ನಾಗಾಲ್ಯಾಂಡ್: ಹಾರ್ನ್‌ಬಿಲ್ ಉತ್ಸವ ಮತ್ತು ನೇತುಹಾಕಿದ ಮಾನವ ತೋರಣ
ನಾಗಾಲ್ಯಾಂಡ್ 17 ಮುಖ್ಯ ಬುಡಕಟ್ಟು ಮತ್ತು ಹಲವಾರು ಉಪ ಬುಡಕಟ್ಟುಗಳನ್ನು ಒಳಗೊಂಡ ವಿಶೇಷ ರಾಜ್ಯ. ತೀರಾ ಪುಟ್ಟದು. ಹಾಗೂ ಹೀಗೂ ನೋಡಿದರೆ ನಮ್ಮ ಶಿವಮೊಗ್ಗದ ಎರಡುಪಟ್ಟು ದೊಡ್ಡದಿರಬಹುದಷ್ಟೆ. ಡಿಸೆಂಬರ್ 1 ರಿಂದ 10 ರ ವರೆಗೆ ಪ್ರತಿವರ್ಷ ಹಾರ್ನ್‌ಬಿಲ್ ಹಬ್ಬ ನಡೆಯುತ್ತದೆ. ನಾಗಾಲ್ಯಾಂಡ್‌ನ ಎಲ್ಲಾ ಬುಡಕಟ್ಟು ಜನರ ಕಲೆ, ಊಟೋಪಚಾರ, ಸಂಸ್ಕೃತಿಗಳನ್ನು ನೋಡಲು ಈ ಹಬ್ಬಕ್ಕೆ ಹೋಗಲೇಬೇಕು. ಕಳೆದ 4 ವರ್ಷಗಳಿಂದ ನಾನು ಹಾರ್ನ್‌ಬಿಲ್ ಉತ್ಸವಕ್ಕೆ ಹೋಗಲೇಬೇಕು ಎಂದು ಯೋಚಿಸುತ್ತಿದ್ದೆ. ಈ ವರ್ಷ ಅದಕ್ಕೆ ಸರಿಯಾಗಿ ನನ್ನ ವೆಕೇಷನ್ ಪ್ಲಾನ್ ರೆಡಿ ಆಗಿತ್ತು.
ನಾನು ನಾಗಾಲ್ಯಾಂಡ್ ಎಂದಾಗ ಸುಮಾರು ಜನ ಏ! ಮಳ್ಳು ಗಿಳ್ಳನೆ ? ಹೋಗಿ ಹೋಗಿ ನಾಗಾಲ್ಯಾಂಡ? ಅಲ್ಲಿ ಬುಡಕಟ್ಟು ಜನ ಮನುಷ್ಯರ ತಲೆ ಕಡಿದು ಬಾಗಿಲಿಗೇ ಬುರುಡೆ ನೇತಾಕಿರ್ತಾರಂತೆ. ಮನುಷ್ಯನ ಅಂಗಾಂಗಗಳ ತೋರಣ ಕಟ್ಟಿರ್ತಾರಂತೆ. ಅಲ್ಲಿ ಭಾರತೀಯರ ಬಗ್ಗೆ ಅಸಹನೆ ಇದ್ಯಂತೆ. ಸೇಫ್ ಇಲ್ಲಪಾ.. ಇನ್ನು ನಿನ್ನಿಷ್ಟ. ನಾನು! ಮನೇಲ್ ಕೂತ್ರೆ ಸೇಫ್ ಆಗಿ ಇರಲ್ಲ, ಇನ್ನು ನಾಗಗಳು ತೋರಣ ಕಟ್ಟಿದ್ರೆ ಮುಕ್ತಿ ಸಿಗುತ್ತೆ ಬಿಡಿ ಎಂದು ತೋರಣ ಕಟ್ಟಿಸಿಕೊಳ್ಳಲು ತರಾತುರಿಯಲ್ಲಿ ರೆಡಿ ಆಗಿದ್ದೆ.
