ಚಾಲಕನಿಲ್ಲದೆ ಜಮ್ಮುವಿಂದ ಪಂಜಾಬ್‌ಗೆ ಇದ್ದಕ್ಕಿದ್ದಂತೆ ಓಡಿದ ಚಿಕುಪುಕು!
ಚಂಡೀಗಢ ಫೆಬ್ರವರಿ 26: ರೈಲು ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ರೈಲಿನಿಂದ ಕೆಳಗಿಳಿದ ಪರಿಣಾಮ ಗೂಡ್ಸ್ ರೈಲೊಂದು ಯಾವುದೇ ಚಾಲಕನಿಲ್ಲದೆ ತಂತಾನೇ ಬರೋಬ್ಬರಿ 70 ಕಿ.ಮೀ ದೂರ ಚಲಿಸಿದ ಅಚ್ಚರಿಯ ಘಟನೆ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ನಡೆದಿದೆ. ಕೊನೆಗೆ ಮರಳು ಚೀಲ ಇಟ್ಟು ರೈಲು ನಿಲ್ಲಿಸಲಾಗಿದೆ.
ಜಮ್ಮುವಿನಿಂದ ಪಂಜಾಬ್‌ಗೆ ತೆರಳುತ್ತಿದ್ದ ಸುಮಾರು 53 ವ್ಯಾಗನ್‌ಗಳಿದ್ದ ರೈಲು ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಚಲಿಸಿದೆ. ರೈಲು ಚಲಿಸುತ್ತಿರುವುದನ್ನು ಕಂಡ ಚಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಭಾನುವಾರ ರೈಲು ತಂತಾನೇ ಚಲಿಸಿದ ತಕ್ಷಣ ಅಧಿಕಾರಿಗಳ ಗಮನಕ್ಕೆ ಬಂದಿದೆಯಾದರೂ ಅಷ್ಟು ವೇಗದಲ್ಲಿದ್ದ ರೈಲನ್ನು ನಿಲ್ಲಿಸುವುದು ಸವಾಲಿನ ಕೆಲಸವಾಗಿತ್ತು. ಕೊನೆಗೆ ರೈಲು 70 ಕಿ.ಮೀ ಕ್ರಮಿಸಿದ ಬಳಿಕ ಹಳಿಯಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ.

ತನ್ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಎದುರಿನ ಹಳಿಯಲ್ಲಿ ಬೇರೆ ಯಾವುದೇ ರೈಲು ಇರಲಿಲ್ಲ, ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸಬಹುದಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರೈಲ್ವೇ ಈ ಬಗ್ಗೆ ತನಿಖೆಗೆ ಆದೇಶಿಸಿದೆ ಮತ್ತು ಕಾರಣಗಳನ್ನು ಕಂಡುಹಿಡಿಯಲು ಫಿರೋಜ್‌ಪುರದಿಂದ ತಂಡವನ್ನು ಕಳುಹಿಸಲಾಗಿದೆ.
ಮೊದಲ ಸಿಬ್ಬಂದಿ ತೆರಳಿದಾಗ ಮತ್ತು ಎರಡನೇ ಸಿಬ್ಬಂದಿ ಅಧಿಕಾರ ವಹಿಸಿಕೊಂಡಾಗ ರೈಲಿನ ಕ್ಯಾಬಿನ್ ಸುರಕ್ಷಿತವಾಗಿರಲಿಲ್ಲ ಎಂದು ಮೇಲ್ನೋಟಕ್ಕೆ ತೋರುತ್ತದೆ ಎಂದು ರೈಲ್ವೆ ಮೂಲಗಳು ಹೇಳುತ್ತವೆ. ಗೂಡ್ಸ್ ರೈಲು ರೈಲ್ವೇ ನಿರ್ಮಾಣಕ್ಕೆ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಏನಿದು ಘಟನೆ?
ಜಮ್ಮುವನಿಂದ ಪಂಜಾಬ್‌ಗೆ ಚಲಿಸುತ್ತಿದ್ದ ರೈಲು, ಚಾಲಕನ ಬದಲಾವಣೆಗಾಗಿ ಜಮ್ಮುವಿನ ಕಠವಾ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 7.25 ರ ಸುಮಾರಿಗೆ ನಿಂತಿತ್ತು. ಗೂಡ್ಸ್ ರೈಲು ಸಂಖ್ಯೆ 14806 ಆರ್ ರೈಲು ನಿಲ್ಲಿಸಿದ ಚಾಲಕ ಅದರಿಂದ ಕೆಳಗಿಳಿವ ವೇಳೆಗೆ ಹ್ಯಾಂಡ್ ಬ್ರೇಕ್ ಹಾಕಲು ಮರೆತುಬಿಟ್ಟಿದ್ದಾನೆ.

ಹೀಗಾಗಿ ಇಳಿಜಾರಿದ್ದ ಕಾರಣ ರೈಲು ಚಲಿಸಲು ಪ್ರಾರಂಭಿಸಿದೆ. ಈ ವೇಳೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಯಾರೂ ಕೂಡ ರೈಲಿನಲ್ಲಿ ಇರಲಿಲ್ಲ. ಬಳಿಕ 9 ಗಂಟೆ ವೇಳೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ. ಚಾಲಕನಿಲ್ಲದೇ ರೈಲು ಓಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.











Click it and Unblock the Notifications