ಬೆಂಗಳೂರು-ಹುಬ್ಬಳ್ಳಿ ರೈಲು ರದ್ದು; ನೈಋತ್ಯ ರೈಲ್ವೆ ಸ್ಪಷ್ಟನೆ
ಬೆಂಗಳೂರು, ನವೆಂಬರ್ 23: ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ನಡುವಿನ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರದ್ದುಗೊಳಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ರೈಲು ರದ್ದು ಕುರಿತು ನೈಋತ್ಯ ರೈಲ್ವೆ ಸ್ಪಷ್ಟನೆ ನೀಡಿದೆ.
ಸ್ಪಷ್ಟೀಕರಣ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ವಿಶೇಷ ರೈಲು ಸೇವೆಗಳನ್ನು 'ಟ್ರೈನ್ ಆನ್ ಡಿಮ್ಯಾನ್ಡ್' (ಬೇಡಿಕೆ ಆಧಾರಿತ ರೈಲುಗಳಾಗಿ ತಾತ್ಕಾಲಿಕ ಅವರಿಗೆ ಓಡಿಸಲಾಗುತ್ತದೆ. ಹಬ್ಬದ ಸಂದರ್ಭಗಳಲ್ಲಿ, ರಜಾ ದಿನದಂತಹ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಇರುವಾಗ ಸಾರ್ವಜನಿಕ ಅನುಕೂಲದ ದೃಷ್ಟಿಯಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಹೇಳಿದೆ.

ಬೇಡಿಕೆಯನ್ನು ಆಧರಿಸಿ ಸೇವೆಯನ್ನು ಪ್ರಾರಂಭ/ ರದ್ದುಗೊಳಿಸುವ ನಿರ್ಧಾರವನ್ನು ಸೂಕ್ತವಾಗಿ ಪರಾಮರ್ಶಿಸಿ ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಹಾಗೂ ದೇಶದ ನಾನಾ ಕಡೆಗೆ 20 ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲಾಗಿತ್ತು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಪ್ರಸ್ತುತ ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಸೇವೆಯ ರದ್ದತಿಯ ಕುರಿತಂತೆ, ಕೆಲವು ವೆಬ್ ಹಾಗೂ ಇತರ ಮಾಧ್ಯಮದಲ್ಲಿ ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳದ್ದು ಎಂದು ಉಲ್ಲೇಖಿಸಲಾದ ಹೇಳಿಕೆಯ ವರದಿ ಸತ್ಯಕ್ಕೆ ದೂರವಾಗಿರುತ್ತದೆ ಹಾಗೂ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡುವಂತಿದೆ ಎಂದು ಪ್ರಕಟಣೆ ಹೇಳಿದೆ.
ಪತ್ರಿಕಾ ಪ್ರಕಟಣೆಯಲ್ಲಾಗಲಿ ಅಥವಾ ಯಾವುದೇ ವಾಹಿನಿಗೆ ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಈ ರೀತಿಯ (ಶಕ್ತಿ ಯೋಜನೆಗೆ ಸಂಬಂಧಿಸಿದ) ಹೇಳಿಕೆ ನೀಡಿರುವುದಿಲ್ಲ. ಅಲ್ಲದೇ, ಸಂಬಂಧಿಸಿದ ವೆಬ್ ಡೆಸ್ಕ್ ವಾಹಿನಿಯ ಯಾವುದೇ ವರದಿಗಾರರು ಸಹ ಈ ವರದಿಯನ್ನು ಪ್ರಕಟಿಸುವ ಪೂರ್ವದಲ್ಲಿ ವಿಷಯದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ನೈಋತ್ಯ ರೈಲ್ವೆಯನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸ ಬಯಸುತ್ತೇವೆ ಎಂದು ಸ್ಪಷ್ಟೀಕರಣದಲ್ಲಿ ಉಲ್ಲೇಖಿಸಲಾಗಿದೆ.
ರೈಲು ರದ್ದು ಆದೇಶ; ನೈಋತ್ಯ ರೈಲ್ವೆ 19/11/2023ರಲ್ಲಿ ಆದೇಶವೊಂದನ್ನು ಪ್ರಕಟಿಸಿತ್ತು. ರೈಲು ನಂಬರ್ 0734/ 07339 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರದ್ದುಗೊಳಿಸುವ ಆದೇಶ ಇದಾಗಿತ್ತು.
ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 20/11/2023 ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ 21/11/2023ರಿಂದ ಈ ರೈಲುಗಳನ್ನು ಮುಂದಿನ ಆದೇಶದ ತನಕ ರದ್ದುಗೊಳಿಸಲಾಗಿದೆ ಎಂದು ಹೇಳಿತ್ತು. ಈ ರೈಲು ಸಂಚಾರವನ್ನು ಪ್ರಯಾಣಿಕರ ಕೊರೆತೆಯ ಕಾರಣ ರದ್ದು ಮಾಡಲಾಗುತ್ತಿದೆ ಎಂದು ಆದೇಶ ತಿಳಿಸಿತ್ತು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಪ್ರಯಾಣಿಕರಿಂದ ತುಂಬಿರುವ ರೈಲನ್ನು ಪ್ರಯಾಣಿಕರ ಕೊರತೆಯ ನೆಪ ಹೇಳಿ ರದ್ದುಗೊಳಿಸುತ್ತಿರುವುದು ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು.
ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ನಡುವೆ ಮೂರು ತಿಂಗಳ ಕಾಲ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆಯ ಅಂಕಿ ಸಂಖ್ಯೆಯನ್ನು ಬಹಿರಂಗ ಮಾಡಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದರು. ಈ ಕುರಿತು ಹಲವು ಪತ್ರಿಕೆ, ವೆಬ್‌ಸೈಟ್‌ಗಳಲ್ಲಿ ವರದಿಗಳು ಸಹ ಪ್ರಕಟಗೊಂಡಿದ್ದವು.
ಕೆಲವು ರೈಲು ಪ್ರಯಾಣಿಕರ ವೇದಿಕೆಗಳ ಟ್ವೀಟ್‌ಗಳಲ್ಲಿ ಕೇಂದ್ರ ಸಚಿವರನ್ನು ಟ್ಯಾಗ್ ಮಾಡಿ ರಾಜಧಾನಿ ಮತ್ತು ಉತ್ತರ ಕರ್ನಾಟಕ ಬೆಸೆಯುವ ರೈಲು ಸೇವೆ ರದ್ದು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್, ಶತಾಬ್ದಿ ಸೇರಿದಂತೆ ಅನೇಕ ರೈಲುಗಳ ಸಂಚಾರವಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲು ಸಂಚಾರ ನಡೆಸುತ್ತಿತ್ತು. ಆದರೆ ನೈಋತ್ಯ ರೈಲ್ವೆ ಈ ರೈಲು ರದ್ದು ಮಾಡಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications