ಮಹಾ ಶಿವರಾತ್ರಿ 2023: ಕದ್ರಿ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದ ಕುತೂಹಲಕಾರಿ ಸಂಗತಿ
ಮಂಗಳೂರು ನಗರದಲ್ಲಿರುವ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಶಿವಭಕ್ತರಿಂದ ತುಂಬಿ ಹೋಗಿದೆ. ಐತಿಹಾಸಿಕ ಹಿನ್ನಲೆಯುಳ್ಳ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಬಗೆಗಿನ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.
ಮಂಗಳೂರು, ಫೆಬ್ರವರಿ 18: ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಶಿವಭಕ್ತರು ಮಹಾ ಶಿವರಾತ್ರಿಯ ಅಪೂರ್ವ ದಿನದಂದು ಶುದ್ಧಾಚಾರದಲ್ಲಿದ್ದು, ರಾತ್ರಿ ಇಡೀ ಜಾಗರಣೆ ಮಾಡಿ ಮಹಾಕಾಲನನ್ನು ಸ್ಮರಿಸುತ್ತಾರೆ. ದೇವಾಲಯಗಳ ನಗರಿ ಮಂಗಳೂರಿನಲ್ಲೂ ಹಬ್ಬದ ಸಂಭ್ರಮ ಮೇಳೈಸಿದೆ. ಮಂಗಳೂರು ನಗರದಲ್ಲಿರುವ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಶಿವಭಕ್ತರಿಂದ ತುಂಬಿ ಹೋಗಿದೆ. ಐತಿಹಾಸಿಕ ಹಿನ್ನಲೆಯುಳ್ಳ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಬಗೆಗಿನ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.
ಪರಶುರಾಮ ಸೃಷ್ಠಿಯ ತುಳುನಾಡು ದೈವ-ದೇವರುಗಳ ನೆಲೆಬೀಡು. ತನ್ನ ಕೊಡಲಿಯನ್ನು ಎಸೆದು ತುಳುನಾಡು ಸೃಷ್ಠಿಸಿದ ಪರಶುರಾಮರು ಕದ್ರಿಯ ಮಂಜನಾಥನ ಆಲಯವನ್ನೂ ಸ್ಥಾಪಿಸಿದರು ಎಂಬ ಐತಿಹ್ಯ ಕದ್ರಿ ಕ್ಷೇತ್ರಕ್ಕೆ ಇದೆ.
10ನೇ ಶತಮಾನದಲ್ಲಿ ನಿರ್ಮಾಣವಾದ ಕದ್ರಿ ಮಂಜುನಾಥ ಕ್ಷೇತ್ರವನ್ನು,14 ನೇಯ ಶತಮಾನದಲ್ಲಿ ಸಂಪೂರ್ಣ ಕಲ್ಲಿನ ರಚನೆಯನ್ನಾಗಿ ಪರಿವರ್ತಿಸಲಾಯಿತು. ಸಹ್ಯಾದ್ರಿಯಲ್ಲಿ ನೆಲೆಸಿದ್ದ ಪರಶುರಾಮನು ಕ್ರೂರಿಗಳಾದ ಕ್ಷತ್ರಿಯರನ್ನು ಕೊಂದು ಕಶ್ಯಪನಿಗೆ ಭೂಮಿಯನ್ನು ದಾನ ಮಾಡಿದರೆಂದು ನಂಬಲಾಗಿದೆ.

ಕದ್ರಿ ದೇವಾಲಯದ ಐತಿಹಾಸಿಕ ಹಿನ್ನೆಲೆ ಏನು..?
ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದ ಪರಶುರಾಮರು ತನಗೆ ವಾಸಿಸಲು ಸ್ಥಳಕ್ಕಾಗಿ ಶಿವನನ್ನು ಪ್ರಾರ್ಥಿಸಿದರು. ಈ ವೇಳೆ ಶಿವನು ಪರಶುರಾಮನ ಎದುರು ಪ್ರತ್ಯಕ್ಷರಾಗಿ, ಕದಳಿ ಕ್ಷೇತ್ರದಲ್ಲಿ ತಪಸ್ಸು ಮಾಡಿದರೆ, ಲೋಕ ಕಲ್ಯಾಣಕ್ಕಾಗಿ ಮಂಜುನಾಥನಾಗಿ ಪುನರ್ಜನ್ಮ ನೀಡುತ್ತೇನೆ ಎಂದು ಭರವಸೆ ನೀಡಿದರು. ಶಿವನ ಆಜ್ಞೆಯಂತೆ ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ತನ್ನ ತಪಸ್ಸಿಗೆ ಸ್ಥಳವನ್ನು ಸೃಷ್ಟಿಸಿದನು. ಪರಶುರಾಮನ ಪ್ರಾರ್ಥನೆಗೆ ಮಣಿದ ಶಿವನು, ಪಾರ್ವತಿ ದೇವಿಯೊಡನೆ ಮಂಜುನಾಥ ಲಿಂಗ ರೂಪಿಯಾಗಿ ಕಾಣಿಸಿಕೊಂಡನು ಮತ್ತು ಲೋಕದ ಒಳಿತಿಗಾಗಿ ಕದ್ರಿಯಲ್ಲಿ ತಂಗಿದನು. ಮಂಜುನಾಥನ ಆಜ್ಞೆಯಂತೆ ಸಪ್ತಕೋಟಿ ಮಂತ್ರಗಳು ಏಳು ತೀರ್ಥಗಳಾಗಿ ಬದಲಾಗಿವೆ ಎಂಬ ಐತಿಹ್ಯ ಶ್ರೀ ಕ್ಷೇತ್ರ ಕದ್ರಿಗಿದೆ.

ಕದ್ರಿ ಏಳು ಕೆರೆಯ ವಿಶೇಷತೆ ಏನು..?
ಕದ್ರಿ ಮಂಜುನಾಥ ಸ್ವಾಮಿ ದೇವಳದ ಮೇಲ್ಭಾಗದಲ್ಲಿರುವ ಏಳು ಕೊಳಗಳು ತೀರ್ಥ ಕೆರೆಗಳಾಗಿ ಭಕ್ತರ ನಂಬಿಕೆಯ ತಾಣವಾಗಿದೆ. ಈ ಏಳು ಕೆರೆಯಲ್ಲಿ ಮಿಂದರೆ, ಪಾಪನಾಶವಾಗುವ ಜೊತೆಗೆ ಚರ್ಮ ರೋಗ ಸೇರಿದಂತೆ, ಇತರ ರೋಗ ರುಜಿನಗಳು ದೂರವಾಗುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ. ದೇವಸ್ಥಾನದ ಮೇಲ್ಭಾಗದಲ್ಲಿದ್ದರೂ ಈ ಕೆರೆಗಳಲ್ಲಿ ವರ್ಷಪೂರ್ತಿ ನೀರು ಕಿಂಚಿತ್ತೂ ಕಡಿಮೆಯಾಗದಿರುವುದು ಸಪ್ತ ಕರೆಗೆಳ ವಿಶೇಷತೆಯಾಗಿದೆ. ದೇವಾಲಯದಲ್ಲಿ ಶಿವನ ಜೊತೆ ಮಚೇಂದ್ರನಾಥ,ಗೋರಕ್ಷನಾಥ, ಶೃಂಗಿನಾಥ, ಲೋಕೇಶ್ವರ, ಮಂಜುಶ್ರೀ ಮತ್ತು ಬುದ್ಧನ ಪ್ರತಿಮೆಗಳಿವೆ. ವಿಜಯನಗರ ಕಾಲದಲ್ಲಿ ಅಭಿವೃದ್ಧಿಯಾದ ಕದ್ರಿ ಮಂಜುನಾಥ ದೇವಸ್ಥಾನವು ವಿಜಯನಗರ ಶೈಲಿಯಲ್ಲಿದೆ.