ಈಶಾನ್ಯ ಭಾರತದ ರಾಜ್ಯಗಳೆಂದರೆ ಒಂದು ಕುತೂಹಲ. ಭಾರತೀಯರಿಗಿಂತ ವಿಭಿನ್ನವಾಗಿ ಕಾಣುವ ಅಲ್ಲಿಯವರನ್ನು ಹಲವರು ವಿದೇಶೀಯರಂತೆ ಕಾಣುತ್ತಾರೆ. ಅವರ ಉಡುಗೆ, ಆಹಾರ, ಸಂಸ್ಕೃತಿ, ಹಬ್ಬಗಳು ಭಾರತದ ಇತರೆ ರಾಜ್ಯಗಳಿಗಿಂತ ಪೂರ್ತಿ ವಿಭಿನ್ನ. ಅವರ ಬಣ್ಣ ಬಣ್ಣದ ಉಡುಗೆಗಳೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ಭೂತಾನ್‌ಗೆ ಹೋದಾಗ ಕೂಡ ಅಲ್ಲಿಯ ಉಡುಗೆಗೆ ಮಾರು ಹೋಗಿದ್ದೆ. ಆಲ್ಲಿನ ಕುಶಲ ಕರ್ಮಿಗಳು ನೇಯ್ದ ತರ ತರದ ಉಡುಗೆಗಳಂತೂ ಸುಂದರ ಮತ್ತು ದುಬಾರಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಠ್ಯಗಳಲ್ಲಿ ಈಶಾನ್ಯ ರಾಜ್ಯಗಳ ಇತಿಹಾಸವಾಗಲೀ, ಬದುಕಾಗಲೀ ಎಲ್ಲೂ ಓದಲು ಸಿಕ್ಕಿರಲಿಲ್ಲ.

ಕಿಗ್ವೆಮ ತಲುಪಿದ್ದು
ಯಾವುದನ್ನಾದರೂ ಹತ್ತಿರ ಹೋಗಿ ನೋಡಿ ಅನುಭವಿಸಿ ಅರಿತುಕೊಳ್ಳಬೇಕಂತೆ, ಹಾಗೆಂದುಕೊಂಡೇ ಯಾವುದೇ ಊಹಾಪೋಹಗಳನ್ನಿಟ್ಟುಕೊಳ್ಳದೆ, ಪೂರ್ವಾಗ್ರಹ ಪೀಡಿತಳಾಗದೆ ತೆರೆದ ಮನಸ್ಸಿನಿಂದ ಡಿಸೆಂಬರ್ 4,2021ರ ಸಂಜೆ ಕಿಗ್ವೆಮ ಹೋಗಿ ಮುಟ್ಟಿದ್ದೆ. ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾ ದಿಂದ ಕಿಸಾಮಾ ಹೆರಿಟೇಜ್ ವಿಲೇಜ್ ಹತ್ತತ್ರ 17 ಕಿ ಮೀ. ಕೊಹಿಮಾದಲ್ಲಿ ವಿಮಾನ ನಿಲ್ದಾಣ ಇಲ್ಲವಾಗಿ ಧೀಮಾಪುರ್‌ಗೆ ಬಂದಿಳಿಯಬೇಕು. ನಾನು ಅಸ್ಸಾಂ ತಿರುಗಾಡಿ ಜೋರ್ಹಟ್‌ನಿಂದ ರೈಲಿನಲ್ಲಿ ಧೀಮಾಪುರ್ ತಲುಪಿದ್ದೆ.
ಧೀಮಾಪುರ್ ಇಂದ ಕೊಹಿಮಾಗೆ ರೈಲುಮಾರ್ಗ ಕೂಡ ಇಲ್ಲದಿರುವುದು ಅಲ್ಲಿನ ಹೀನ ಅಭಿವೃದ್ಧಿಯ ಚಿತ್ರಣ ಕೊಡುತ್ತದೆ. ಹಾರ್ನ್ಬಿಲ್ ಉತ್ಸವದ ಸಮಯದಲ್ಲಿ ರಾಜ್ಯ ಸರ್ಕಾರ ಕೊಹಿಮಾವರೆಗೂ ಬಸ್ ಸೌಲಭ್ಯ ಕಲ್ಪಿಸಿದೆ. ಧೀಮಾಪುರ್ ರೈಲ್ವೆ ಸ್ಟೇಷನ್ ಮತ್ತು ಬಸ್ ನಿಲ್ದಾಣ ಹತ್ತಿರದಲ್ಲೇ ಇದ್ದು ಅಲ್ಲಿಂದ ಶೇರ್ ಕ್ಯಾಬ್ ಕೂಡ ಲಭ್ಯ. ಕೊಹಿಮದಿಂದ ಕಿಗ್ವೆಮ ತಲುಪುವುದು ಹರಸಾಹಸವೇ ಸರಿ.

ಹಾರ್ನ್‌ಬಿಲ್ ಉತ್ಸವ 2021
ಡಿಸೆಂಬರ್ 5 ಕ್ಕೆ ಹಾರ್ನ್‌ಬಿಲ್ ಉತ್ಸವ ನೋಡಲು ಹೋದ ನಮಗೆಲ್ಲರಿಗೂ ಹಾರ್ನ್‌ಬಿಲ್ ಉತ್ಸವದ ನಡುವೆ ಶೋಕಾಚರಣೆ ಎದ್ದು ಕಾಣುತ್ತಿತ್ತು. ಟೆಲಿಫೋನ್ ನೆಟ್ವರ್ಕ್ ಸರಿ ಸಿಗದ ಕಾರಣಕ್ಕೆ ಹಿಂದಿನ ದಿನ ನಡೆದ ವಿದ್ಯಮಾನಗಳ ಮಾಹಿತಿ ಅಷ್ಟಾಗಿ ಇರಲಿಲ್ಲ. ಗೆಳೆಯನೊಬ್ಬ ಮೆಸೇಜ್ ಮಾಡಿ ಎಲ್ಲಿದ್ದೀಯ? ನಾಗಾಲ್ಯಾಂಡ್ ಅಲ್ಲಿದ್ರೆ ಕೂಡಲೇ ವಾಪಸು ಬಾ. ಅಲ್ಲಿ ಜೋರು ಗಲಾಟೆ ಶುರುವಾಗುವ ಸಾಧ್ಯತೆ ಇದೆ.
ಡಿಸೆಂಬರ್ 4 ರ ಸಂಜೆ ನಾಗಾಲ್ಯಾಂಡ್‌ನ ಹಳೆಯ ಕೊನ್ಯಾಕ್ ಬುಡಕಟ್ಟಿನ 13 ನಾಗರಿಕರನ್ನು ಮಿಲಿಟರಿ ಹತ್ಯೆಗೈದಿತ್ತು. ಮೌನಾಚರಣೆಯಿಂದ ಶುರುವಾದ ಬೆಳಗ್ಗೆಯ ಉತ್ಸವ ಹಾಗೂ ಹೀಗೋ ನಡೆದು ಮುಗಿದಿತ್ತು. ಕಿಸಾಮಾ ಹೆರಿಟೇಜ್ ವಿಲೇಜ್ ಒಳಗೆ ಎಲ್ಲಾ ಬುಡಕಟ್ಟುಗಳ ಹಟ್ಟಿ, ಜೊತೆಗೊಂದು ಹೋಟೆಲ್ ಇರುತ್ತದೆ. ಇದಕ್ಕೆ ಮೊರುಂಗ್ ಎನ್ನುತ್ತಾರೆ.

