ಕೃಷಿ ಕಾನೂನಿಗೂ ರಿಲಯನ್ಸ್ ಸಂಸ್ಥೆಗೂ ಸಂಬಂಧವಿಲ್ಲ: RIL
ಮುಂಬೈ, ಜನವರಿ 4: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RJIL) ಮೂಲಕ ಇಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಿದೆ. ದುಷ್ಕರ್ಮಿಗಳು ನಡೆಸುತ್ತಿರುವ ಕಾನೂನುಬಾಹಿರ ವಿಧ್ವಂಸಕ ಕೃತ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ತುರ್ತಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಈ ಅರ್ಜಿಯಲ್ಲಿ ಕೇಳಿಕೊಳ್ಳಲಿದೆ.
ಇಂಥ ಹಿಂಸಾತ್ಮಕ ಕೃತ್ಯಗಳಿಂದ ಕಂಪೆನಿಯ ಸಾವಿರಾರು ಉದ್ಯೋಗಿಗಳ ಜೀವ ಅಪಾಯದಲ್ಲಿದೆ. ಮತ್ತು ಈ ಎರಡು ರಾಜ್ಯಗಳಲ್ಲಿ ಇರುವ ತುಂಬ ಮುಖ್ಯವಾದ ಸಂವಹನ ಮೂಲಸೌಕರ್ಯ, ಮಾರಾಟ ಮತ್ತು ಸರ್ವೀಸ್ ಔಟ್ ಲೆಟ್ ಗಳಿಗೆ ಹಾನಿ ಮತ್ತು ಸಮಸ್ಯೆಯಾಗಿದೆ.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಉದ್ಯಮದಲ್ಲಿನ ಪ್ರತಿಸ್ಪರ್ಧಿಗಳು ಹಿಂಸಾಕೃತ್ಯ ಎಸಗಲು ದುಷ್ಕರ್ಮಿಗಳನ್ನು ಪ್ರಚೋದಿಸುತ್ತಿದ್ದಾರೆ. ದೆಹಲಿ ಸಮೀಪ ನಡೆಯುತ್ತಿರುವ ರೈತರ ಪ್ರತಿಭಟನೆಯ ಲಾಭವನ್ನು ಪಡೆದುಕೊಂಡು, ಈ ಪಟ್ಟಭದ್ರ ಹಿತಾಸಕ್ತಿಗಳು ನಿರಂತರವಾಗಿ ದುರುದ್ದೇಶಪೂರಿತ ಹಾಗೂ ರಿಲಯನ್ಸ್ ಕಂಪೆನಿಯ ಹೆಸರು ಹಾಳು ಮಾಡುವ ಕೃತ್ಯದಲ್ಲಿ ತೊಡಗಿವೆ. ಇವುಗಳಲ್ಲಿ ಯಾವುದೂ ಸತ್ಯ ಅಲ್ಲ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನು ಜಾರಿಗೂ ರಿಲಯನ್ಸ್ ಗೂ ಯಾವ ಸಂಬಂಧವೂ ಇಲ್ಲ. ಈಗ ಕೃಷಿ ಕಾನೂನಿನ ಜತೆಗೆ ರಿಲಯನ್ಸ್ ಹೆಸರು ತಳುಕು ಹಾಕುತ್ತಿರುವುದು ಕೇವಲ ಕಂಪೆನಿಯ ವ್ಯವಹಾರ ಮತ್ತು ವರ್ಚಸ್ಸು ಹಾಳು ಮಾಡುವುದಕ್ಕೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪ್ರಮುಖಾಂಶಗಳ ಬಗ್ಗೆ ಗಮನ ಸೆಳೆಯಲಾಗಿದೆ.

