Get Updates
Get notified of breaking news, exclusive insights, and must-see stories!

ಜೋಗ ಜಲಪಾತ : ಹೃದಯ ಸೂರೆಗೊಳ್ಳುವ ಜಲಧಾರೆ


ಜಲಪಾತದ ರುದ್ರರಮಣೀಯತೆ ಮಾತಿಗೆ ನಿಲಕದು. ಮಳೆಗಾಲದ ಅಬ್ಬರದ ಮಳೆಗೆ ಮೆರಗು ನೀಡುವ ಈ ವರ್ಣ ವೈಭವದ ನೈಜತೆ ನೋಡೇ ತಣಿಯಬೇಕು. ಜಲಧಾರೆಗಳ ಹೃದಯ ನಡುಗಿಸುವ ಸದ್ದು, ಕಡಿದಾದ ಕಣಿವೆಯ ಪರಿಸರ ಬೇರೆಯದೇ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ತುಂಬಿತುಳುಕುವ ಜೋಗದ ರಾಣಿಯನ್ನು ಕಾಣಲು ಈಗ ಸುಸುಮಯ.

ಜೋಗ ಜಲಪಾತ ಪ್ರವಾಸಿಗರ ಕಣ್ಮನ ಸೆಳೆಯುವ ತಾಣ. ಇಲ್ಲಿ ತಂತಾನೇ ‘ ಓಹ್‌ ಎಂಥ ಸೊಬಗು ....‘ ಎಂಬ ಉದ್ಘಾರ ಹೊರಡುತ್ತದೆ. ಆದರೆ ಕರ್ನಾಟಕದ ಹೆಮ್ಮೆಯ ಪುತ್ರ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ನಾಡಿನ ಖ್ಯಾತ ಇಂಜಿನಿಯರ್‌ ಸರ್‌. ಎಂ.ವಿಶ್ವೇಶ್ವರಯ್ಯ ಮೊದಲ ಬಾರಿಗೆ ಇದನ್ನು ಕಂಡು ‘ಇದೆಂಥ ಅಪವ್ಯಯ‘ (ವ್ಹಾಟ್‌ ಎ ಗ್ರೇಟ್‌ ಲಾಸ್‌) ಎಂದು ಉದ್ಘರಿಸಿದ್ದರಂತೆ. ಅವರ ಕನಸಿನ ಕೂಸುಗಳೇ ಇಂದಿನ ಶರಾವತಿ ವಿದ್ಯುದಾಗಾರಗಳು.

ಅದರಂತೆ ಉತ್ತರ ಕನ್ನಡ ಜಿಲ್ಲೆಯ ಸುಪುತ್ರ, ಹೆಮ್ಮೆಯ ಕವಿ ‘ದಿನಕರ ದೇಸಾಯಿ‘ ಅವರ ಕಲ್ಪನಾ ಶಕ್ತಿಗೆ, ಉತ್ತಮ ರಚನೆಗಳಿಗೆ, ಜಿಲ್ಲೆಯ ಪ್ರಕೃತಿ ಸೌಂದರ್ಯ ತನ್ನ ಅಮೂಲ್ಯ ಕಾಣಿಕೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಜಲಪಾತಗಳಿದ್ದು ಪ್ರತಿಯೊಂದು ಅದರದೇ ವಿಶಿಷ್ಟತೆ ಹೊಂದಿದೆ. ಅದರಲ್ಲೂ ಜೋಗದ ಸೊಬಗಿಗೆ ಸಾಟಿ ಇನ್ನೊಂದಿಲ್ಲ ಎನ್ನುವ ಕವಿ ರಚನೆಯ ಸಾಲುಗಳಂತೆ, ಇಲ್ಲಿನ ದೃಶ್ಯ ವೈಭವ ಮಳೆಗಾಲದ ಈ ದಿನಗಳಲ್ಲಿ ಮಂತ್ರಮುಗ್ಧಗೊಳಿಸುತ್ತದೆ.