ಆ ದಿನ ಉತ್ಸವದಿಂದ ಹೊರಗುಳಿಯಲು ತೀರ್ಮಾನ
ಕೊನ್ಯಾಕ್ ಬುಡಕಟ್ಟು ಮತ್ತೂ ಈಶಾನ್ಯ ನಾಗಾಲ್ಯಾಂಡಿನ ಇನ್ನಾರು ಬುಡಕಟ್ಟು ಆ ದಿನ ಉತ್ಸವದಿಂದ ಹೊರಗುಳಿಯಲು ತೀರ್ಮಾನಿಸಿದ್ದವು. ಅವರ ಮಾರುಂಗ್‌ಗಳಲ್ಲ ಎಲ್ಲೆಲ್ಲೂ ಹಾರಾಡುವ ಕಪ್ಪು ಬಾವುಟಗಳೂ, ಮಿಲಿಟರಿ ನಡೆದುಕೊಂಡ ಬಗೆಗೆ ಖಂಡನೆಗಳೂ, ಜೊತೆಗೆ AFSPA(armed forces special power act) 1958 ಹಿಂತೆಗೆತಕ್ಕೆ ಒತ್ತಾಯವೂ ಎದ್ದು ಕಾಣುತ್ತಿತ್ತು.
ಕಿಸಾಮ ಸುತ್ತಮುತ್ತ ನನಗೆ ಕಂಡಂತೆ ಗಲಾಟೆಗಳೇನೂ ಆಗಿರಲಿಲ್ಲ. ಸಂಜೆಯ ಉತ್ಸವಕ್ಕೆ ನಾವೆಲ್ಲರೂ ಕಾಯುತ್ತಿರಬೇಕಾದರೆ ಅಲ್ಲೊಂದು ಶಾಂತಿಯುತ ಪ್ರತಿಭಟನೆ ಸಾಗಿತ್ತು. ಮೊಂಬತ್ತಿ, ಬ್ಯಾನರುಗಳನ್ನು ಹಿಡಿದು ನಾಗಾಲ್ಯಾಂಡಿನ ಹಲವು ಬುಡಕಟ್ಟಿನ ಜನರು ಒಟ್ಟಾಗಿ ಮೆರವಣಿಗೆ ಸಾಗಿದ್ದರು. ಆ ವೇಳೆಗೆ ಉತ್ಸವ ಮೈದಾನದಲ್ಲಿ ಕುಳಿತಿದ್ದ ನಾವುಗಳು ಕೆಲವು ಸ್ಥಳೀಯರೊಂದಿಗೆ ಔಪಚಾರಿಕವಾಗಿ ಹರಟುತ್ತಿದ್ದೆವು. ಅವರಲ್ಲೊಬ್ಬ ಅಲ್ಲಿ ನಡೆದ ವಿದ್ಯಮಾನಗಳನ್ನೂ ಮತ್ತು ಮಾಧ್ಯಮ ಹೊರಜಗತ್ತಿಗೆ ಕೊಡುತ್ತಿರುವ ಚಿತ್ರಣಗಳನ್ನೂ ನನ್ನ ಮುಂದಿಟ್ಟಿದ್ದ.

ನಾಗಾ ಸ್ವಾತಂತ್ರ್ಯ ಸಂಗ್ರಾಮ
ಮೊನ್ ಜಿಲ್ಲೆಯ ಓಟಿಂಗ್ ಗ್ರಾಮ ಭಾರತ - ಮಯನ್ಮಾರ್ ಗಡಿಗೆ ಹತ್ತತ್ರ 120 ಕಿ ಮೀ. ಸ್ವಾತಂತ್ರಾನಂತರ ನಾಗಗಳು ಭಾರತ ಮತ್ತು ಮಾಯನ್ಮಾರಿನಲ್ಲಿ ಹಂಚಿ ಹೋಗಿದ್ದಾರೆ. ಲುಂಗ್ವಾ ಎಂಬ ಗ್ರಾಮ ಅರ್ಧ ಭಾರತಕ್ಕೂ ಅರ್ಧ ಮಾಯನ್ಮಾರಿಗೂ ಸೇರುತ್ತದೆ. ನಾಗಗಳ ಜನಾಂಗೀಯ ಸಂಘರ್ಷ ನಿನ್ನೆ ಮೊನ್ನೆಯದಲ್ಲ. National Socialist counsel of Nagaland (NSCN) ಭಾರತ ಮತ್ತು ಮಯನ್ಮಾರ್‌ನಲ್ಲಿ ಸಕ್ರಿಯವಾಗಿ ಸ್ವಾತಂತ್ರ ಹೋರಾಟಕ್ಕಿಳಿದು ಹಲವು ದಶಕಗಳೇ ಸಂದಿವೆ. ಈಶಾನ್ಯ ನಾಗಾಲ್ಯಾಂಡ ಕೊನ್ಯಾಕ್ ಬುಡಕಟ್ಟಿನ ಹಲವು ಮುತ್ಸದ್ದಿಗಳು ಕೂಡ ಈ ಹೋರಾಟದ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಭಾರತದ ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ NSCN ಸಕ್ರಿಯವಾಗಿದ್ದು ನಾಗಗಳ ಸ್ವತಂತ್ರ ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ನೀವು ಭಾರತವನ್ನು, ಭಾರತೀಯರನ್ನು ದ್ವೇಷಿಸುತ್ತೀರಾ ? ಎಂದರೆ, ನಾವು ಯಾರನ್ನೂ ದ್ವೇಷಿಸುವುದಿಲ್ಲ. ನಮ್ಮ ಸಂಸ್ಕೃತಿ, ನಮ್ಮತನಗಳನ್ನು ಪ್ರೀತಿಸುತ್ತೇವೆ. ನಾಗಾ ಬುಡುಕಟ್ಟು ಭಾರತ - ಮಯನ್ಮಾರ್ ಅಥವಾ ಬೇರಾವುದೇ ದೇಶದೊಟ್ಟಿಗೂ ಸೇರಬಯಸುವುದಿಲ್ಲ. ನಮ್ಮ ಬುಡಕಟ್ಟು ಸಂಸ್ಕೃತಿಗಳನ್ನು ಕಾಪಿಡಲು, ನಮ್ಮ ನೈಸರ್ಗಿಕ ಸಂಪತ್ತುಗಳನ್ನು ಉಳಿಸಿಕೊಳ್ಳಲು, ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎನ್ನುತ್ತಾರೆ ನಾಗಾ ಜನ.

AFSPA 1958
NSCN ಚಟುವಟಿಕೆಗಳನ್ನು ಹತ್ತಿಕ್ಕಲು AFSPA 1958ರಲ್ಲಿ ಮೊಟ್ಟಮೊದಲ ಬಾರಿಗೆ ನಾಗಾಲ್ಯಾಂಡಿನಲ್ಲಿ ಜಾರಿಯಾಗಿದ್ದು, ದಂಗೆ ಪ್ರದೇಶಗಳಲ್ಲಿ ಧಾಳಿ ಮಾಡಲು, ಹುಡುಕಾಟ ನಡೆಸಲು, ಅರೆಸ್ಟ್ ಮಾಡಿ ವಿಚಾರಣೆ ನಡೆಸಲು, ಮಿಲಿಟರಿ ವಾರೆಂಟ್ ಜಾರಿಮಾಡುವ ಅಥವಾ ಅನುಮತಿಗೆ ಕಾಯಬೇಕಾಗಿರುವ ನಿಯಮಗಳಿಂದ ಹೊರತಾಗಿರುತ್ತದೆ.
ಡಿಸೆಂಬರ್ 4ರ ಸಂಜೆ ನಡೆದಿದ್ದಿಷ್ಟೇ, ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ 6 ಬುಡಕಟ್ಟು ಜನರನ್ನು ಕೊಂದ ಮಿಲಿಟರಿ ಪಿಕ್ ಅಪ್ ಟ್ರೆಕ್ಕಿನಲ್ಲಿ ಹೆಣಗಳನ್ನು ಹುದುಗಿಸಿ, ಗುಂಡುದಾಳಿಯ ಶಬ್ದ ಕೇಳಿ ತಮ್ಮವರನ್ನು ಹುಡುಕುತ್ತಾ ಬಂದ ಹಳ್ಳಿಗರ ಜೊತೆ ಮತ್ತೆ ಚಕಮಕಿಗಿಳಿಯುತ್ತದೆ.