ಧರ್ಮಸ್ಥಳದ ಮೂಲ ಕದ್ರಿ ಶ್ರೀ ಮಂಜುನಾಥ ಕ್ಷೇತ್ರ
ಕದ್ರಿ ದೇವಸ್ಥಾನದಲ್ಲಿ ಗಣಪತಿ, ದುರ್ಗಾಪರಮೇಶ್ವರಿ, ಶ್ರೀ ಧರ್ಮಶಾಸ್ತನ ಸಾನಿಧ್ಯವೂ ಇದೆ. ಜೊತೆಗೆ ಹುನುಮನ ಮಂದಿರವೂ ಕದ್ರಿಯಲ್ಲಿದೆ. ದೈವ ಶಕ್ತಿಗಳೂ ಕದ್ರಿಯಲ್ಲಿ ನೆಲೆ ನಿಂತಿದ್ದು, ಅಣ್ಣಪ್ಪ ಪಂಜುರ್ಲಿ, ಮಲರಾಯ ಸೇರಿದಂತೆ ದೈವ ಪರಿವಾರ ಕದ್ರಿ ಕ್ಷೇತ್ರದಲ್ಲಿ ಭಕ್ತರನ್ನು ಹರಸುತ್ತಿದೆ. ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲ ಕದ್ರಿ ಶ್ರೀ ಮಂಜುನಾಥ ಕ್ಷೇತ್ರ. ಇಲ್ಲಿಂದಲೇ ಅಣ್ಣಪ್ಪ ಪಂಜುರ್ಲಿ ಮಂಜುನಾಥನನ್ನು ಧರ್ಮಸ್ಥಳಕ್ಕೆ ಕರೆತಂದನು ಎಂಬ ಪ್ರತೀತಿಯೂ ಇದೆ. ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದಂದು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಪ್ರತಿದಿನ ಅನ್ನಸಂತರ್ಪಣೆಯೂ ಕ್ಷೇತ್ರದಲ್ಲಿ ನಡೆಯುತ್ತದೆ. ಮಂಗಳೂರು ನಗರದಲ್ಲಿ ಈ ಕ್ಷೇತ್ರ ಇರೋದರಿಂದ ನಗರದ ಭಕ್ತರ ಜೊತೆಗೆ ಪ್ರತಿ ದಿನ ಬೇರೆ ಬೇರೆ ಭಾಗಗಳಿಂದ ಮಂಗಳೂರು ನಗರಕ್ಕೆ ಪ್ರವಾಸಕ್ಕೆಂದು ಬಂದ ಭಕ್ತರೂ ಕ್ಷೇತ್ರವನ್ನು ಸಂದರ್ಶಿಸುತ್ತಾರೆ.

ಕದ್ರಿ ಮಂಜುನಾಥ ಕ್ಷೇತ್ರಕ್ಕೆ ತೆರಳುವ ಮಾರ್ಗಗಳ್ಯಾವು..?
ಕದ್ರಿ ಮಂಜುನಾಥ ಕ್ಷೇತ್ರದ ಸಂಪರ್ಕ ಬಹಳ ಸರಳವಾಗಿದೆ. ನಗರದ ಮಲ್ಲಿಕಟ್ಟೆ ಬಸ್ ನಿಲ್ದಾಣ ದಿಂದ ದೇವಸ್ಥಾನ ಒಂದು ಕಿಲೋ ಮೀಟರ್ ಅಂತರದಲ್ಲಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ದೇವಸ್ಥಾನ ಮೂರು ಕಿಲೋಮೀಟರ್ ಅಂತರದಲ್ಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮೂರು ಕಿಲೋಮೀಟರ್, ಕಂಕನಾಡಿ ರೈಲು ನಿಲ್ದಾಣವು ಸುಮಾರು ನಾಲ್ಕು ಕಿಲೋಮೀಟರ್ ಅಂತರದಲ್ಲಿ ಕದ್ರಿ ದೇವಸ್ಥಾನವಿದೆ. ಇನ್ನು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ದೇವಸ್ಥಾನ ಸುಮಾರು 16 ಕಿ.ಮೀ ದೂರದಲ್ಲಿದೆ.












Click it and Unblock the Notifications