3 ಹೆದ್ದಾರಿ ಸಂಪರ್ಕಿಸುವ ಬೆಂಗಳೂರಿನ ಈ ರಸ್ತೆ ಮಾರ್ಚ್‌ನಲ್ಲಿ ಮುಕ್ತ
ಬೆಂಗಳೂರು, ಫೆಬ್ರವರಿ 28; ಉದ್ಯಾನ ನಗರಿ ಬೆಂಗಳೂರಿನ ವಾಹನ ಸವಾರರಿಗೆ ಸಿಹಿಸುದ್ದಿಯೊಂದಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್‌ನಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಡಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಹೊಸಕೋಟೆ ಮೂಲಕ ಸಾಗುವ ಈ ರಸ್ತೆ ಮಾರ್ಚ್ ಮೊದಲ ವಾರದಲ್ಲಿ ಮುಕ್ತವಾಗಲಿದೆ.

2023ರ ನವೆಂಬರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರವನ್ನು ಆರಂಭಿಸುವ ಮೂಲಕ ಹೊಸಕೋಟೆ-ದೊಡ್ಡಬಳ್ಳಾಪುರ ನಡುವಿನ 34 ಕಿ. ಮೀ. ವ್ಯಾಪ್ತಿಯಲ್ಲಿ ಭಾಗಶಃ ವಾಹನ ಸಂಚಾರಕ್ಕೆ ಅವಕಾಶ ನೀಡಿದೆ. ಈಗ ಸಂಪೂರ್ಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಮೂರು ಹೆದ್ದಾರಿಗಳಿಗೆ ಸಂಪರ್ಕ: ಈ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಎನ್‌ಎಚ್ 48 (ತುಮೂರು ರಸ್ತೆ), ಎನ್‌ಹೆಚ್ 44 (ಬಳ್ಳಾರಿ ರಸ್ತೆ) ಮತ್ತು ಎನ್‌ಹೆಚ್ 75 (ಕೋಲಾರ ರಸ್ತೆ)ಯನ್ನು ಈ ಹೆದ್ದಾರಿ ಸಂಪರ್ಕಿಸುತ್ತದೆ.
ಡಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಈ ವಾರದ ಅಂತ್ಯದಲ್ಲಿ ಡಾಬಸ್‌ಪೇಟೆ-ಹೊಸಕೋಟೆ ನಡುವಿನ 80 ಕಿ. ಮೀ. ಮಾರ್ಗದ ಕಾಮಗಾರಿ ಪೂರ್ಣಗೊಳಿಸಿ ಮಾರ್ಚ್ ಮೊದಲ ವಾರದಲ್ಲಿ ಹೊಸಕೋಟೆ ತನಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.
ಒಂದು ಮೇಲ್ಸೇತುವೆ ಮತ್ತು ಒಂದು ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಬಾಕಿ ಇದೆ. ಮೂಲ ಯೋಜನೆಯಲ್ಲಿ ಅಂಡರ್ ಪಾಸ್ ಇರಲಿಲ್ಲ. ಆದರೆ ದೊಡ್ಡ ಬೆಳವಂಗಲದ ಗ್ರಾಮಸ್ಥರ ಬೇಡಿಕೆಯನ್ನು ಪುರಸ್ಕರಿಸಿ ಈ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಲಾಗಿದೆ.
ಎನ್‌ಹೆಚ್ಎಐ ಯೋಜನಾ ನಿರ್ದೇಶಕ ಕೆ. ಬಿ. ಜಯಕುಮಾರ್ ಯೋಜನೆ ಕುರಿತು ಮಾಹಿತಿ ನೀಡಿ, "ದೊಡ್ಡಬಳ್ಳಾಪುರ-ಹೊಸಕೋಟೆ ನಡುವಿನ 34 ಕಿ. ಮೀ. ರಸ್ತೆಯನ್ನು ಜನರು ಉತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ 80 ಕಿ. ಮೀ. ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಇದೆ" ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Glimpse of Satellite Town Ring Road (STRR) which is connecting Hoskote to Doddaballapur#betterCommute @MALimbavali @ArvindLBJP @manoharGABJP @Clementcjayakum pic.twitter.com/iM60ilu61w
— Mahadevapura Task Force-Mobility (@MTF_Mobility) February 27, 2024
ಈ ಮಾರ್ಗ ಸಂಚಾರಕ್ಕೆ ಮುಕ್ತವಾದರೆ ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಬರುವ ಭಾರೀ ವಾಹನಗಳ ಪ್ರಮಾಣ ಶೇ 40ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು-ಕೋಲಾರ ಮಾರ್ಗದ ವಾಹನಗಳು ನಗರ ಪ್ರವೇಶ ಮಾಡದೇ ಸಾಗಲಿದ್ದು, ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡಿರುವ ಈ ರಸ್ತೆಯ ಚಿತ್ರಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ದಿನನಿತ್ಯ ಹೆಚ್ಚುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಈ ರಸ್ತೆ ಕಡಿಮೆ ಮಾಡಿದರೆ ವಾಹನ ಸವಾರರು ನಿಟ್ಟುಸಿರು ಬಿಡಲಿದ್ದಾರೆ.
ಈ ದೊಡ್ಡಬಳ್ಳಾಪುರ-ಹೊಸಕೋಟೆ ನಡುವಿನ ರಸ್ತೆಯಲ್ಲಿ ಹುಲಿಕುಂಟೆ ಬಳಿ ಟೋಲ್ ಪ್ಲಾಜಾ ಇದೆ. ಹೊಸಕೋಟೆಯ ಬಳಿಕ ಈ ರಸ್ತೆಯನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಹ ಸಂಪರ್ಕಿಸಲಾಗಿದೆ. ಆದ್ದರಿಂದ ಈ ರಸ್ತೆ ಮೂಲಕ ಸಾಗಿದರೆ ಆಂಧ್ರ ಪ್ರದೇಶ, ತಮಿಳುನಾಡು ಕಡೆಗೆ ಸಂಚಾರ ನಡೆಸಲು ಸಹ ಅನುಕೂಲವಾಗಲಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ (ಬಿಇಸಿ) ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ಮಹತ್ವದ ಯೋಜನೆ ಎನ್‌ಹೆಚ್‌ಎಐ ಈ 258 ಕಿ. ಮೀ. ಉದ್ದದ ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. ಹೊಸಕೋಟೆ ಮೂಲಕ ಆರಂಭವಾಗುವ ಈ ರಸ್ತೆ ಚಿತ್ತೂರು ಮೂಲಕ ತಮಿಳುನಾಡಿಗೆ ಸಂಪರ್ಕಿಸುತ್ತದೆ.












Click it and Unblock the Notifications