Vande Bharat Express: ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು?
ಬೆಂಗಳೂರು, ಸೆಪ್ಟೆಂಬರ್ 29: ಭಾರತೀಯ ರೈಲ್ವೆಯ ಸೆಮಿ ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಈಗಾಗಲೇ 60ಕ್ಕೂ ಅಧಿಕ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲು 2025ರಲ್ಲಿ ಸಂಚಾರ ಆರಂಭಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿಯೇ ಬಿಇಎಂಎಲ್ ಈ ಮಾದರಿ ರೈಲುಗಳ ಬೋಗಿಯನ್ನು ತಯಾರು ಮಾಡುತ್ತಿದೆ.
ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿಗೂ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೆಪ್ಟೆಂಬರ್ 1ರಂದು ಬಿಇಎಂಎಲ್‌ನ ಬೆಂಗಳೂರು ರೈಲು ಸಂಕೀರ್ಣದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ಅನ್ನು ವೀಕ್ಷಣೆ ಮಾಡಿದ್ದಾರೆ. ಈ ರೈಲು ದೂರ ರೈಲು ಪ್ರಯಾಣದಲ್ಲಿ ಕ್ರಾಂತಿ ಉಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಯಾವ-ಯಾವ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಓಡಿಸಬೇಕು? ಎಂದು ಭಾರತೀಯ ರೈಲ್ವೆ ತೀರ್ಮಾನ ಮಾಡಲಿದೆ. ಆದರೆ ಬೆಂಗಳೂರು-ಮುಂಬೈ ಮಾರ್ಗದಲ್ಲಿ ಈ ಮಾದರಿ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಭಾರತದ ಎರಡು ಪ್ರಮುಖ ನಗರಗಳನ್ನು ವಂದೇ ಭಾರತ್ ಸ್ಲೀಪರ್ ರೈಲು ಸಂಪರ್ಕಿಸಲಿದೆಯೇ? ಎಂದು ಕಾದು ನೋಡಬೇಕಿದೆ.
ವಂದೇ ಭಾರತ್ ಸ್ಲೀಪರ್ ರೈಲು ಏಕೆ ಬೇಕು?; ಬೆಂಗಳೂರು, ಪುಣೆ ಮತ್ತು ಮುಂಬೈ ಭಾರತದ ಪ್ರಮುಖ ವಾಣಿಜ್ಯ ನಗರಗಳು. ಆದರೆ ಈ ನಗರಗಳ ನಡುವೆ ವೇಗವಾಗಿ ಮತ್ತು ತ್ವರಿತವಾಗಿ ಸಂಪರ್ಕವನ್ನು ಕಲ್ಪಿಸುವ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಬೆಂಗಳೂರು-ಮುಂಬೈ ವಯಾ ಪುಣೆ ನಡುವಿನ ಸಂಪರ್ಕಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಈ ಮಾರ್ಗದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ಸಂಚಾರವನ್ನು ನಡೆಸುತ್ತಿದೆ. 32 ನಿಲ್ದಾಣಗಳನ್ನು ಹೊಂದಿರುವ ಈ ರೈಲು ಸಂಚಾರಕ್ಕೆ 23 ಗಂಟೆ ತೆಗೆದುಕೊಳ್ಳುತ್ತದೆ. ಅಲ್ಲದೇ ಈ ರೈಲು ಪ್ರಯಾಣಿಕರಿಂದ ತುಂಬಿ ಹೋಗಿರುತ್ತದೆ. ವೈಟಿಂಗ್ ಲಿಸ್ಟ್‌ನಲ್ಲಿರುವವರು ಸೀಟು ಪಡೆಯುವುದು ಅಷ್ಟು ಸುಲಭವಲ್ಲ. ಆದ್ದರಿಂದ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಬೆಂಗಳೂರು-ಮುಂಬೈ ವಯಾ ಪುಣೆ ಮಾರ್ಗದಲ್ಲಿ ಬೇಕು ಎನ್ನುವುದು ಬೇಡಿಕೆಯಾಗಿದೆ.
