ಯಶವಂತಪುರ-ಮುರುಡೇಶ್ವರ ರೈಲು ಪ್ರತಿದಿನ ಓಡಿಸಲು ಬೇಡಿಕೆ
ಬೆಂಗಳೂರು, ಜುಲೈ 16; ಭಾರತೀಯ ರೈಲ್ವೆ ಈಗಾಗಲೇ ಕರಾವಳಿ ಭಾಗದ ಜನರಿಗೆ ಸಿಹಿಸುದ್ದಿ ಕೊಟ್ಟಿದೆ. ವಾರಾಂತ್ಯದಲ್ಲಿ ಸಂಚಾರ ನಡೆಸುವ ಯಶವಂತಪುರ-ಮುರುಡೇಶ್ವರ ನಡುವಿನ ರೈಲು ಸ್ಥಗಿತಗೊಳಿಸುವ ತೀರ್ಮಾನಿಂದ ಹಿಂದೆ ಸರಿದು, ರೈಲನ್ನು ಜುಲೈ ತಿಂಗಳ ಅಂತ್ಯದ ತನಕ ವಿಸ್ತರಣೆ ಮಾಡಿದೆ.
ವಾರಾಂತ್ಯದಲ್ಲಿ ಮಾತ್ರ ಸಂಚಾರ ನಡೆಸುವ ಯಶವಂತಪುರ-ಮುರುಡೇಶ್ವರ ರೈಲನ್ನು ಪ್ರತಿದಿನ ಓಡಿಸಬೇಕು ಎಂದು ಒತ್ತಾಯಿಸಲಾಗಿದೆ. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಪ್ರಮುಖರು ಈ ಕುರಿತು ನೈಋತ್ಯ ರೈಲ್ವೆಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಸದಸ್ಯರಾದ ನಾಗರಾಜ್ ಆಚಾರ್, ರಾಜೀವ್ ಗಾಂವ್ಕರ್ ಮುಂತಾದವರು ಈ ಕುರಿತು ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ರೈಲು ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗವನ್ನು ಸಂಪರ್ಕಿಸಲಿದ್ದು, ನೂರಾರು ಜನರಿಗೆ ಅನುಕೂಲವಾಗಲಿದೆ.
ವೇಳಾಪಟ್ಟಿಯನ್ನು ಬದಲಾವಣೆ ಮಾಡಿ; ಯಶವಂತಪುರ-ಮುರುಡೇಶ್ವರ ರೈಲು ಬೆಂಗಳೂರಿನಿಂದ ಪ್ರತಿದಿನ ತಡವಾಗಿ ಹೊರಟು ಕುಂದಾಪುರ, ಕಾರವಾರಕ್ಕೆ ಬೆಳಗ್ಗೆ ತಲುಪುವಂತೆ ವಾರದ 7 ದಿನ ಸಹ ಸಂಚಾರ ನಡೆಸುವಂತೆ ಆಗಬೇಕು ಎಂದು ಬೇಡಿಕೆ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರಿನ ಯಶವಂತಪುರ ಮತ್ತು ಮುರುಡೇಶ್ವರ ನಡುವೆ ರೈಲ್ವೆ ರೈಲು ನಂಬರ್ 06563/ 06564 ಸಂಚಾರ ನಡೆಸುತ್ತದೆ. ಈ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ರೈಲ್ವೆ ಪ್ರಯಾಣಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರೈಲು ನಿಲ್ಲಿಸಿದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದರು.
ಬಳಿಕ ಭಾರತೀಯ ರೈಲ್ವೆ ಆದೇಶವೊಂದನ್ನು ಹೊರಡಿಸಿ ರೈಲು ನಂಬರ್ 06563 ಯಶವಂತಪುರ-ಮುರುಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜುಲೈ ತಿಂಗಳಿನಲ್ಲಿ 1, 8, 15, 22 ಮತ್ತು 29ರಂದು ಸಂಚಾರ ನಡೆಸಲಿದೆ. ರೈಲು ನಂಬರ್ 06564 ಮರುಡೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಪ್ರತಿ ರವಿವಾರ ಸಂಚಾರ ನಡೆಸಲಿದೆ ಎಂದು ಹೇಳಿತ್ತು.
ಈ ರೈಲಿನ ಶೇ 100ರಷ್ಟು ಆಸನಗಳು ಸಹ ಭರ್ತಿ ಆಗುತ್ತಿವೆ. ಶನಿವಾರ ರಾತ್ರಿ ಬೆಂಗಳೂರು ನಗರದಿಂದ ಹೊರಡುವ ರೈಲು ಭಾನುವಾರ ರಾತ್ರಿ ಮರುಡೇಶ್ವರದಿಂದ ವಾಪಸ್ ಹೊರಟು ಬೆಂಗಳೂರು ತಲಪುತ್ತದೆ. ಆದ್ದರಿಂದ ಬೆಂಗಳೂರು ಮತ್ತು ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಕುಂದಾಪುರ, ಉಡುಪಿ, ಬೈಂದೂರು ಭಾಗದ ಜನರಿಗೆ ಈ ರೈಲು ಸಹಕಾರಿಯಾಗಿದೆ.
ಸಮಸ್ಯೆ ಬಗೆಹರಿಸಿ; ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಬೆಂಗಳೂರಿನಿಂದ ಕಾರವಾರಕ್ಕೆ ಸಂಚರಿಸುವ ಪಂಚಗಂಗಾ ರೈಲು ಪಡೀಲ್ ಬೈಪಾಸ್ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಕಚೇರಿ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಅನುಕೂಲವಾಗಿದೆ.
ಆದರೆ ಇತ್ತೀಚೆಗೆ ಘಾಟಿ ಪ್ರದೇಶದಲ್ಲಿ ನಿಧಾನಗತಿಯಲ್ಲಿ ಸಂಚರಿಸುವ ಕಾರಣ ಬೆಂಗಳೂರು ತಲುಪುವುದು ತಡವಾಗುತ್ತಿರುವುದರಿಂದ ಕರಾವಳಿ ಭಾಗದವರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸುವಂತೆಯೂ ಮನವಿ ಮಾಡಿದೆ.
ಕರಾವಳಿ ಮತ್ತು ಬೆಂಗಳೂರು ಸಂಪರ್ಕಿಸಲು ಪಂಚಗಂಗಾ ರೈಲಿಗೆ ಪರ್ಯಾಯವಾಗಿ ಮತ್ತೊಂದು ಹೊಸ ರೈಲು ಆರಂಭಿಸಬೇಕು ಎಂಬ ಬೇಡಿಕೆ ಇದೆ. ಯಶವಂತಪುರ-ಮುರುಡೇಶ್ವರ ರೈಲನ್ನು ಕಾರವಾರದ ತನಕ ವಿಸ್ತರಣೆ ಮಾಡಿ ಎಂದು ಸಹ ಮನವಿ ಸಲ್ಲಿಸಿದೆ.
ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಪುಣ್ಯ ಕ್ಷೇತ್ರ ತಿರುಪತಿ ಮತ್ತು ಇತರ ಕ್ಷೇತ್ರಗಳಿಗೆ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಸಮಿತಿಯ ಬೇಡಿಕೆಗಳಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ ಅಧಿಕಾರಿಗಳು ಎಲ್ಲಾ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ.












Click it and Unblock the Notifications