World famous Jog Fallsಧೀರ ನಡಿಗೆಯ ರಾಜ, ಬಳಕುತ್ತಾ ಧುಮ್ಮಿಕ್ಕುವ ರಾಣಿ, ಹುಲಿಯಂತೆ ಆರ್ಭಟಿಸುತ್ತಾ ಪಾತಾಳ ಸೇರುವ ರೋರರ್‌, ಬಾಣದಂತೆ ಚಿಮ್ಮಿ, ನೊರೆ ಹಾಲುಕ್ಕಿಸುವಂತಿರುವ ರಾಕೆಟ್‌ ಜಲಧಾರೆಗಳ ಸೌಂದರ್ಯ, ಶಬ್ದಗಳಲ್ಲಿ ಹಿಡಿದಿಡಲಾಗದು. ಇಲ್ಲಿನ ಜಲಧಾರೆಗಳಲ್ಲಿ ರಾಣಿಗೆ ಗೌರವನೀತ ತಡಸಲು ಎಂದು ಇನ್ನೊಂದು ಹೆಸರಿದೆ, ಅಂತೆಯೇ ರೋರರ್‌ಗೆ ಅಬ್ಬರ ತಡಸಲು ಎಂದು, ರಾಕೆಟ್‌ಗೆ ಬಾಣ ತಡಸಲು ಎಂದು ಕರೆಯಲಾಗುತ್ತಿದ್ದು, ಮೈಸೂರು ಅರಸರ ರಾಜ್ಯಾಡಳಿತದ ಅವಧಿಯಲ್ಲಿ ಬಾಣ ತಡಸಲಿನ ತಳದಿಂದ ಪಟಾಕಿ, ಬಾಣಬಿರುಸುಗಳನ್ನು ಚಿಮ್ಮಿಸಲಾಗುತ್ತಿರುವುದಾಗಿ ಹೇಳಲಾಗುತ್ತದೆ.

ಸುಮಾರು 250 ಅಡಿ ಚದುರದ ಹಾಸುಗಲ್ಲಿನ ಮೇಲಿಂದ ಹರಿದುಬರುತ್ತಾ ನೇರವಾಗಿ 960 ಅಡಿ ಆಳದ ಕಮರಿಗೆ ತಮ್ಮದೇ ಹೊಸಹೊಸ ಬಗೆಯ ವಿವಿಧ ವಿನ್ಯಾಸದೊಂದಿಗೆ ಧುಮುಕುವ ಈ ನಾಲ್ಕು ಜಲಧಾರೆಗಳ ನೋಟದ ರುಧ್ರರಮಣೀಯತೆಯು ಮಾತಿಗೆ ನಿಲಕದು. ಮಳೆಗಾಲದ ಅಬ್ಬರದ ಮಳೆಗೆ ಮೆರಗು ನೀಡುವ ಈ ವರ್ಣ ವೈಭವದ ನೈಜತೆ ನೋಡೇ ತಣಿಯಬೇಕು. ಜಲಧಾರೆಗಳ ಹೃದಯ ನಡುಗಿಸುವ ಶಬ್ದ, ಕಡಿದಾದ ಕಣಿವೆಯ ಪರಿಸರದ ದೃಶ್ಯವು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಲೋಕ ವಿಖ್ಯಾತ ಈ ಸುಂದರ ಜೋಗಜಲಪಾತ, ಕನ್ನಡ ನಾಡಿನ ಹೆಮ್ಮೆಯ ತಾಣ.