ಬೆಂಗಳೂರು-ಮುಂಬೈ ನಡುವೆ ಸಂಚಾರ ನಡೆಸಲು ಬಸ್ 16 ಗಂಟೆಯನ್ನು ತೆಗೆದುಕೊಳ್ಳುತ್ತದೆ. ಆದರೆ ಬಸ್‌ಗಳ ದರ ಅಧಿಕವಾಗಿದ್ದು, ಜನರು ರೈಲು ಪ್ರಯಾಣವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಅದರಲ್ಲೂ ಹಬ್ಬಗಳು, ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಬೆಂಗಳೂರು-ಮುಂಬೈ ನಡುವೆ ಹೆಚ್ಚಿನ ಜನರು ಸಂಚಾರ ನಡೆಸುತ್ತಿದ್ದು, ವೇಗವಾಗಿ ಸಂಚಾರ ನಡೆಸಬಲ್ಲ ಐಷಾರಾಮಿ ರೈಲಿನ ಅಗತ್ಯ ಈ ಮಾರ್ಗದಲ್ಲಿದೆ.
ರೈಲ್ವೆ ಹೋರಾಟಗಾರರ ಪ್ರಕಾರ ಬೆಂಗಳೂರು-ಪುಣೆ-ಮುಂಬೈ ದೇಶದ ಅತ್ಯಂತ ಬ್ಯುಸಿ ಇರುವ ರೈಲು ಮಾರ್ಗದಲ್ಲಿ ಒಂದು. ಶಿಕ್ಷಣ, ಉದ್ಯೋಗ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕಾರಣಕ್ಕೆ ಈ ನಗರಗಳ ನಡುವೆ ಜನರು ಹೆಚ್ಚಾಗಿ ಸಂಚಾರವನ್ನು ನಡೆಸುತ್ತಾರೆ. ಈ ಮಾರ್ಗದ ರೈಲುಗಳು ಸದಾ ಪ್ರಯಾಣಿಕರಿಂದ ಭರ್ತಿಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರು-ಮುಂಬೈ ವಯಾ ಪುಣೆ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರವನ್ನು ಆರಂಭಿಸಿದರೆ ಅದು ಪ್ರಯಾಣದ ಅವಧಿಯನ್ನು 16 ಗಂಟೆಗಳಿಗೆ ಇಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಗಂಟೆಗೆ 70 ಕಿ. ಮೀ. ವೇಗದಲ್ಲಿ ರೈಲು ಓಡಿದರೂ ಸಹ 16 ಗಂಟೆಗಳಲ್ಲಿ ಸಂಚಾರ ನಡೆಸಬಹುದು. ಸದ್ಯ ಸಂಚಾರ ನಡೆಸುತ್ತಿರುವ ಉದ್ಯಾನ್ ಎಕ್ಸ್‌ಪ್ರೆಸ್‌ಗಿಂತ ವೇಗವಾಗಿ ತಲುಪಬಹುದು.
ಕೆಲವು ದಿನಗಳ ಹಿಂದೆ ರೈಲ್ವೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿಯೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು-ಮುಂಬೈ ನಡುವೆ ಸಂಪರ್ಕ ಕಲ್ಪಿಸಲು ಸಾರಿಗೆ ಸಂಪರ್ಕದ ಕೊರತೆ ಇರುವ ಕುರಿತು ವಿಷಯ ಪ್ರಸ್ತಾಪಿಸಿದ್ದಾರೆ. ರೈಲ್ವೆ ಇಲಾಖೆ ಕುರಿತು ಮೊದಲ ಆದ್ಯತೆಯ ಮೇಲೆ ಗಮನ ಹರಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
2024ರ ಡಿಸೆಂಬರ್ ಅಂತ್ಯ ಅಥವ 2025ರಲ್ಲಿ ಭಾರತೀಯ ರೈಲ್ವೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಸಂಚಾರವನ್ನು ಆರಂಭಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿಯೇ ಬೋಗಿಗಳು ತಯಾರಾಗುವುದರಿಂದ ಬೆಂಗಳೂರು-ಮುಂಬೈ ಮಾರ್ಗದಲ್ಲಿ ರೈಲು ಓಡಿಸಲು ಇಲಾಖೆ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications