13.10ಕ್ಕೆ ತಲುಪಲಿದೆ.
ಶಿವಮೊಗ್ಗ-ತಿರುಪತಿ ವಿಮಾನ 11 ಗಂಟೆಗೆ ಹೊರಡಲಿದ್ದು, 12 ಗಂಟೆಗೆ ತಲುಪಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ. ತಿರುಪತಿ-ಶಿವಮೊಗ್ಗ ವಿಮಾನ 12.35ಕ್ಕೆ ಹೊರಡಲಿದೆ, 13.40ಕ್ಕೆ ತಲುಪಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ. ಬುಧವಾರ ಶಿವಮೊಗ್ಗ-ತಿರುಪತಿ ವಿಮಾನ 13.40ಕ್ಕೆ ಹೊರಡಲಿದೆ, 14.35ಕ್ಕೆ ತಲುಪಲಿದೆ. ಬುಧವಾರ ತಿರುಪತಿ-ಶಿವಮೊಗ್ಗ ವಿಮಾನ 15.05ಕ್ಕೆ ಹೊರಟು, 15.55ಕ್ಕೆ ತಲುಪಲಿದೆ.
ಈ ಎಲ್ಲಾ ಮಾರ್ಗಗಳ ಸಾಮಾನ್ಯ ಪ್ರಯಾಣ ದರ 1,999 ರೂ. ಇರಲಿದೆ. ಟಿಕೆಟ್‌ಗಳ ಬೆಲೆಗಳು ಹೆಚ್ಚು ಕಡಿಮೆ ಆಗಲಿವೆ.
ಮಲೆನಾಡಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ.
— B Y Raghavendra (@BYRBJP) October 30, 2023
ಇನ್ಮುಂದೆ ಶಿವಮೊಗ್ಗ ವಿಮಾನ ನಿಲ್ದಾಣದಿಂದಲೇ ನೀವು ನೇರವಾಗಿ ಗೋವಾ, ಹೈದ್ರಾಬಾದ್ ಹಾಗೂ ತಿರುಪತಿಗೆ ಹಾರಬಹುದು.
ನವೆಂಬರ್ 21 ರಿಂದ ಈ ಮೂರೂ ಸ್ಥಳಗಳಿಗೆ ತನ್ನ ವಿಮಾನ ಸಂಚಾರ ಆರಂಭಿಸುವುದಾಗಿ ಸ್ಟಾರ್ ಏರ್ ಲೈನ್ಸ್ ಅಧಿಕೃತವಾಗಿ ಘೋಷಿಸಿದೆ. ವಿಮಾನ ಸಂಚಾರದ ವೇಳಾಪಟ್ಟಿ ಇಲ್ಲಿದೆ ನೋಡಿ.… pic.twitter.com/Iu0Da3OgKS
ಪ್ರಧಾನಿ ನರೇಂದ್ರ ಮೋದಿ 2023ರ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಕರ್ನಾಟಕದ 9ನೇ ಮತ್ತು ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗ ವಿಮಾನ ನಿಲ್ದಾಣದ್ದು. ಈ ವಿಮಾನ ನಿಲ್ದಾಣವನ್ನು ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಸಹ ವಿಮಾನ ಲ್ಯಾಂಡ್ ಆಗುವ ವ್ಯವಸ್ಥೆ ಇದೆ. ಈ ಕುರಿತು ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ.
ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗ ವಿಮಾನ ನಿಲ್ದಾಣದ್ದು. ಏರ್‌ಬಸ್ 320 ಮಾದರಿಯ ವಿಮಾನಗಳು ಕೂಡ ಇಳಿಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಬೇಕು ಎಂದು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಸದ್ಯ ಬೆಂಗಳೂರು-ಶಿವಮೊಗ್ಗ ನಡುವೆ ಮಾತ್ರ ವಿಮಾನ ಸಂಪರ್ಕವಿದೆ. ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ 500 ರೂ. ಸಬ್ಸಿಡಿಯನ್ನು ರಾಜ್ಯ ಸರ್ಕಾರ ನೀಡಲಿದೆ. ನವೆಂಬರ್‌ನಲ್ಲಿ ಮೂರು ಹೊಸ ಮಾರ್ಗದಲ್ಲಿ ವಿಮಾನ ಸೇವೆ ಆರಂಭವಾಗುತ್ತಿದೆ.












Click it and Unblock the Notifications