ಕರ್ನಾಟಕದ ಈ ಐತಿಹಾಸಿಕ ರೈಲು ನಿಲ್ದಾಣದ ಹೆಸರು ಬದಲಾವಣೆ
ಕಾರವಾರ, ಡಿಸೆಂಬರ್ 14; ಕೇಂದ್ರ ರೈಲ್ವೆ ಸಚಿವಾಲಯ ಜನರ ಬೇಡಿಕೆಯಂತೆ ಕರ್ನಾಟಕದ ರೈಲು ನಿಲ್ದಾಣವೊಂದರ ಹೆಸರು ಬದಲಾವಣೆ ಮಾಡಿದೆ. ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ನಿಲ್ದಾಣ ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯದ ವ್ಯಾಪ್ತಿಗೆ ಸೇರುತ್ತದೆ.
ಉತ್ತರ ಕನ್ನಡ ಜಿಲ್ಲೆಯ 'ಅಂಬೇವಾಡಿ' ರೈಲು ನಿಲ್ದಾಣದ ಹೆಸರನ್ನು'ದಾಂಡೇಲಿ' ಎಂದು ಬದಲಾವಣೆ ಮಾಡಲಾಗಿದೆ. ಇಂಗ್ಲಿಶ್‌ನಲ್ಲಿ DANDELI ಎಂದು ಕನ್ನಡದಲ್ಲಿ ದಾಂಡೇಲಿ ಎಂದು ಇನ್ನು ಮುಂದೆ ರೈಲು ನಿಲ್ದಾಣದ ಹೆಸರು ಬದಲಿಸಿ ಸುತ್ತೋಲೆ ಹೊರಡಿಸಲಾಗಿದೆ.

ಕರ್ನಾಟಕದಲ್ಲಿ ಐತಿಹಾಸಿಕ ಹಿನ್ನಲೆ ಹೊಂದಿರುವ ರೈಲು ನಿಲ್ದಾಣಗಳಲ್ಲಿ ಇದು ಸಹ ಒಂದು. ಹಲವು ಜನಪ್ರತಿನಿಧಿಗಳು, ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಅಂಬೇವಾಡಿ ಬದಲು ದಾಂಡೇಲಿ ಎಂದು ಮರು ನಾಮಕರಣ ಮಾಡಬೇಕು ಎಂದು ಹಿಂದಿನಿಂದಲೂ ಒತ್ತಾಯಿದ್ದರು.
ಆರ್. ವಿ. ದೇಶಪಾಂಡೆ ಫೇಸ್‌ಬುಕ್ ಪೋಸ್ಟ್; 'ಅಂಬೇವಾಡಿ' ರೈಲು ನಿಲ್ದಾಣದ ಹೆಸರನ್ನು'ದಾಂಡೇಲಿ' ಎಂದು ಬದಲಾವಣೆ ಮಾಡಿರುವುದಕ್ಕೆ ಹಳಿಯಾಳ ಶಾಸಕ, ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ಆರ್. ವಿ. ದೇಶಪಾಂಡೆ, 'ದಾಂಡೇಲಿಯು ಕಾಳಿ ನದಿಯ ದಡದಲ್ಲಿರುವ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನ ಮತ್ತು ಹಚ್ಚ ಹಸಿರಿನ ಕಾಡುಗಳೊಂದಿಗೆ ಪ್ರವಾಸಿ ತಾಣವಾಗಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಮತ್ತು ದೇಶದ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. ಆದರೆ ರೈಲಿನ ಹೆಸರು ಪ್ರವಾಸಿ ತಾಣಕ್ಕಿಂತ ಭಿನ್ನವಾಗಿದ್ದು ಪ್ರಯಾಣಿಕರಿಗೆ ಗೊಂದಲವನ್ನು ಉಂಟುಮಾಡುತ್ತಿದೆ' ಎಂದು ಹೇಳಿದ್ದಾರೆ.
'ಹಾಗಾಗಿಅಂಬೆವಾಡಿ ರೈಲು ನಿಲ್ದಾಣದಿಂದ ದಾಂಡೇಲಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡುವುದು ಹೆಚ್ಚು ಸೂಕ್ತವೆಂದು ಈ ಮೊದಲು ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಮುಖೇನ ನಾನು ವಿನಂತಿಸಿದ್ದು ಪ್ರಯಾಣಿಕರ ಗೊಂದಲವನ್ನು ತಪ್ಪಿಸಲು ಮತ್ತು ಸಹಾಯ ಮಾಡಲು ಪ್ರಸ್ತುತ ಅಂಬೆವಾಡಿ ರೈಲು ನಿಲ್ದಾಣದಿಂದ ದಾಂಡೇಲಿ ರೈಲು ನಿಲ್ದಾಣ ಎಂದು ಮರುನಾಮಕರಣವಾಗಿದ್ದು ದಾಂಡೇಲಿಗರ ಬಹುದಿನದ ಕನಸು ಸಾಕಾರಗೊಂಡಿದೆ. ಈ ಮೂಲಕ ಅತೀ ಶೀಘ್ರದಲ್ಲಿ ರೈಲು ಸಂಚರಿಸುವ ಆಶಾ ಭಾವನೆಯನ್ನು ಹೊಂದಿದ್ದೇನೆ' ಎಂದು ತಿಳಿಸಿದ್ದಾರೆ.
