ವೀರ ಯೋಧನ ಸಾಹಸಗಾಥೆಯ ಸೂರು ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ

ಮಡಿಕೇರಿ, ಜುಲೈ 06: ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರನ್ನು ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ ಆಕರ್ಷಿಸುತ್ತಿದೆ. ಇದರೊಳಗೊಂದು ಸುತ್ತು ಹೊಡೆದು ಬರುವ ಪ್ರವಾಸಿಗರು ವೀರ ಯೋಧನ ಸಾಹಸಗಾಥೆಯನ್ನು ನೋಡಿ ಹೆಮ್ಮೆಪಡುತ್ತಾರೆ.

ಹಾಗೆನೋಡಿದರೆ ಕೊಡಗಿನಲ್ಲಿ ವೀರ ಯೋಧರ ದೊಡ್ಡ ದಂಡೇ ಇದೆ. ಈ ಪೈಕಿ ಎರಡು ಹೆಸರು ಎಲ್ಲರ ಮನದಲ್ಲಿ ಚಿರಪರಿಚಿತವಾಗಿ ಉಳಿದಿದೆ. ಅದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ. ಕೊಡಗಿನ ವೀರ ಯೋಧರಲ್ಲಿ ಒಬ್ಬರಾದ ಜನರಲ್ ತಿಮ್ಮಯ್ಯ ಅವರ ಹೆಸರಿನಲ್ಲಿ ಮಡಿಕೇರಿ ನಗರದಲ್ಲಿ ನಿರ್ಮಾಣಗೊಂಡಿರುವ ವಸ್ತು ಸಂಗ್ರಹಾಲಯ ನಿರ್ಮಾಣಗೊಂಡು ಎರಡು ವರ್ಷಗಳಾಗುತ್ತಿದ್ದು, ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹೋಗಿದ್ದಾರೆ. ಹೀಗೆ ಹೋದವರು ಜನರಲ್ ತಿಮ್ಮಯ್ಯ ಅವರ ಬಗ್ಗೆ ತಿಳಿದು ಖುಷಿಪಟ್ಟಿದ್ದಾರೆ.

Madikeri General Thimayya Museum

ಇನ್ನು ಜನರಲ್ ತಿಮ್ಮಯ್ಯ ಅವರ ಹೇಳಬೇಕೆಂದರೆ ಅವರು 1906ರ ಮಾರ್ಚ್ 31 ರಂದು ಮಡಿಕೇರಿಯ ಸನ್ನಿಸೈಡ್ ನಿವಾಸ (ಈಗ ಸ್ಥಾಪನೆಯಾಗಿರುವ ಮ್ಯೂಸಿಯಂ) ದಲ್ಲಿ ಕೊಡಂದೇರ ಸೀತವ್ವ ಮತ್ತು ತಿಮ್ಮಯ್ಯ ದಂಪತಿಯ ಪುತ್ರರಾಗಿ ಜನಿಸಿದರು. ಇವರನ್ನು ಟಿಮ್ಸ್ ಎಂದೇ ಕರೆಯಲಾಗುತ್ತಿತ್ತು. ಇವರು ಬಾಲ್ಯದ ವಿದ್ಯಾಭ್ಯಾಸವನ್ನು ಕೂನೂರಿನ ಸೆಂಟ್ ಜೋಸೆಫ್ ಶಾಲೆ ಮತ್ತು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರೈಸಿ, 1922 ರಲ್ಲಿ ಡೆಹರಾಡೂನ್‌ನ ಮಿಲಿಟರಿ ಶಾಲೆಗೆ ಸೇರಿದರು.

"ಕೈಸರ್-ಇ-ಹಿಂದ್" ಪ್ರಶಸ್ತಿಗೆ ಭಾಜನ

1926 ರಲ್ಲಿ ರಾಯಲ್ ಇಂಡಿಯನ್ ಆರ್ಮಿಯ ಸೆಕೆಂಡ್ ಲೆಫ್ಟಿನೆಂಟ್ ಆಗಿ ಪದವಿ ಪಡೆದರು. ತದನಂತರ ಸ್ಕಾಟಿಷ್ ಯೂನಿಟ್‌ನ ಐಲ್ಯಾಂಡ್ ಇನ್‌ಫೆಂಟ್ರಿರಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು. ಈ ಸಂದರ್ಭ ನೀನಾ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ಪೀಕರಿಸಿದ ತಿಮ್ಮಯ್ಯ ಅವರು ಕ್ವೇಟಾದಲ್ಲಿ 1935 ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಪತ್ನಿಯೊಡಗೂಡಿ ಸಲ್ಲಿಸಿದ ಸೇವೆಗಾಗಿ "ಕೈಸರ್-ಇ-ಹಿಂದ್" ಪ್ರಶಸ್ತಿಗೆ ಭಾಜನರಾದರು.