ಪಿಕಪ್ ಟ್ರಕ್ಕಿನಲ್ಲಿ ತಮ್ಮವರ ಹೆಣಗಳನ್ನು ಕಂಡು ಕೆರಳಿದ ಹಳ್ಳಿಗರು ದಂಗೆಯೆದ್ದಾಗ ಮತ್ತೆ 7 ಜನ ಹಳ್ಳಿಗರನ್ನು ನಿಷ್ಕಾರುಣವಾಗಿ ಕೊಂದು ಮುಗಿಸುತ್ತದೆ. ಈ ಚಕಮಕಿಯಲ್ಲಿ ಒಬ್ಬ ಯೋಧ ಕೂಡ ಸಾಯುತ್ತಾನೆ.
ಮರುದಿನವೇ ಸಾಮಾಜಿಕ ಜಾಲತಾಣಗಳ ಕೆಲವು ಗುಂಪುಗಳು ಹುತಾತ್ಮ ಯೋಧನ ಅಂತ್ಯಕ್ರಿಯೆಯ ಫೋಟೋ ಹರಿಯಬಿಟ್ಟು, ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ವೀರ ಯೋಧ ಎಂದು ಬಿಂಬಿಸುತ್ತವೆ. ನಾಗಾಲ್ಯಾಂಡಿನ ಸ್ಥಳೀಯರು ಈ ಸಾಮಾಜಿಕ ಜಾಲತಾಣದ ಕೊಂಡಿಗಳನ್ನು ತೋರಿಸಿ ಹೇಳಿದ್ದು "ಆತ ವೀರ ಯೋಧ, ಹೋರಾಟದಲ್ಲಿ ಸಾವನ್ನಪ್ಪಿದ್ದಾನೆ ಅದರಲ್ಲಿ ಎರಡು ಮಾತಿಲ್ಲ. ಆದರೆ ಆತನನ್ನು ಕೊಂದವರು ತಮ್ಮವರ ಹೆಣಗಳನ್ನು ಕಂಡು ರೊಚ್ಚಿಗೆದ್ದ ಸ್ಥಳೀಯ ನಾಗರೀಕರೇ ಹೊರತು ಭಯೋತ್ಪಾದಕರಲ್ಲ."

ಸತ್ಯಾಸತ್ಯತೆಗಳ ಕುರಿತು ಪ್ರಶ್ನೆ
ಸಂಸತ್ತಿನಲ್ಲಿ ಅಮಿತ್ ಶಾಹ್ ಇದೊಂದು mistaken identity ಯಿಂದಾದ ತಪ್ಪು. ಆ ದಿನ ಉಗ್ರವಾದಿಗಳ ಬರುವಿಕೆಯ ಮುನ್ಸೂಚನೆಯಿತ್ತು ಎಂದರು. ಗಣಿ ಕಾರ್ಮಿಕರನ್ನು ಸಂಜೆ ಮನೆ ತಲುಪಿಸುತ್ತಿದ್ದ ವ್ಯಾನ್ ನಿಲುಗಡೆಯ ಸಂಕೇತವನ್ನು ಉಲ್ಲಂಘಿಸಿತು ಎಂದರು. ಆ ವ್ಯಾನಿನಲ್ಲಿದ್ದವರು ಭಯೋತ್ಪಾದಕರೇ ಆಗಿದ್ದರೆ ಅವರ ಹತ್ತಿರ ಶಸ್ತ್ರಾಸ್ತ್ರಗಳಿರುತ್ತಿರಲಿಲ್ಲವೇ? ಮಿಲಿಟರಿ ದಾಳಿಗೆ ಪ್ರತಿಯಾಗಿ ಅವರೂ ದಾಳಿ ಮಾಡುತ್ತಿರಲಿಲ್ಲವೇ? ಆ ಕಡೆಯಿಂದ ಪ್ರತಿಭಟನೆ ಬರದೇ ಹೋದಾಗಲೂ ಮಿಲಿಟರಿ ಮತ್ತೆ ಮತ್ತೆ ಗುಂಡು