ಹಾರನಕಣಿವೆ ರಂಗನಾಥನಿಗೆ ಹಾವು, ಚೇಳು, ಜರಿ, ಹಲ್ಲಿ ಹರಕೆ ಸಲ್ಲಿಸುವ ಜಾತ್ರೆ; ಏನಿದರ ವಿಶೇಷ!
ಚಿತ್ರದುರ್ಗ, ಅಕ್ಟೋಬರ್ 16: ನಾವು ಅಂದುಕೊಂಡಿದ್ದು ನೆರವೇರಿದರೆ ನಾನು ಹೀಗೆ ಮಾಡುತ್ತೇನೆ, ಈ ವಸ್ತು ಕೊಡುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಹರಕೆ ಕಟ್ಟಿಕೊಳ್ಳುವುದು ಶತಮಾನಗಳಿಂದಲೂ ಪಾಲಿಸುತ್ತಾ ಬಂದಿರುವ ಒಂದು ನಂಬಿಕೆ.
ಮದುವೆ, ಉದ್ಯೋಗ, ವಿದ್ಯಾಭ್ಯಾಸ, ಮನೆ, ಸಾಧನೆಯ ಗುರಿ, ಮಕ್ಕಳು.. ಹೀಗೆ ಹರಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಶತಮಾನಗಳ ಹಿಂದಿನಿಂದಲೂ ಹಿರಿಯರು ಪಾಲಿಸುತ್ತಾ ಬಂದಿರುವ ಈ ಹರಕೆ ಕಟ್ಟಿಕೊಳ್ಳುವ ಹಾಗೂ ಹರಕೆ ತಿರಿಸುವ ಪದ್ಧತಿ ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯನಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳೂ ತಮ್ಮ ಬಯಕೆಗಳ ಈಡೇರಿಕೆಗೆ ಹರಕೆ ಕಟ್ಟಿಕೊಳ್ಳುತ್ತಾರೆ.
ಆದರೆ, ಚಿತ್ರದುರ್ಗ ಜಿಲ್ಲೆಯ ದೇಸ್ಥಾನವೊಂದರಲ್ಲಿ ವಿಚಿತ್ರವಾದ ಹರಕೆ ಸಲ್ಲಿಸುವ ಪದ್ಧತಿಯು ಇಂದಿಗೂ ನಡೆದುಕೊಂಡು ಬಂದಿದೆ. ಆಯುಧ ಪೂಜೆ ಹಾಗೂ ವಿಜಯದಶಮಿ ನಂತರ ದಿನವೇ ಇತಿಹಾಸ ಪ್ರಸಿದ್ಧ ಈ ದೇಗುಲದಲ್ಲಿ ನಡೆಯುವ ಈ ಹರಕೆಯ ಹಿಂದಿನ ಕಾರಣ, ಉದ್ದೇಶವೂ ಅಚ್ಚರಿ ಮೂಡಿಸುತ್ತದೆ. ಹಾಗಿದ್ದರೆ, ಈ ಜಾತ್ರೆ, ಹರಕೆಯಲ್ಲಿ ಅಂಥದ್ದೇನಿದೆ ಎಂತಿರಾ ಈ ಸ್ಟೋರಿ ಓದಿ...