World famous Jog Falls during rainy seasonಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ‘ಜೋಗ್‌‘ ಮಲೆನಾಡಿನ ಹಳ್ಳಿ. ಪ್ರಸಿದ್ದ ಐತಿಹಾಸಿಕ ರಾಜಧಾನಿಯಾದ ಗೇರಸೊಪ್ಪೆಗೆ ಹತ್ತಿರದಲ್ಲಿ ಇರುವುದರಿಂದ ಈ ಹಿಂದೆ ‘ಗೇರಸೊಪ್ಪಾ ಜಲಪಾತ‘ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು. ಇತಿಹಾಸದಲ್ಲಿನ ಉಲ್ಲೇಖದಂತೆ ನಾಲ್ಕು ನೂರು ವರ್ಷಗಳ ಇತಿಹಾಸ ಹೊಂದಿದ ಗೇರಸೊಪ್ಪೆ ರಾಜ್ಯವು ‘ನಗಿರಾರಾಜ್ಯ’ ಎಂದು ಕರೆಯಲ್ಪಡುತ್ತಿದ್ದು, ರಾಜಧಾನಿಯನ್ನು ಬಳಸಿ ಹರಿಯುತ್ತಿದ್ದ ಶರಾವತಿ ನದಿಗೆ ‘ಗೇರುಸೊಪ್ಪೆ ನದಿ‘ ಎನ್ನುತ್ತಿದ್ದರು. ಈ ರಾಜ್ಯವಾಳಿದ ‘ರಾಣಿ ಚೆನ್ನಭೈರಾದೇವಿ‘ಯನ್ನು ‘ಕಾಳು ಮೆಣಸಿನ ರಾಣಿ‘ ಎಂದು ಕರೆಯಲಾಗುತ್ತಿತ್ತೆಂದು ಇತಿಹಾಸ ಹೇಳುತ್ತದೆ. ಇಂದಿನ ಗೇರುಸೊಪ್ಪೆ ಹಾಗೂ ನಗರಬಸ್ತಿಕೇರಿ ಎಂದು ಕರೆಯಲ್ಪಡುವ ಗತ ಇತಿಹಾಸದ ರಾಜಧಾನಿ ಮಧ್ಯೆ ಶರಾವತಿ ಹರಿಯುತ್ತಾಳೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, 12 ಉಪ ನದಿಗಳನ್ನು ಸೇರಿಸಿಕೊಂಡು, ರಭಸದಿಂದ ಮುನ್ನುಗ್ಗುವ ಶರಾವತಿಗೆ 132 ಕಿ.ಮೀ. ಕ್ರಮಿಸಿ ಅರಬ್ಬೀ ಸಮುದ್ರ ಸೇರುವ ತವಕ. ಜೋಗದ ಬಳಿ ಇರುವ ಕಣಿವೆಯನ್ನೂ ಲೆಕ್ಕಿಸದೆ, ಕಮರಿಗೆ ಧುಮುಕಿ ಓಡುವ ಅಬ್ಬರ, ಕಣ್ಮನಗಳಿಗೆ ತೃಪ್ತಿ, ಜೀವಜಂತುಗಳಿಗರ ಆಸರೆ. ಈ ನದಿಗೆ ಈಗಾಗಲೇ ಮೂರು ಆಣೆಕಟ್ಟೆಗಳನ್ನು ಕಟ್ಟಲಾಗಿದ್ದು, ನಾಲ್ಕನೆಯ ಆಣೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

another view of World famous Jog Fallsವಿವಿಧೋದ್ದೇಶ ಯೋಜನೆಯನ್ವಯ ನಾಡಿಗೆ, ಔದ್ಯಮೀಕರಣಕ್ಕೆ ಅವಶ್ಯಕ ವಿದ್ಯುತ್‌ ಉತ್ಪಾದನೆ ಹಾಗೂ ಕೃಷಿಗೆ ನೀರಾವರಿ ಒದಗಿಸುವುದು. ಲಿಂಗನಮಕ್ಕಿ ಎಂಬ ಮೊದಲ ಆಣೆಕಟ್ಟೆಯನ್ನು ನಿರ್ಮಿಸಲು 1956ರಲ್ಲಿ ಆರಂಭಿಸಿದ್ದರೆ, ಎರಡನೇ ಆಣೆಕಟ್ಟೆ ಶರಾವತಿ ಟೇಲರೇಸ್‌ ಎಂದು ನಾಮಕರಣಗೊಂಡು 2002ರಿಂದ ವಿದ್ಯುತ್‌ ಉತ್ಪಾದನೆ ಪ್ರಾರಂಭಿಸಿದೆ. ಮೂರನೇಯ ಆಣೆಯ ನಿರ್ಮಾಣವು 2004ರಲ್ಲಿ ಪ್ರಾರಂಭಗೊಂಡಿದ್ದರೂ ಪರಿಸರದಲ್ಲಿನ ಬೆಟ್ಟ ಕುಸಿತದಿಂದ ಸ್ವಲ್ಪ ನಿಧಾನವಾಗಿ ಇದೀಗ ರಭಸದಿಂದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹೀಗೆ ಮಹಾತ್ಮಾಗಾಂಧಿ ವಿದ್ಯುದಾಗಾರ, ಆನೆಬೈಲ್‌ ಸೈಟ್‌(ಶರಾವತಿ ಹೈಡ್ರೋಪವರ್‌ ಸ್ಟೇಶನ್‌), ಶರಾವತಿ ಟೇಲರೇಸ್‌ ಎಂಬ ಹೆಸರಿನಿಂದ ಮೂರು ವಿದ್ಯುದಾಗರಗಳ ಮೂಲಕ ನಾಡಿಗೆ ವಿದ್ಯುತ್‌ ಒದಗಿಸುತ್ತಾ ನಾಲ್ಕನೇಯದರ ಸಮರ್ಪಣೆಗೆ ಶರಾವತಿ ಉಧ್ಯುಕ್ತಳಾಗಿದ್ದಾಳೆ.