ಹಾರಿಸಿದ್ದೇಕೆ? ಇದ್ದ ಎಲ್ಲರನ್ನೂ ಮುಗಿಸಿದ್ದೇಕೆ? ಹೆಣಗಳನ್ನು ಮುಚ್ಚಿಟ್ಟಿದ್ದೇಕೆ ? ಹುಡುಕುತ್ತಾ ಬಂದ ಹಳ್ಳಿಗರನ್ನು ಕೊಂದದ್ದೇಕೆ ? ಅಮಿತ್ ಶಾಹ್ ನೀವೇಕೆ ಸಂಸತ್ತಿನಲ್ಲಿ ಅರ್ಧ ಸತ್ಯವನ್ನು ಹೇಳಿದಿರಿ ? ಹೀಗೆ ನಾಗಾ ಜನರು ಘಟನೆಯ ಕುರಿತು ಹೊರಜಗತ್ತಿಗೆ ಸರ್ಕಾರ ಮತ್ತು ರಾಷ್ಟ್ರೀಯ ಮಾಧ್ಯಮಗಳು ಪ್ರಸ್ತುತಪಡಿಸುತ್ತಿರುವ ಸತ್ಯಾಸತ್ಯತೆಗಳ ಕುರಿತು ಪ್ರಶ್ನೆಯೆತ್ತಿದ್ದರು.
ಡಿಸೆಂಬರ್ 4ರ ಮೊನ್ ಜಿಲ್ಲೆಯ ಹತ್ಯಾಕಾಂಡವನ್ನು ನಾಗಗಳು AFSPA ದುರ್ಬಳಕೆ ಎಂದೇ ಆ ದಿನ ಸೆಟೆದು ನಿಂತಿದ್ದು. ರಾಜ್ಯದಾದ್ಯಂತ ಎಲ್ಲ ಬುಡಕಟ್ಟು ಜನರೂ ಒಗ್ಗಟ್ಟಾಗಿ ಪ್ರತಿಭಟಿಸುತ್ತಿರುವುದು ತಮ್ಮ ಅಣ್ಣ ತಮ್ಮಂದಿರ ಕೊಂದು ತೋರಣ ಕಟ್ಟುತ್ತಿರುವುದೇಕೆ? ಎಂತಲೇ. ಈಶಾನ್ಯ ನಾಗಾಲ್ಯಾಂಡ್‌ನ 7 ಬುಡಕಟ್ಟುಗಳು ನಮ್ಮವರು ಹೀನಾಯವಾಗಿ ಕೊಲ್ಲಲ್ಪಟ್ಟಾಗ ನಾವು ನಿಮ್ಮೆದುರು ಹೇಗೆ ಹಾಡಿ - ಕುಣಿಯಬಲ್ಲೆವು ಎಂದಿದ್ದವು. ಅದಕ್ಕೆ ಬೇರೆಲ್ಲ ಬುಡಕಟ್ಟುಗಳ ಸಹಮತ ಕೂಡ ಇತ್ತು.

ರದ್ದಾದ ಹಾರ್ನ್ಬಿಲ್ ಉತ್ಸವ
ಇವೆಲ್ಲವುಗಳ ಮಧ್ಯೆ ವರುಣನ ಆರ್ಭಟ ಶುರುವಾಗಿ ಉತ್ಸವಕ್ಕೆ ಬಂದ ಪ್ರವಾಸಿಗರು ಒಬ್ಬೊಬ್ಬರಾಗಿ ಗಂಟು ಮೂಟೆ ಕಟ್ಟತೊಡಗಿದ್ದರು. ಡಿಸೆಂಬರ್ 7 ರ ಬೆಳಿಗ್ಗೆ ಮತ್ತೆ ಕಿಸಾಮಾ ಹೆರಿಟೇಜ್ ಕಡೆ ಹೋದಾಗ ಬುಡಕಟ್ಟುಗಳು ಒಂದೊಂದಾಗಿ ಬೀಳ್ಕೊಡುಗೆ ಹಾಡು ಹಾಡಿ ಹೊರಡುವ ದೃಶ್ಯ ಕಣ್ಣಿಗೆ ಬಿತ್ತು. ರಾಜ್ಯದ ನಾನಾ ಭಾಗಗಳಿಂದ ಬಂದ ಕುಶಲಕರ್ಮಿಗಳಲ್ಲಿ ಹಲವರು ಹೋಗಿಯಾಗಿತ್ತು.
