ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಂಚಳ್ಳಿ ಜಲಪಾತ : ಏನೀ ಸೌಂದರ್ಯವೋ? ಏನೀ ಆರ್ಭಟವೋ?

By Staff
|
Google Oneindia Kannada News

ಉಂಚಳ್ಳಿ ಜಲಪಾತ : ಏನೀ ಸೌಂದರ್ಯವೋ? ಏನೀ ಆರ್ಭಟವೋ?
ಉಂಚಳ್ಳಿ ಜಲಪಾತ ನಿಶ್ಚಿಂತ ಯೋಧನಂತೆ ನಿಂತಿದೆ. ಪ್ರವಾಸಿಗರ ಮನವನ್ನು ಸೂರೆಗೈಯ್ಯುತ್ತ ಕಣ್ಣಿಗೆ ಅದ್ವಿತೀಯ ಆನಂದ ಒದಗಿಸುತ್ತಿದೆ. ಅಘನಾಶಿನಿ ನದಿ ಇಲ್ಲಿ ಬಳುಕುತ್ತಿದ್ದಾಳೆ. ಜಲಪಾತ ನೋಡುವುದೇ ಒಂದು ಹಬ್ಬ. ಕಿವಿ ಕಿವುಡಾಗಿಸುವಂತಿರುವ ಜಲಪಾತದ ಆರ್ಭಟದ ಧ್ವನಿ, ಸುತ್ತಲಿನ ಪರಿಸರ ಮರೆಯಲು ಸಾಧ್ಯವೇ ಇಲ್ಲ!

ಜಲಪಾತದ ನೈಜ ಸೌಂದರ್ಯ, ಧುಮುಕುವ ವೈವಿಧ್ಯತೆಯಿಂದ ಪ್ರತಿ ಜಲಪಾತವೂ ತನ್ನದೇ ಆದ ವಿಭಿನ್ನತೆಯನ್ನು ಪಡೆದಿವೆ. ಜಲಪಾತದ ಜಿಲ್ಲೆ ಎಂದೇ ಕರೆಯಲಾಗುವ ಉತ್ತರ ಕನ್ನಡ ಜಿಲ್ಲೆ ಈ ವಿಭಿನ್ನತೆಯ ಸೊಬಗಿನಲ್ಲಿ ಒಂದಾಗಿರುವಂತಿದೆ. ಎತ್ತರ ಹಾಗೂ ಜಲಧಾರೆಗಳ ವೈವಿಧ್ಯತೆಯಲ್ಲಿ ಜೋಗ ಜಲಪಾತ ಹೆಚ್ಚು ಪ್ರಖ್ಯಾತಿಗೆ ಪಾತ್ರವಾದರೆ ಇನ್ನಿತರ ಜಲಪಾತಗಳು ತಮ್ಮ ಲಾವಣ್ಯಭರಿತ ಧುಮುಕುವಿಕೆಗೆ ಇದರೊಂದಿಗೆ ಸ್ಪರ್ಧಿಸುವಂತಿದೆ.

ಸಿದ್ದಾಪುರ ತಾಲೂಕಿನಲ್ಲಿಯ ಉಂಚಳ್ಳಿ ಜಲಪಾತ ನೀರ ರೇಖೆಯಾಗಿಯೋ, ಜಲಧಾರೆಯಾಗಿಯೋ ಇರದೆ ಮೋಡವೇ ಶಿಲೆಗಳ ಮೂಲಕ ಹಸಿರ ಕಣಿವೆ ಸೇರುವ ಭಾವನೆ ಮೂಡಿಸುತ್ತದೆ. ಅಘನಾಶಿನಿ ನದಿಯ ಆಣೆಕಟ್ಟೆಯ ಯೋಜನೆಗಳ ಭೂತ ಈ ಸೌಂದರ್ಯವನ್ನು ಜೋಗದ ಸಿರಿಯಂತೆ ನುಂಗಲು ನಿಂತಿದ್ದರೂ, ನಿಶ್ಚಿಂತ ಯೋಧನಂತೆ ಪ್ರವಾಸಿಗರ ಮನವನ್ನು ಸೂರೆಗೈಯ್ಯುತ್ತ ಕಣ್ಣಿಗೆ ಅದ್ವಿತೀಯ ಆನಂದ ಒದಗಿಸುತ್ತಿದೆ. ಉಂಚಳ್ಳಿ ಜಲಪಾತ ನೋಡುವುದೇ ಒಂದು ಹಬ್ಬ.

ಸುಮಾರು 400 ಅಡಿ ಎತ್ತರದಿಂದ ಈ ಜಲಧಾರೆ ಕಮರಿಗೆ ಹಾರುವ ದೃಶ್ಯ ವರ್ಣನೆಯ ಆಚೆ ನಿಂತಿದೆ. ಅಲೆ ಅಲೆಯಾಗಿ ಇಳಿದುಬರುವ ದೃಶ್ಯ ಪುರಾಣದ ಕಥಾನಕಗಳಲ್ಲಿಯ ಅಪ್ಸರೆಯರನ್ನು, ಗಂಧರ್ವರನ್ನು ನೆನಪಿಸುವಂತಿದೆ. ಆದರೆ ಆರ್ಭಟವೋ ಕಿವಿಗಡಚಿಕ್ಕುತ್ತದೆ. ಈ ಆರ್ಭಟದಿಂದಾಗಿಯೇ ಉಂಚಳ್ಳಿ ಜಲಪಾತವೆನ್ನುವುದಕ್ಕಿಂತ ಕೆಪ್ಪ ಜೋಗ ಎಂಬ ಹೆಸರು ಸ್ಥಳೀಯವಾಗಿ ಹೆಚ್ಚು ಪ್ರಚಾರದಲ್ಲಿದೆ. ಆರ್ಭಟದ ಧ್ವನಿಯು ಕಿವಿಯನ್ನು ಕಿವುಡಾಗಿಸುವಂತಿರುವುದರಿಂದ ಈ ಹೆಸರು ಬಂದಿದೆ.

ಅಘನಾಶಿನಿ ನದಿಯ ಈ ಏಕೈಕ ಜಲಧಾರೆ ತನ್ನ ಸೌಂದರ್ಯದಿಂದಾಗಿ ಪ್ರಚಾರದಿಂದ ದೂರವಿದ್ದರೂ ಒಮ್ಮೆ ನೋಡಿದವರ ನೆನಪಿನಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿ, ಮತ್ತೆ ಮತ್ತೆ ನೋಡುವ ಅಭಿಲಾಷೆ ಮೂಡಿಸುತ್ತದೆ.

ಲುಸ್ಸಿಂಗ್‌ ಟನ್‌ ಜಲಪಾತ :

Unchalli fallsಸ್ಥಳೀಯರಿಗೆ ಮಾತ್ರ ಪರಿಚಿತವಾಗಿದ್ದ ಈ ಜಲಪಾತವನ್ನು 1859ರಲ್ಲಿ ಪ್ರಥಮ ಬಾರಿಗೆ ಲುಸ್ಸಿಂಗ್‌ ಟನ್‌ ಎಂಬ ಬ್ರಿಟೀಷ್‌ ಅಧಿಕಾರಿ ಹೊರ ಜಗತ್ತಿಗೆ ಪರಿಚಯಿಸಿದ ಎನ್ನಲಾಗುತ್ತದೆ. ಇದರಿಂದಾಗಿ ಜಲಪಾತಕ್ಕೆ ಲುಸ್ಸಿಂಗ್‌ ಟನ್‌ ಜಲಪಾತ ಎಂಬ ಹೆಸರೂ ಇದೆ. ಜಲಪಾತದ ಎರಡು ನೋಟವು ಪ್ರವಾಸಿಗರಿಗೆ ಸಿಗುತ್ತಿದ್ದು, ಒಂದು ನೋಟವನ್ನು ಎರಡು ಕಿ.ಮೀ. ಕಚ್ಚಾ ಮಣ್ಣಿನ ರಸ್ತೆಯಲ್ಲಿ ನಡೆಯುತ್ತ ಸಾಗಿದರೆ ವೀಕ್ಷಣಾ ಗೋಪುರದ ಮೇಲೆ ನಿಂತು ನೋಡಬಹುದು. ಇಲ್ಲಿಂದ ಮಲೆನಾಡ ಹಸಿರು ವೃಕ್ಷಗಳ ನಡುವೆ ಹಾಲ್ನೊರೆಯು ಇಳಿದು ಭೋರ್ಗರೆಯುತ್ತ ಅಗಾಧ ಅನಂತ ಹಿಮಾಚ್ಛಾದಿತ ದಟ್ಟ ಹಸಿರ ಕಣಿವೆಯಲ್ಲಿ ಹರಿಯುವುದನ್ನು ಕಾಣಬಹುದು.