1944ರ ಮಾರ್ಚ್ ನಲ್ಲಿ ಹೈದಾರಬಾದ್ ರೆಜಿಮೆಂಟಿನ ಕಮಾಡಿಂಗ್ ಆಫೀಸರ್ ಆಗಿ 1946 ರಲ್ಲಿ ಜಪಾನಿನಲ್ಲಿ ಭಾರತೀಯ ಇನ್‌ಫೆಂಟ್ರಿ ಬ್ರಿಗೆಡ್‌ನ್ನು ಮುನ್ನಡೆಸಿದರು. ಭೂ ಸೇನೆಯ ಪುನರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ತಿಮ್ಮಯ್ಯ ಅವರು, 1948 ರಲ್ಲಿ 19ನೇ ಭಾರತೀಯ ಡಿವಿಜನ್ ಕಮಾಂಡ್‌ನ ನೇತೃತ್ವ ವಹಿಸಿಕೊಂಡ ಸಂದರ್ಭ ಜಮ್ಮು-ಕಾಶ್ಮೀರದಲ್ಲಿ ತೋರಿದ ಪರಾಕ್ರಮ ಭಾರತೀಯ ಸೇನಾ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯಿತು.

Madikeri General Thimayya Museum

ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ

ಸುಮಾರು 12 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಶಿಖರದ ಮೇಲೆ ಸೈನಿಕರ ಜೊತೆಯಲ್ಲಿ ಸಮರ ಟ್ಯಾಂಕ್‌ಗಳನ್ನು ಸಾಗಿಸಿ ಪಾಕಿಸ್ತಾನದ ಹಿಡಿತದಲ್ಲಿದ್ದ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಮುಂದುವರಿದು ಪಾಕಿಸ್ತಾನದ ಅಧೀನದಲ್ಲಿದ್ದ ಭೂಮಿಯನ್ನು ಭಾರತದ ಸುಪರ್ದಿಗೆ ತೆಗೆದುಕೊಳ್ಳುವ ಹಂತದಲ್ಲಿದ್ದಾಗ ಯುದ್ಧ ವಿರಾಮ ಘೋಷಿಸಿದ್ದರಿಂದಾಗಿ ಆ ಪ್ರಯತ್ನ ಕೈಗೂಡಲಿಲ್ಲ. ಜನರಲ್ ತಿಮ್ಮಯ್ಯ ಅವರ ಪ್ರಯತ್ನಕ್ಕೆ ತಣ್ಣೀರರೆಚದೆ ಪ್ರೋತ್ಸಾಹಿಸಿದ್ದಲ್ಲಿ ಇಂದು ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ, ರಾಜಕೀಯ ಇಚ್ಚಾಸಕ್ತಿ ದೂರದೃಷ್ಟಿಯ ಕೊರತೆ ಈ ಸಮಸ್ಯೆಯನ್ನು ಜೀವಂತವಾಗಿ ಉಳಿಯುವಂತೆ ಮಾಡಿತು.

1950ರಲ್ಲಿ ದೇಶದ ಖ್ಯಾತ ಮಿಲಿಟರಿ ಅಕಾಡೆಮಿ ಮತ್ತು ಮಿಲಿಟರಿ ಕಾಲೇಜಿನ ಜವಾಬ್ದಾರಿ ಹೊತ್ತುಕೊಂಡ ಜನರಲ್ ತಿಮ್ಮಯ್ಯ ಅವರು ಹಲವಾರು ದೇಶಭಕ್ತ ಸೈನಿಕರಿಗೆ ಮಾರ್ಗದರ್ಶನ ಮಾಡಿದರು. 1953 ರಲ್ಲಿ ವೆಸ್ಟರ್ನ್ ಕಮಾಂಡಿನ ಅಧಿಕಾರ ವಹಿಸಿಕೊಂಡರು, 1957 ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಮ್ಯೂಸಿಯಂ ಸ್ಥಾಪನೆ ಹಿಂದಿನ ಕಥೆ

1964 ರಲ್ಲಿ ವಿಶ್ವಸಂಸ್ಥೆಯ ಶಾಂತಿಪಡೆಯ ಕಮಾಂಡರ್ ಆಗಿ ಸೈಪ್ರಸ್‌ನಲ್ಲಿ ನಿಯೋಜಿತಗೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. 1965ರ ಡಿಸೆಂಬರ್‌ 18 ರಂದು ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಸಾಹಸ, ಸೇನಾಪಡೆಗೆ ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿ ಉಳಿದಿದೆ. ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯಕ್ಕೆ ತೆರಳಿದವರು ತಿಮ್ಮಯ್ಯ ಅವರ ಸಾಹಸವನ್ನು ಮೆಲುಕು ಹಾಕುತ್ತಾರೆ. ಅಷ್ಟೇ ಅಲ್ಲದೆ ಅವರ ನೆನಪು ಚಿರವಾಗಿ ಉಳಿಯುತ್ತದೆ.