ಮತ್ತೆ ಕೆಲವರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರುತ್ತಿದ್ದರು. ಮತ್ತೆ ಕೆಲವರು ನಮಗೆ ಸಾಗಾಣಿಕಾ ವೆಚ್ಚವೂ ಹುಟ್ಟಲಿಲ್ಲ, ನಾವು ನಾಶವಾದೆವು ಎಂದರು. ಕ್ಯಾಂಪ್ ಸೈಟ್ ನಡೆಸುವವ, ನಮಗಿದೊಂದೇ ಇವೆಂಟ್ ದುಡಿಯಲು. 2 ವರ್ಷದಿಂದ ಕೋವಿಡ್, ಈ ವರ್ಷ ಹೀಗಾಗಿಹೋಯಿತು ಎಂದ. ಸಾಮಾನ್ಯ ನಾಗರೀಕರಿಗೆ AFSPA ಜೀವನೋಪಾಯಕ್ಕೆ ಹೀಗೂ ಮುಳುವಾಯಿತೆ ಅನಿಸಿದ್ದು ಸುಳ್ಳಲ್ಲ.
ಸರ್ಕಾರ ಅಧಿಕೃತವಾಗಿ 2021 ಹಾರ್ನ್ಬಿಲ್ ಉತ್ಸವವನ್ನು ರದ್ದುಗೊಳಿಸಿತು. ಜೊತೆಗೆ ASFPA ಅಡಿಯಲ್ಲಿ ಸರ್ಕಾರದ ಜೊತೆಗಿನ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಕೇಂದ್ರಕ್ಕೆ ಖಡಕ್ಕಾಗಿ ಪ್ರತಿಕ್ರಿಯಿಸುವ ಹಾಗೂ ನಾಗಗಳ ಸ್ವಾಯುತ್ತತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂಬ ಮನವಿಯನ್ನೂ ಮಾಡುತ್ತೇವೆಂದಿತು.
ಉತ್ಸವ ಕಳೆದು 4 ದಿನ ನಾನಲ್ಲೇ ಇದ್ದೆ. ನಾಗಗಳು ಶಾಂತಿಯುತವಾಗಿ ಪ್ರತಿಭಟಿಸಿದ್ದು, ಕಪ್ಪು ಧ್ವಜ ಎಲ್ಲೆಡೆಗೆ ಹಾರುತ್ತಿದ್ದುದು ಕಂಡಿತ್ತೇ ವಿನಃ, ಸುಟ್ಟ ಸರ್ಕಾರಿ ವಾಹನಗಳು, ದಂಗೆಗಳು - ರಕ್ತಸಿಕ್ತ ಹೊಡೆದಾಟಗಳನ್ನು ಎಲ್ಲಿಯೂ ಕಾಣಲಿಲ್ಲ. ಅಲ್ಲಿ ಹೋದ ಪ್ರವಾಸಿಗರನ್ನು ಮರ್ಯಾದೆಯಿಂದ, ಪ್ರೀತಿಯಿಂದಲೇ ನಡೆಸಿಕೊಂಡಿತ್ತು. ಹೋದಲ್ಲೆಲ್ಲ ಸಿಗ್ಗುತ್ತಿದ್ದ ಹೊಸಮಂದಿ Mam how are you feeling in our state? Are you comfortably enjoying ? ಎಂದು ಔಪಚಾರಿಕವಾಗಿ ಮಾತಾಡಿಸುತ್ತಿದ್ದರು.












Click it and Unblock the Notifications