ಈ ಸಿರಿ ಸೊಬಗಿನ ಜೋಗದ ಜಲಪಾತ ತಲುಪಲು ನಾಲ್ಕು ಕಡೆಯಿಂದಿರುವ ದಾರಿಯ ಇಕ್ಕೆಲೆಗಳಲ್ಲಿ ಮಲೆನಾಡಿನ ಸೌಂದರ್ಯ ಮನಸೂರೆಗೊಳ್ಳುತ್ತದೆ. ಈ ಎಲ್ಲ ಹಾದಿಗಳಲ್ಲಿ ಆಳವಾದ ಕಣಿವೆಗಳು, ಕಡಿದಾದ ಬೆಟ್ಟಗಳಿರುವುದರಿಂದ ದಾರಿ ಅಂಕುಡೊಂಕಿನಿಂದಕೂಡಿದೆ. ರಸ್ತೆಯಲ್ಲಿ ಆಚೆಯಿಂದ ಈಚೆಗೆ ನೆಗೆಯು ಕಾಡುಕೋತಿಗಳ ಸಂಸಾರಗಳು, ವಿವಿಧ ಬಗೆಯ ಪಕ್ಷಿಗಳು ಹಾಗೂ ಸಣ್ಣ ಮರಿಯಿಂದ ದೊಡ್ಡ ಗಾತ್ರದ ವಿವಿಧ ಹಾವುಗಳು ಅಡ್ಡಲಾಗಿ ಬರುತ್ತವೆ. ನಮ್ಮ ಜೀವದ ರಕ್ಷಣೆಯ ಜೊತೆಗೆ ಅವುಗಳ ಜೀವರಕ್ಷಣೆ ನಮ್ಮ ಹೊಣೆ ಎಂಬುದರಿತು ಸಾವಧಾನವಾಗಿ ವಾಹನ ನಡೆಸಬೇಕಿರುವುದು ಪೃಕೃತಿ ಹಾಗೂ ಪ್ರವಾಸಿಗರ ಕ್ಷೇಮಕ್ಕಾಗಿ ಅತೀಅಗತ್ಯ.

ಸಾಗರದಿಂದ ಸುಮಾರು 30 ಕಿ.ಮೀ., ಸಿದ್ದಾಪುರದಿಂದ ಮಾವಿನಗುಂಡಿ ಹಾದು 24 ಕಿ.ಮೀ., ಹೊನ್ನಾವರದಿಂದ ಗೇರುಸೊಪ್ಪಾ ಮಾರ್ಗವಾಗಿ ಕತ್ತಲೆಕಾನ, ಮಾಸ್ತಿಮನೆ ಘಟ್ಟ ಹಾಗೂ ಮಲೆಮನೆ ಘಟ್ಟ ಏರಿ ಸಾಗಿ ಸುಮಾರು 60 ಕಿಮೀ. ಹಾಗೂ ಭಟ್ಕಳದಿಂದ ಕೋಗಾರ ಘಟ್ಟದ ಮೂಲಕ ಕಾರ್ಗಾಲ್‌ ಬಳಸಿ ಸುಮಾರು 60 ಕಿಮೀ ದೂರದ ಜೋಗ ಜಲಪಾತ ಪ್ರಯಾಣದ ಹಾದಿಯಲ್ಲಿನ ಸಹ್ಯಾದ್ರಿಯ ಶ್ರೇಣಿಯ ಸೊಬಗು ಕಣ್ಮನ ಸೆಳೆಯುತ್ತದೆ.

World famous Jog Falls during off seasonಜಲಪಾತದ ಧುಮ್ಮಿಕ್ಕುವ ಹಾಗೂ ಕಣಿವೆಯಲ್ಲಿ ಹಾರುವುದನ್ನು ನೇರವಾಗಿ ನೋಡಲು ಮೈಸೂರ ಬಂಗಲೆ ಪ್ರದೇಶ ಸೂಕ್ತ. ಇಲ್ಲಿಂದಲೇ ಜಲಪಾತದ ತಳಭಾಗದ ತನಕ ಸಾಗಲು ಸ್ವಲ್ಪ ಶಿಥಿಲಾವಸ್ಥೆಯಲ್ಲಿರುವ ಮೆಟ್ಟಿಲುಗಳ ವ್ಯವಸ್ಥೆಯಿದ್ದು ಜಾಗರೂಕವಾಗಿ ಇಳಿದರೆ ಜಲಪಾತದ ಬುಡದಲ್ಲಿ ನಿಂತು ಕಣಿವೆಯ ಸೊಬಗ ಸವಿದು ಹಿಂದಿರುಗಬಹುದು. ಜಲಧಾರೆಯ ಧುಮುಕುವಿಕೆಯಿಂದ ತಳಭಾಗದಲ್ಲಿ ಆಳವಾದ ಗುಂಡಿಗಳಿದ್ದು ಅನಗತ್ಯ ಸಾಹಸ ಅಪಾಯಕಾರಿ. ನೀರಿನೊಡನಿರುವ ಕಲ್ಲುಬಂಡೆಗಳು ಸತತ ನೀರಿನ ಸಿಂಪರಣೆಯಿಂದ ಪಾಚಿ ಕಟ್ಟಿ ಜಾರುವುದರಿಂದ ಗಮನ ಅಗತ್ಯ.

ಜಲಪಾತ ಧುಮ್ಮಿಕ್ಕುವ ಹಾಸುಗಲ್ಲಿನಿಂದ ಹರಿದೋಡುವ ಸೊಬಗ ಗಮನಿಸಲು ಕಣಿವೆಯ ವಿಹಂಗಮ ದೃಶ್ಯಕ್ಕೆ ಬ್ರಿಟೀಷ್‌ ಬಂಗಲೆ ಸೂಕ್ತ ಪ್ರದೇಶ. ರಾಜ ಜಲಧಾರೆಯ ಪಕ್ಕದಲ್ಲಿನ ನಿರಾಧಾರವೆನಿಸುವ ಶಿಲೆಯ ಮೇಲೆ ನಿಂತು ಹರಿದೋಡುವ ಹಾದಿಯಲ್ಲಿನ ಕಡಿದಾದ ಕಣಿವೆಗೆ ಧುಮುಕಿ ಕಣಿವೆಯುದ್ದಕ್ಕೂ ಸಾಗುವ ಶರಾವತಿ ಸೌಂದರ್ಯ ಅಧ್ಭುತದೃಶ್ಯ ಕಾವ್ಯವಾಗಿರುತ್ತದೆ. ಆದರೆ ಮಳೆಗಾಲದಲ್ಲಿ ತುಂಬಿ ಹರಿಯುವ ಶರಾವತಿ ರಾಜಾ ತಡಸಲಿನ ಮೇಲ್ಭಾಗವನ್ನು ಆವರಿಸಿ ಸುರಿಯುವ ಸಂಭವ ಹೆಚ್ಚಾಗಿರುವುದರಿಂದ ಈ ದೃಶ್ಯ ನೋಡುವ ಆಸೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಇಲ್ಲಿನಿಂತು ಸೊಬಗ ಸವಿಯಲು ಅಕ್ಟೋಬರ್‌ ತಿಂಗಳ ನಂತರ ಉತ್ತಮ ಅವಕಾಶ.

ಶರಾವತಿ ನದಿಯು ಕೇವಲ ಜಲಪಾತಕ್ಕೆ ಹಾಗೂ ವಿದ್ಯುದಾಗರಗಳಿಗಾಗಿ ಮಾತ್ರ ಪ್ರಸಿದ್ಧವಾಗಿರದೆ ಅಪರೂಪದ ಜೀವವೈವಿಧ್ಯತೆಯ ಖಜಾನೆಯಾಗಿದೆ. ಸಹ್ಯ ಶಿಖರಗಳು ಅಮೂಲ್ಯ ಸಸ್ಯ ಸಂಪತ್ತನ್ನು ಹೊಂದಿದ್ದು ಅದರ ಭಾಗವಾದ ಶರಾವತಿ ಕಣಿವೆ ಜೀವ ವೈವಿಧ್ಯತಾ ಕಣಜವೆನ್ನಲಾಗುತ್ತದೆ.

