ಧುಮ್ಮಿಕ್ಕು ಜಲಸಿರಿ..ಪವಿತ್ರ ತೀರ್ಥ ದೇವರಗುಂಡಿ ಜಲಪಾತದ ಇತಿಹಾಸವೇನು?
ಮಡಿಕೇರಿ, ಆಗಸ್ಟ್ 07: ದೇವರಗುಂಡಿ ಜಲಪಾತವು ಪಶ್ಚಿಮಘಟ್ಟದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಸುಂದರ ನಿಸರ್ಗದಲ್ಲಿ ನೆಲೆನಿಂತಿದೆ. ಇದು ನೋಡಲು ಸುಂದರ ಮಾತ್ರವಲ್ಲದೆ, ಪರಮ ಪವಿತ್ರ ತೀರ್ಥವೂ ಹೌದು. ಇಲ್ಲಿ ಸ್ನಾನ ಮಾಡಿದರೆ ಪಾಪ ಕರ್ಮಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಇಲ್ಲಿಗೆ ಪ್ರವಾಸಿಗರಿಗಾಗಿ ಬರುವುದಕ್ಕಿಂತ ಭಕ್ತರಾಗಿ ಬರುವವರ ಸಂಖ್ಯೆ ಹೆಚ್ಚಿದೆ.
ಮೇಲ್ನೋಟಕ್ಕೆ ಜಲಪಾತ ಪುಟ್ಟದಾಗಿ ಕಂಡು ಬಂದರೂ ಇದರ ಮಹತ್ವ ದೊಡ್ಡದಾಗಿದೆ. ಆದ್ದರಿಂದಲೇ ಭಕ್ತರು ಇದನ್ನು ಪರಮ ಪವಿತ್ರ ತೀರ್ಥವೆಂದು ಸ್ವೀಕರಿಸುತ್ತಾರೆ. ಇದಕ್ಕೆ ಕಾರಣವಿದೆ. ಇದು ಬೆಟ್ಟದ ನಡುವಿನಿಂದ ಹರಿದು ಬರುವುದಲ್ಲದೆ, ಯಾವುದೇ ಕಲ್ಮಶವಿಲ್ಲದ ನೈಸರ್ಗಿಕ ನೀರಾಗಿದೆ. ಇದು ಧುಮುಕುವಾಗ ಸುಂದರ ಜಲಪಾತ ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ಇದರ ಭೋರ್ಗರೆತ ಜೋರಾಗಿರುತ್ತದೆ.

ಹಾಗಾದರೆ ದೇವರಗುಂಡಿ ಜಲಪಾತ ಎಲ್ಲಿದೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ದೇವರಗುಂಡಿ ಜಲಪಾತವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಬಳಿಯಿದೆ. ಬೆಟ್ಟಗುಡ್ಡಗಳ ಕಾನನದ ನಡುವೆ ಮತ್ತು ಅಡಿಕೆ ತೆಂಗು ತೋಟಗಳ ಹಾದಿಯಲ್ಲಿದೆ. ಜಲಪಾತದತ್ತ ಸುಂದರ ನಿಸರ್ಗದ ನಡುವೆ ಸಾಗುವುದೇ ಒಂದು ಅದ್ಭುತ ಅನುಭವ. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯದ ಬಳಿಯಲ್ಲಿಯೇ ನದಿಯೊಂದು ಹರಿಯುತ್ತದೆ. ಇಲ್ಲಿ ಮತ್ಸ್ಯತಟಾಕವಿದ್ದು, ಇಲ್ಲಿ ಏಕರೂಪದ ಸಹಸ್ರಾರು ಮೀನುಗಳಿವೆ ಇವುಗಳನ್ನು ನೋಡಿಕೊಂಡು ಸುಮಾರು ಎರಡು ಕಿ.ಮೀ. ದೂರ ಸಾಗಿದರೆ ಜಲಪಾತವನ್ನು ತಲುಪಬಹುದು.
ಮತ್ಸ್ಯತೀರ್ಥ ನದಿಯಿಂದ ಜಲಪಾತ ಸೃಷ್ಟಿ
ಪಟ್ಟಿಮಲೆ ಎಂಬಲ್ಲಿಂದ ಹರಿದು ಬರುವ ಮತ್ಸ್ಯತೀರ್ಥ ಎಂಬ ನದಿಯು ದೇವರಗುಂಡಿ ಎಂಬಲ್ಲಿ ಸುಮಾರು ಮೂವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಜಲಪಾತವನ್ನು ಸೃಷ್ಟಿಸಿದೆ. ಇದನ್ನು "ದೇವರಗುಂಡಿ ಜಲಪಾತ" ಎಂದೇ ಕರೆಯುತ್ತಾರೆ. ಜಲಧಾರೆಯು ಧುಮುಕಿ ಬೀಳುವಲ್ಲಿ ಬೃಹತ್ ಗುಂಡಿಯಿದ್ದು ಇಲ್ಲಿಂದ ಶಿವನು ವಿಷ್ಣುವನ್ನು ಮತ್ಸ್ಯ ವಾಹನವನ್ನಾಗಿ ಮಾಡಿಕೊಂಡು ಅಂತರ ಮಾರ್ಗದಿಂದ ತೊಡಿಕಾನದ ಮಲ್ಲಿಕಾರ್ಜುನ ದೇಗುಲವಿರುವ ಸ್ಥಳಕ್ಕೆ ಬಂದಿದ್ದನು ಎಂದು ಹೇಳಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುವವರು ಕೇವಲ ಜಲಪಾತವನ್ನು ನೋಡಿ ಹಿಂತಿರುಗುವುದಿಲ್ಲ. ಬದಲಿಗೆ ಇಲ್ಲಿನ ಜಲವನ್ನು ತೀರ್ಥವೆಂದು ಸ್ವೀಕರಿಸುವುದು ಇಲ್ಲಿನ ವಿಶೇಷತೆ.