ರೈಲು ಬರುವುದಿಲ್ಲ; ಬ್ರಿಟಿಷರು ಸ್ಥಾಪನೆ ಮಾಡಿದ ಕರ್ನಾಟಕದ ರೈಲು ಮಾರ್ಗದಲ್ಲಿ ಅಂಬೇವಾಡಿ ರೈಲು ನಿಲ್ದಾಣ ಬರುತ್ತದೆ. ಈಗ ನಿಲ್ದಾಣದ ಹೆಸರನ್ನು ದಾಂಡೇಲಿ ಎಂದು ಬದಲಾವಣೆ ಮಾಡಲಾಗಿದೆ. ಆದರೆ ಇಲ್ಲಿಗೆ ರೈಲು ಬರುವುದಿಲ್ಲ ಎಂಬುದು ಅಚ್ಚರಿಯ ವಿಚಾರ.
ದಟ್ಟ ಕಾಡು ಹೊಂದಿರುವ ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಸಾಗಣೆ ಮಾಡಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಾಣ ಮಾಡಿದ್ದರು. ಈ ಮಾರ್ಗ ಗೋವಾ ರಾಜ್ಯದಲ್ಲಿರುವ ವಾಸ್ಕೋ ಬಂದರು ಸಂಪರ್ಕಿಸುತ್ತದೆ.
ಮೊದಲು ಬ್ರಿಟಿಷರು ಮೀಟರ್ ಗೇಜ್ ಮಾರ್ಗವನ್ನು ನಿರ್ಮಾಣ ಮಾಡಿದ್ದರು. ಬಳಿಕ ಅದನ್ನು ಬ್ರಾಡ್ ಗೇಜ್ ಮಾರ್ಗವಾಗಿ ಅಭಿವೃದ್ಧಿ ಮಾಡಲಾಗಿದೆ. 2019ರಲ್ಲಿ ಅಳ್ನಾವರ-ಅಂಬೇವಾಡಿ ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲು ನಿಂತಿತು, ಬಳಿಕ ಪ್ರಾರಂಭವಾಗಿಲ್ಲ.
ನೈಋತ್ಯ ರೈಲ್ವೆ ವಲಯ ಈ ಮಾರ್ಗವನ್ನು ವಿದ್ಯುದೀಕರಣ ಸಹ ಮಾಡಿದೆ. ಇಲ್ಲಿ ಸರಕು ಸಾಗಣೆ ಮಾಡುವ ಗೂಡ್ಸ್ ರೈಲು ಸಂಚಾರ ನಡೆಸುತ್ತಿದೆ. ಆದರೆ ಪ್ರಯಾಣಿಕರ ರೈಲು ಬರುವುದಿಲ್ಲ. ಪ್ರಯಾಣಿಕರ ರೈಲು ಆರಂಭಿಸುವಂತೆ ಬರೆದ ಪತ್ರಗಳಿಗೆ ಇನ್ನೂ ಬೆಲೆ ಸಿಕ್ಕಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಾಂಡೇಲಿಗೆ ಈ ರೈಲು ನಿಲ್ದಾಣ ಸಮೀಪವಿದೆ. ರೈಲು ಸಂಚಾರ ಆರಂಭಗೊಳಿಸಿದರೆ ಪ್ರವಾಸೋದ್ಯಮಕ್ಕೆ ಸಹ ಸಹಕಾರಿಯಾಗಲಿದೆ. ಅಂಬೇವಾಡಿ-ಧಾರವಾಡ ನಡುವಿನ 25 ಕಿ. ಮೀ. ಮಾರ್ಗವನ್ನು 12.35 ಕೋಟಿ ರೂ. ವೆಚ್ಚದಲ್ಲಿ ಬ್ರಾಡ್ ಗೇಜ್ ಆಗಿ ಪರಿವರ್ತನೆ ಮಾಡಲಾಗಿದೆ. ಆದರೆ ಇದು ಉಪಯೋಗಕ್ಕೆ ಬರದಂತೆ ಆಗಿದೆ.












Click it and Unblock the Notifications