Madikeri General Thimayya Museum

ಈ ಮ್ಯೂಸಿಯಂ ಬಗ್ಗೆ ಹೇಳಬೇಕೆಂದರೆ ಜ.ತಿಮ್ಮಯ್ಯ ಅವರ 100ನೇ ವರ್ಷದ ಜನ್ಮ ದಿನವನ್ನು ಮಡಿಕೇರಿಯಲ್ಲಿ ಆಚರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಂದಿದ್ದರು. ಈ ವೇಳೆ ಜನರಲ್ ತಿಮ್ಮಯ್ಯ ಅವರ ನಿವಾಸದಲ್ಲಿ ಮ್ಯೂಸಿಯಂ ನಿರ್ಮಾಣದ ಮಾತು ಕೇಳಿ ಬಂದಿತ್ತಲ್ಲದೆ, ಈ ಬಗ್ಗೆ ರಾಜ್ಯ ಸರ್ಕಾರವೂ ಘೋಷಣೆ ಮಾಡಿತ್ತು. ಇದು ಮ್ಯೂಸಿಯಂ ಆಗುವ ತನಕವೂ ಈ ಕಟ್ಟಡಲ್ಲಿ ಸಾರಿಗೆ ಇಲಾಖೆಯ ಕಚೇರಿ ನಡೆಯುತ್ತಿತ್ತು. ನಂತರ ಕಚೇರಿಯನ್ನು ತೆರವು ಗೊಳಿಸಲಾಯಿತಲ್ಲದೆ, ಮ್ಯೂಸಿಯಂ ಸ್ಥಾಪನೆಯ ಪ್ರಕ್ರಿಯೆಗಳು ಮಂದಗತಿಯಲ್ಲಿ ಆರಂಭವಾಗಿ ಸುಮಾರು 15 ವರ್ಷಗಳ ಬಳಿಕ ಕನಸು ನನಸಾಯಿತು.

ಮ್ಯೂಸಿಯಂನಲ್ಲಿ ಏನೇನಿದೆ ಗೊತ್ತಾ?

ಮ್ಯೂಸಿಯಂಗೊಂದು ಸುತ್ತು ಹೊಡೆದರೆ ಜನರಲ್ ತಿಮ್ಮಯ್ಯ ಅವರ ಜೀವನ ಚರಿತ್ರೆ, ವಿಶೇಷ ಭಾವಚಿತ್ರಗಳು, ತೈಲಚಿತ್ರಗಳು, ಸಮವಸ್ತ್ರ, ಸೇನೆಗೆ ಸೇರಿದ ವಿವಿಧ ಬಗೆಯ ಬಂದೂಕುಗಳು, ತಿಮ್ಮಯ್ಯ ಅವರು ನಡೆಸಿದ ಯುದ್ಧಗಳ ಕುರಿತಂತೆ ಹಲವು ವಿಶೇಷತೆಗಳು ಕಂಡು ಬರುತ್ತವೆ. ಮ್ಯೂಸಿಯಂನ ಹೊರ ಆವರಣದಲ್ಲಿ ಭಾರತ-ಪಾಕಿಸ್ತಾನ, ಭಾರತ-ಚೀನಾ ಯುದ್ಧದಲ್ಲಿ ಭಾಗಿಯಾಗಿದ್ದ ಟಿ55 ಯುದ್ಧ ಟ್ಯಾಂಕರ್, ಮಿಗ್ 21 ಯುದ್ಧ ವಿಮಾನ, 1947 ರಿಂದ ಇಲ್ಲಿಯವರೆಗೆ ಮಡಿದ ವೀರಯೋಧರಿಗಾಗಿ ನಿರ್ಮಾಣವಾದ ಯುದ್ಧ ಸ್ಮಾರಕ, ನೌಕಾಪಡೆಯಲ್ಲಿನ ಲಂಗರು ಮೊದಲಾದವುಗಳು ಕಂಡು ಬರುತ್ತವೆ.

ಇದೆಲ್ಲವೂ ದೇಶಪ್ರೇಮಿಗಳ ಮನವನ್ನು ರೋಮಾಂಚನಗೊಳಿಸುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ವೀರಯೋಧರ ನಾಡು ಎಂದು ಕರೆಯಿಸಿಕೊಳ್ಳುತ್ತಿರುವ ಕೊಡಗಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂ ಕಳಸಪ್ರಾಯವಾಗಿದ್ದು, ಹೀಗಾಗಿಯೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಮುಖ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+