ಕೇರಳದ ಮೌನ ಕಣಿವೆಯಲ್ಲಿ ಮಾತ್ರ ಕಂಡುಬರುವ ಸಿಂಗಳೀಕ (ಲಾಯ್ನ್‌ು ಟೇಲ್ಡ್‌ ಮೊಂಕ್ಯೂ) ಇಲ್ಲಿ ಕಾಣಸಿಗುತ್ತದೆ. ಅಲ್ಲದೆ ಪ್ರಪಂಚದಲ್ಲಿ ಕೇವಲ ಶರಾವತಿ ಕಣಿವೆಯ ಕತ್ತಲೆಕಾನು ಕಾಡಿನಲ್ಲಿ ಮಾತ್ರವೇ ಕಾಣಸಿಗುವ ಸಸ್ಯ ಪ್ರಭೇದ, ಈ ಪ್ರದೇಶದ ಹೆಸರಿನಿಂದಲೇ ಜಗತ್ತಿಗೆ ಪರಿಚಿತವಾದ ‘ಕತ್ತಲೆಕಾನ್‌ಸಿಸ್‌‘ನ ಏಕೈಕ ತಾಣವಾಗಿದೆ ಈ ಕಣಿವೆ. ಆದರೆ ಯೋಜನಾ ಭಾರಗಳು ಇಂದು ಈ ಅಪರೂಪದ ಸಂಕುಲಗಳನ್ನು ವಿದೇಶೀ ನೆರವಿನಿಂದಲೂ ಉಳಿಸಲಾಗದೇ ವಿನಾಶದಂಚಿಗೆ ನಿಲ್ಲಿಸಿವೆ. ಮಲೆನಾಡ ನಿತ್ಯ ಹರಿದ್ವರ್ಣದ ರಕ್ಷಣೆಗಾಗಿ ಜಪಾನ್‌ ಇನ್ನಿತರ ದೇಶಗಳು ನೆರವು ನೀಡುತ್ತಿದ್ದರೆ, ಇನ್ನು ಕೆಲವು ಕಡೆಗಳಿಂದ ಉದ್ದಿಮೆಗಳಿಗಾಗಿ ಬಂಡವಾಳ ಹರಿದು ಇದೇ ಕಾಡಿನ ಅಂಚಿನಲ್ಲಿ ನೆಲೆಯಾಗುವ ಪ್ರಯತ್ನ ಎಲ್ಲ ನಿರಾಕರಣೆ ಮೀರಿ ನಿಂತಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ಜೋಗ ಜಲಪಾತ ತಲುಪುವ ಎಲ್ಲ ದಾರಿಗಳಲ್ಲಿ ಸೂಚನಾ ಫಲಕದ ವ್ಯವಸ್ಥೆಯಿದ್ದು, ಎಚ್ಚರಿಕೆಯಿಂದ ಪ್ರಯಾಣಿಸಿದರೆ ಸುಲಭವಾಗಿ ತಲುಪಬಹುದಾಗಿದೆ. ಕವಿವಾಣಿಯಂತೆ ಜೋಗದ ಸಿರಿ ಜಲಧಾರೆಯನ್ನು ವೀಕ್ಷಿಸಿದಾಗ ಧನ್ಯತಾಭಾವ ಮೂಡಿದರೆ ಆಶ್ಚರ್ಯವಿಲ್ಲ. ಇದರ ವೀಕ್ಷಣೆಯಿಂದ ಜೀವನದಲ್ಲಿ ಒಮ್ಮೆ ಜೋಗದ ಗುಂಡಿ ನೋಡು ಎಂದಿರುವ ಕವಿನುಡಿಯ ನಿಜ ಅರ್ಥವಾಗುತ್ತದೆ. ಪ್ರವಾಸಿಗರು ಈ ಸೊಬಗ ಮುಂದಿನವರಿಗೆ ಉಳಿಸಲು ಪರಿಸರ ಸ್ನೇಹಿಗಳಾಗಿರಬೇಕಿರುವುದು ಸೌಂದರ್ಯರಾಣಿಗೆ ಸಲ್ಲಿಸುವ ಕೃತಜ್ಞತೆಯಾಗಿರುತ್ತದೆ.


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+