"ಒಪ್ಪಂದ"ದ (ಕಾಂಟ್ರ್ಯಾಕ್ಟ್) ಬೇಸಾಯ ಮಾಡುತ್ತಿಲ್ಲ
* ರಿಲಯನ್ಸ್ ರೀಟೇಲ್ ಲಿ., ರಿಲಯನ್ಸ್ ಜಿಯೋ ಅಥವಾ ರಿಲಯನ್ಸ್ ಇಂಡಸ್ಟ್ರೀಸ್ ಗೆ ಸಂಬಂಧಿಸಿದ ಯಾವ ಕಂಪೆನಿಯೂ ಯಾವುದೇ "ಕಾರ್ಪೊರೇಟ್" ಅಥವಾ "ಒಪ್ಪಂದ"ದ (ಕಾಂಟ್ರ್ಯಾಕ್ಟ್) ಬೇಸಾಯ ಈ ಹಿಂದೆ ಮಾಡಿಲ್ಲ. ಮುಂದೆ ಕೂಡ ಅಂಥ ಉದ್ದೇಶ ಇಲ್ಲ.
* ಪಂಜಾಬ್/ಹರ್ಯಾಣ ಸೇರಿದಂತೆ ಭಾರತದ ಯಾವುದೇ ಭಾಗದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ರಿಲಯನ್ಸ್ ಆಗಲೀ ಅಥವಾ ಅದರ ಅಂಗ ಸಂಸ್ಥೆಗಳಾಗಲೀ "ಕಾರ್ಪೊರೇಟ್" ಅಥವಾ "ಒಪ್ಪಂದ"ದ (ಕಾಂಟ್ರ್ಯಾಕ್ಟ್) ಬೇಸಾಯಕ್ಕಾಗಿ ಯಾವುದೇ ಕೃಷಿ ಭೂಮಿ ಖರೀದಿ ಮಾಡಿಲ್ಲ. ಆ ರೀತಿ ಮಾಡುವ ಯಾವ ಯೋಜನೆ ಕೂಡ ಇಲ್ಲ.
* ರಿಲಯನ್ಸ್ ರೀಟೇಲ್ ಕಂಪೆನಿಯು ಭಾರತದಲ್ಲಿ ಚಿಲ್ಲರೆ (ರೀಟೇಲ್) ಉದ್ಯಮದ ನಾಯಕತ್ವ ಸ್ಥಾನದಲ್ಲಿದೆ. ಆಹಾರ ಧಾನ್ಯಗಳು, ಹಣ್ಣು, ತರಕಾರಿ, ಬಟ್ಟೆ, ಎಲೆಕ್ಟ್ರಾನಿಕ್ಸ್, ಔಷಧಿ ಮೊದಲುಗೊಂಡು ಹಲವು ವಸ್ತುಗಳನ್ನು ಉತ್ಪಾದಕರು ಹಾಗೂ ಸರಬರಾಜುದಾರರಿಂದ ಖರೀದಿಸಿ ಮಾರಾಟ ಮಾಡಲಾಗುತ್ತದೆ. ಕಂಪೆನಿಯು ರೈತರಿಂದ ನೇರವಾಗಿ ಖರೀದಿಸುವುದಿಲ್ಲ. ಯಾವುದೇ ದೀರ್ಘಾವಧಿ ಒಪ್ಪಂದ ಮಾಡಿಕೊಂಡಿಲ್ಲ. ಯಾವುದೇ ಸರಬರಾಜುದಾರರನ್ನು ಕಡಿಮೆ ಬೆಲೆಗೆ ಖರೀದಿಸುವಂತೆಯೂ ಕೇಳಿಲ್ಲ. ಇನ್ನು ಮುಂದೆಯೂ ಹಾಗೆ ಮಾಡಲ್ಲ.

ಕೃಷಿಕರ ಬಗ್ಗೆ ರಿಲಯನ್ಸ್ ಗೆ ಅಪಾರವಾದ ಗೌರವ
* ಭಾರತದ 130 ಕೋಟಿ ಜನರ ಪಾಲಿನ ಅನ್ನದಾತರಾದ ಕೃಷಿಕರ ಬಗ್ಗೆ ರಿಲಯನ್ಸ್ ಗೆ ಅಪಾರವಾದ ಗೌರವ ಹಾಗೂ ಕೃತಜ್ಞತೆ ಭಾವ ಇದೆ. ಅವರ ಸಬಲೀಕರಣಕ್ಕಾಗಿ ರಿಲಯನ್ಸ್ ಮತ್ತು ಅಂಗಸಂಸ್ಥೆಗಳು ಶ್ರಮಿಸುತ್ತಿವೆ. ಅವರ ಜತೆಗೆ ಸಮಾನವಾದ ಹಾಗೂ ಬಲವಾದ ಬಾಂಧವ್ಯ ಬೆಳೆಸುವುದರಲ್ಲಿ ನಮ್ಮ ನಂಬಿಕೆ ನಿಂತಿದೆ.
* ಕನಿಷ್ಠ ಬೆಂಬಲ ಬೆಲೆ (MSP) ವ್ಯವಸ್ಥೆಗೆ ಬದ್ಧವಾಗಿರುವ್ದಂತೆ ನಮ್ಮ ಪೂರೈಕೆದಾರರಿಗೆ ಸೂಚಿಸುತ್ತೇವೆ. ಆ ಮೂಲಕ ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂಬ ಉದ್ದೇಶ ಇರಿಸಿಕೊಂಡಿದ್ದೇವೆ.
* ರಿಲಯನ್ಸ್ ರೀಟೇಲ್ ನಲ್ಲಿ ವಿಶ್ವದರ್ಜೆಯ ತಂತ್ರಜ್ಞಾನ ಆಧಾರಿತ ಪೂರೈಕೆ ಜಾಲವನ್ನು ಸೃಷ್ಟಿಸಲಾಗಿದೆ.

ಪ್ರತಿ ಹಳ್ಳಿಗೆ ವಿಶ್ವ ದರ್ಜೆಯ ಡೇಟಾ ಸಂಪರ್ಕ
* ಜಿಯೋ 4G ಮೂಲಕ ಭಾರತದ ಪ್ರತಿ ಹಳ್ಳಿಗೆ ವಿಶ್ವ ದರ್ಜೆಯ ಡೇಟಾ ಸಂಪರ್ಕ ನೀಡಲಾಗಿದೆ. ಅಕ್ಟೋಬರ್ 31, 2020ರ ಕೊನೆಗೆ 40 ಕೋಟಿ ಗ್ರಾಹಕರಿದ್ದರು. ಅದರಲ್ಲಿ ಪಂಜಾಬ್ ನಲ್ಲೇ ಅಂದಾಜು 1.40 ಕೋಟಿ ಮತ್ತು ಹರ್ಯಾಣದಲ್ಲಿ 94 ಲಕ್ಷ ಬಳಕೆದಾರರಿದ್ದಾರೆ. ಗ್ರಾಹಕರನ್ನು ಸೆಳೆಯುವುದಕ್ಕೆ ಕಂಪೆನಿಯು ಯಾವುದೇ ಅಡ್ಡ ಮಾರ್ಗ ಅನುಸರಿಸಿಲ್ಲ.
* ಕೋವಿಡ್- 19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕೋಟ್ಯಂತರ ಜನರ ಪಾಲಿಗೆ ಜೀವನಾಡಿ ಆಗಿದೆ ಜಿಯೋ. ರೈತರು, ವರ್ತಕರು, ಗ್ರಾಹಕರು ಡಿಜಿಟಲ್ ವ್ಯವಹಾರದಲ್ಲಿ ಪಾಲ್ಗೊಳ್ಳಲು ನೆರವಾಗಿದೆ. ಇನ್ನು ವರ್ಕ್ ಫ್ರಮ್ ಹೋಮ್ ಮಾಡುವ ವೃತ್ತಿಪರರಿಗೆ, ಆನ್ ಲೈನ್ ತರಗತಿಗಳ ಮೂಲಕ ಕಲಿತು ವಿದ್ಯಾರ್ಥಿಗಳಿಗೆ, ಆನ್ ಲೈನ್ ಕನ್ಸಲ್ಟೇಷನ್ ಮೂಲಕ ವೈದ್ಯರು- ರೋಗಿಗಳ ಮಧ್ಯೆ ಸಂಪರ್ಕ ಸೇತುವಾಗಿದೆ. ಸರ್ಕಾರ- ಖಾಸಗಿ ಎಲ್ಲ ವಲಯಕ್ಕೂ ಸೇವೆ ಒದಗಿಸಿದೆ. ತುರ್ತು ಸೇವೆ ಒದಗಿಸುವವರ ಬೆಂಬಲಕ್ಕೆ ನಿಂತಿದೆ ಎಂಬುದನ್ನು ಗಮನಕ್ಕೆ ತರಲು ಕಂಪೆನಿ ಬಯಸುತ್ತದೆ.

ಸರಿಯಾದ ಮಾಹಿತಿಯ ಬಗ್ಗೆ ಜಾಗೃತಿ ಇರಲಿ
ಪಂಜಾಬ್ ಹಾಗೂ ಹರ್ಯಾಣದ ಅಧಿಕಾರಿಗಳು, ಅದರಲ್ಲೂ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಂಡ ಪೊಲೀಸರಿಗೆ ಧನ್ಯವಾದ ತಿಳಿಸುತ್ತದೆ. ಈ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ವಿಧ್ವಂಸಕ ಕೃತ್ಯಗಳು ಕಡಿಮೆ ಆಗಿವೆ. ಆದರೂ ದುಷ್ಕರ್ಮಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಠಿಣ ಮತ್ತು ಶಿಕ್ಷೆ ಆಗುವಂಥ ಕ್ರಮ ಜರುಗಿಸಬೇಕು. ಆ ಮೂಲಕ ಪಂಜಾಬ್ ಮತ್ತು ಹರ್ಯಾಣದಲ್ಲಿ ರಿಲಯನ್ಸ್ ತನ್ನ ಎಲ್ಲ ಉದ್ಯಮವನ್ನು ಮತ್ತೆ ಸಲೀಸಾಗಿ ನಡೆಸಬಹುದು ಎಂದು ಹೈ ಕೋರ್ಟ್ ಅರ್ಜಿಯಲ್ಲಿ ಕೇಳಿಕೊಂಡಿದೆ.
ಇನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕಾಗಿ ಹಬ್ಬುತ್ತಿರುವ ತಪ್ಪು ಮಾಹಿತಿಗಳನ್ನು ನಂಬಿ, ದಾರಿ ತಪ್ಪದಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳನ್ನು ಸಹ ಕೇಳಿಕೊಳ್ಳಲಾಗಿದೆ. ಸರಿಯಾದ ಮಾಹಿತಿಯ ಬಗ್ಗೆ ಜಾಗೃತಿ ಇರಲಿ ಎಂದು ಸಹ ತಿಳಿಸಲಾಗಿದೆ.












Click it and Unblock the Notifications