ಆದರೆ ಇನ್ನೊಂದು ದೃಶ್ಯ ಕಣಿವೆಯ ಕೆಳ ನಿಂತು ನೋಡಬೇಕಾಗಿರುವುದರಿಂದ ಅದರ ವೀಕ್ಷಣೆಗೆ ಮಳೆಗಾಲ ಕಳೆದು ಚಳಿಗಾಲದ ದಿನಗಳೇ ಸೂಕ್ತ. ಮಳೆಗಾಲದಲ್ಲಿ ಈ ಪ್ರಪಾತಕ್ಕೆ ಇರುವ ಸೂಪಾನಗಳು ದುರಸ್ತಿಯ ಸ್ಥಿತಿಯಲ್ಲಿರುವುದರಿಂದ ಅಪಾಯಕಾರಿ. ದಟ್ಟ ಕಾನನದ ಕಣಿವೆಯು ಮಳೆಯ ಜಾರುವಿಕೆ ಅಥವಾ ಪಾಚಿಗಟ್ಟಿದ ಮೆಟ್ಟಿಲುಗಳಲ್ಲಿ ಇಳಿಯುವಾಗ ಸಮತೋಲನ ತಪ್ಪಿದರೆ ಮಲೆನಾಡ ಕಣಿವೆಯಲ್ಲಿ ಸಜೀವ ಸಮಾಧಿ ಖಂಡಿತ. ಆದರೆ ಸಾಹಸಮಯವಾದ ಈ ಕೃತ್ಯವನ್ನು ಎಚ್ಚರಿಕೆಯಿಂದ ಇಳಿದು ಸಾಗಿದರೆ ನಿಮಗೆ ಕಾದಿದೆ ಅಚ್ಚರಿಯ ಅದ್ಭುತ. ನೋಡಿಯೇ ತಣಿಯಬೇಕು ಇದರ ಸೊಬಗನ್ನು.

ಕೆಳಗಿದೆ ಹರಿದೋಡುವ ನೀರು, ಮೇಲಿನಿಂದ ಇಳಿಯುತ್ತದೆ ಬಿಳಿ ನೊರೆಯ ಹೊನಲು. ಹರ್ಷದ ಹೊನಲೇ ಪಾಪನಾಶಿನಿಯಾದ ಅಘನಾಶಿನಿ ಧಾರೆಯಾಗಿ ಉಂಚಳ್ಳಿಯಲ್ಲಿ ಇಳಿದು ಬರುತ್ತಿದೆಯೆಂದೆನಿಸಿದರೆ ಆಶ್ಚರ್ಯವಲ್ಲ. ಈ ನೆಲದಲ್ಲಿ ಎಂಥವನೂ ಕವಿಯಾದರೆ ಅದು ಇಲ್ಲಿನ ನಿಸರ್ಗದ ಕೈಚಳಕ. ಇಲ್ಲಿಳಿದು ನಿಂತರೆ ಕೆಳಗೆ ಮತ್ತೆರಡು ಮಳೆಗಾಲದ ಜಲಧಾರೆಗಳು ಕಾಣಸಿಗುತ್ತವೆ. ಆದರೆ ದುರ್ಗಮ ಕಣಿವೆಯ ಹಾದಿಯಲ್ಲಿ ಮಳೆಗಾಲದಲ್ಲಿ ಉಂಬಳಗಳು ಹೇರಳವಾಗಿವೆ.

ಈ ಸುಂದರ, ನಯನ ಮನೋಹರ ಸೊಬಗು ವರ್ಷದ ಎಲ್ಲಾ ದಿನಗಳಲ್ಲೂ ತುಂಬು ಬೆಡಗಿನಿಂದ ಕಂಗೊಳಿಸುತ್ತದೆ. ಮಲೆನಾಡಿನ ಆರ್ಭಟದ ಮಳೆಗೆ ಕೆಂಪು ನೀರಿನಿಂದಾವೃತವಾದ ಅಘನಾಶಿನಿಯ ಪ್ರವಾಹದಿಂದಾಗಿ ಮಳೆಗಾಲದಲ್ಲಿ ಕೆಂಪು ಮಿಶ್ರಿತ ಜಲಧಾರೆ ಗೋಚರಿಸಿದರೆ, ಉಳಿದ ದಿನಗಳಲ್ಲಿ ಹಾಲ್ನೊರೆಯ ಬೆಡಗು ಮನಸೆಳೆಯುತ್ತದೆ.