ಜಲಪಾತ ಇರುವ ಸ್ಥಳವನ್ನು ತೊಡಿಕಾನ ಎಂದು ಕರೆಯಲಾಗುತ್ತಿದ್ದು, ಈ ತೊಡಿಕಾನ ಪ್ರಕೃತಿ ಸುಂದರ ರಮಣೀಯತೆಯನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ನಿಸರ್ಗದ ರಮ್ಯನೋಟ ಲಭ್ಯವಾಗುತ್ತದೆ. ಇನ್ನು ತೊಡಿಕಾನ ಎಂಬ ಹೆಸರು ಹೇಗೆ ಬಂದಿರಬಹುದು ಎಂಬುದನ್ನು ನೋಡುತ್ತಾ ಹೋದರೆ.. ಈ ತಾಣವು ಬೆಟ್ಟಗುಡ್ಡಗಳ ಬುಡದಲ್ಲಿದ್ದು, ದಟ್ಟವಾದ ಕಾಡಿನಿಂದ ಕೂಡಿದ ಕಾರಣ ಇದನ್ನು "ತಡಿ" ಅಂದರೆ ತಪ್ಪಲು "ಕಾನ" ಅಂದರೆ ಕಾಡು. ಒಟ್ಟಾಗಿ ತಡಿಕಾನ ಎಂದು ಕರೆಯಲಾಗುತ್ತಿತ್ತು.
ಕ್ರಮೇಣ ಬಾಯಿಯಿಂದ ಬಾಯಿಗೆ ಉಚ್ಛಾರಣೆ ಮಾಡುವಲ್ಲಿ ತೊಡಿಕಾನವಾಯಿತೆಂದು ಹೇಳಲಾಗುತ್ತಿದೆ. ತೊಡಿಕಾನದಲ್ಲಿ ಕಣ್ವ ಮುನಿಗಳು ತಪಸ್ಸು ಮಾಡಿದ್ದರೆಂದೂ, ಶಿವ ಮತ್ತು ಅರ್ಜುನನಿಗೆ ಯುದ್ಧ ನಡೆದ ಸ್ಥಳವೆಂದೂ ಆ ಕಾರಣಕ್ಕಾಗಿಯೇ ಈ ಸ್ಥಳ ಇಂದಿಗೂ ಪವಿತ್ರ ಕ್ಷೇತ್ರವಾಗಿದೆ. ಜತೆಗೆ ಇಲ್ಲಿ ಧುಮುಕುವ ಜಲಧಾರೆಯೂ ಪವಿತ್ರವಾಗಿದೆ.
ಜಲಪಾತದ ಬಳಿಗೆ ಹೋಗುವುದು ಹೇಗೆ?
ಇನ್ನು ದೇವರಗುಂಡಿ ಜಲಪಾತದ ಬಳಿಗೆ ಹೋಗುವುದು ಹೇಗೆಂದರೆ? ಕೊಡಗಿನ ಕಡೆಯಿಂದ ಹೋಗುವುದಾದರೆ ಮಡಿಕೇರಿಯಿಂದ ಸುಳ್ಯದತ್ತ ಹೊರಟರೆ ಗಡಿಭಾಗವಾದ ಸಂಪಾಜೆ ಬಳಿಕ ಸಿಗುವ ಅರಂತೋಡು ಎಂಬಲ್ಲಿ ತೆರಳಿ ಅಲ್ಲಿಂದ ಎಡಕ್ಕೆ ಸುಮಾರು ಆರು ಕಿ.ಮೀ. ದೂರ ಸಾಗಿದರೆ ತೊಡಿಕಾನ ಕ್ಷೇತ್ರ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಹೋದರೆ ದೇವರಗುಂಡಿ ಜಲಪಾತವನ್ನು ತಲುಪಬಹುದಾಗಿದೆ. ದೇವರಗುಂಡಿ ಜಲಪಾತಕ್ಕೆ ಹೋಗುವುದಾದರೆ ಖಾಸಗಿ ವಾಹನಗಳ ವ್ಯವಸ್ಥೆಯಿದೆ. ಅಷ್ಟೇ ಅಲ್ಲದೆ ಖಾಸಗಿ ಬಸ್ ವ್ಯವಸ್ಥೆಯೂ ಇದೆ.












Click it and Unblock the Notifications