ಹೋಗುವುದು ಹೇಗೆ? :

Unchalli fallsಆಧುನಿಕತೆಯ ಥಳಕನ್ನು ಮರೆಯಿಸುವ ಈ ತಾಣಕ್ಕೆ ಸಾಗುವ ದಾರಿ ಸಿದ್ದಾಪುರದಿಂದ 35 ಕಿ.ಮೀ. ದೂರದ ಹೆಗ್ಗರಣೆಗೆ ತಲುಪಿದರೆ, ಅಲ್ಲಿಂದ 4 ಕಿ.ಮೀ. ದೂರದಲ್ಲಿದೆ ಈ ಅದ್ಭುತ ಹಸಿರ ಸಿರಿ ಮಧ್ಯೆ ಜಲಧಾರೆಯ ಅವಿಸ್ಮರಣೀಯ ಸೌಂದರ್ಯ. ಇನ್ನೊಂದು ದಾರಿ ಶಿರಸಿಯಿಂದ 39 ಕಿ.ಮೀ. ದೂರವಿದೆ.

ಶಿರಸಿ -ಕುಮಟಾ ರಾಜ್ಯ ಹೆದ್ದಾರಿಯಲ್ಲಿನ ಅಮ್ಮಿನಳ್ಳಿ ಸಮೀಪ ಎಡಕ್ಕೆ ತಿರುಗಿ ಹೆಗ್ಗರಣೆ ರಸ್ತೆಯಲ್ಲಿ ಸಾಗಿದರೆ ಉಂಚಳ್ಳಿ ಜಲಪಾತ ಆರ್ಭಟದ ಭೋರ್ಗರೆತದೊಂದಿಗೆ ಇರುವ ಸಾರುತ್ತದೆ. ದಾರಿಯು ಹೆಗ್ಗರಣೆಯವರೆಗೆ ಉತ್ತಮ ಡಾಂಬರ್‌ ರಸ್ತೆಯಿದ್ದು, ಮುಂದೆ ಮಲೆನಾಡಿನ ಮಣ್ಣಿನ ಕಚ್ಚಾ ರಸ್ತೆಯಿದೆ. ಮಲೆನಾಡ ಕಾನನದ ಇಂಚರ, ವೃಕ್ಷ ಸಂಪತ್ತು ದಾರಿಯ ಆಯಾಸವನ್ನು ಕಡಿಮೆಗೊಳಿಸುತ್ತದೆ. ಈ ಕಚ್ಚಾ ರಸ್ತೆಯು ಎರಡು ಕಿ.ಮೀ. ದೂರದ ತನಕ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟರೂ ಮುಂದೆ ಚಾರಣವೇ ಅಗತ್ಯ.

ಪ್ರವಾಸೋಧ್ಯಮ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದ ನಡುವೆಯೂ ಪ್ರಕೃತಿ ಪ್ರಿಯರಿಗರ ರಸದೌತಣ ನೀಡಿ ತನ್ನೆಡೆಗೆ ಸೆಳೆದುಕೊಳ್ಳುತ್ತದೆ ಕೆಪ್ಪ ಜೋಗ. ಪ್ರವಾಸವೆನ್ನುವುದನ್ನು ಪ್ರಯಾಸವಾಗಿಸದಿರಲು ಇಲ್ಲಿಗೆ ಬುತ್ತಿಯೊಂದಿಗೆ ಬರುವುದು ಅತೀ ಅವಶ್ಯ. ಹೆಗ್ಗರಣೆಯ ಹೊರತಾಗಿ ಮುಂದೆಲ್ಲಿಯೂ ಮಾರ್ಗದರ್ಶನದ ಹಾಗೂ ನೀರು, ಊಟದ ವ್ಯವಸ್ಥೆಯಿಲ್ಲ.

ಸ್ಥಳೀಯರಿಗೆ ಅನಂತ ಕಾಲದಿಂದಲೂ ದುಸ್ವಪ್ನವಾದಂತೆ ಅವಘಡಗಳ ಮೂಲಕವೇ ನೆನಪಿಗೆ ಬರುತ್ತಿದ್ದ ಲುಸ್ಸಿಂಗ್‌ ಟನ್‌ ಜಲಪಾತದ ಸೊಬಗಿಗೆ ಸ್ಪಂದಿಸುವ ಮನದೊಂದಿಗೆ ಮಾರ್ಗದ ಮುನ್ನೆಚ್ಚರಿಕೆಯು ಈ ಸೌಂದರ್ಯದ ನೆನಪನ್ನು ಚಿರಸ್ಮರಣೀಯವಾಗಿಸುವುದು.


ಇದನ್ನೂ ಓದಿ :
ಜೋಗ ಜಲಪಾತ : ಹೃದಯ ಸೂರೆಗೊಳ್ಳುವ ಜಲಧಾರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X