ವಿಜಯದಶಮಿ ನಂತರ ಅದ್ಧೂರಿಯ ಅಂಬಿನೋತ್ಸವ
ಬಯಲು ಸೀಮೆಯ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಹಾಗೂ ಹೊಸದುರ್ಗ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರಿನ ದಡದಲ್ಲಿರುವ (ಗಡಿಭಾಗದಲ್ಲಿ) ಶ್ರೀರಂಗನಾಥ ಸ್ವಾಮಿಯ ಅಂಬಿನೋತ್ಸವ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆರವೇರುತ್ತದೆ. ವಿಜಯದಶಮಿ ನಂತರದ ದಿನ ಈ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದ ದೇವರ ಉತ್ಸವ ಮೂರ್ತಿಗೆ ಮೊದಲು ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವರಿಸಿ ನಂತರ ಅಂಚಿಬಾರಿಹಟ್ಟಿಯಿಂದ ಉತ್ಸವ ಮೂರ್ತಿಯನ್ನು ಬಣ್ಣದ ಪಟ್ಟದ ಕುದುರೆ ಹಾಗೂ ಪಲ್ಲಕ್ಕಿ ಮೇಲೆ ಕೂರಿಸಿ ಭಕ್ತಿ ಭಾವದಿಂದ ಮೆರವಣಿಗೆಯೊಂದಿಗೆ ಹಾರನಕಣಿವೆ ಶ್ರೀರಂಗನಾಥ ಶಿಲಾಮೂರ್ತಿ ಇರುವ ಜಾಗಕ್ಕೆ ಕರೆತಂದು ಸಂಪ್ರದಾಯದಂತೆ ಪೂಜಾರಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ತದನಂತರ ಬನ್ನಿ ಮರದ ಹತ್ತಿರ ಬಾಳೆ ಕಂದು ನೆಟ್ಟು, ಪೂಜೆ ಸಲ್ಲಿಸಿ, ಬನ್ನಿ ಮರದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಬಾಳೆ ಕಂದಿಗೆ ಬಿಲ್ಲು ಬಾಣ ಹೊಡೆಯುವ ಮೂಲಕ ಅಂಬಿನೋತ್ಸವ ನೆರವೇರಿತು. ಈ ಬಾರಿ ಸುಮಾರು ಶನಿವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಅಂಬಿನೋತ್ಸವ ಜರುಗಿತು.

ಮಳೆಯಾಗಲೆಂದು ದೇವರಿಗೆ ಸಿಹಿಯ ಹರಕೆ
ಅಂಬಿನೋತ್ಸವ ಮುಗಿದ ದಿನವೇ ಉತ್ಸವ ಮೂರ್ತಿಯನ್ನು ಭಕ್ತಾದಿಗಳ ಸಮ್ಮುಖದೊಂದಿಗೆ ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿಗೆ ಹಿಂದಿರುಗಿಸಲಾಗುವುದು. ನಂತರ ಸಕ್ಕರೆ ಬಾಳೆ ಹಣ್ಣಿನ ನೈವೇದ್ಯದ ಹರಕೆ ಸಲ್ಲುತ್ತದೆ. ರೈತರು ತಾವು ಬೆಳೆದ ಬೆಳೆ ಫಲ ನೀಡಲಿ, ನಾಡಿನಲ್ಲಿ ಉತ್ತಮ ಮಳೆಯಾಗಲಿ ಹಾಗೂ ತಮ್ಮ ಆರೋಗ್ಯವನ್ನೂ ಸುಧಾರಿಸಲೆಂದು ಹರಕೆ ಹೊತ್ತಿರುತ್ತಾರೆ. ಅಂತಹ ಭಕ್ತರು ತಾವು ತಂದಿರುವ ಸಕ್ಕರೆ, ಬಾಳೆಹಣ್ಣನ್ನು ಹಸಿರು ಗಿಡ ಅಥವಾ ಟಂಗಟೆ ಗಿಡದ ಬುಡದಲ್ಲಿ ಪೂಜೆ ಮಾಡಿ, ಮೊದಲು ದಾಸಯ್ಯನಿಗೆ ನೀಡಿ, ಭಕ್ತಾದಿಗಳಿಗೆ ಹಂಚುತ್ತಾರೆ. ಇದಲ್ಲದೆ ಸಂತಾನ ಫಲ ಇಲ್ಲದವರೂ ತಮಗೆ ಸಂತಾನ ಫಲಿಸಲಿ ಎಂದು ಹರಕೆ ಮಾಡಿಕೊಳ್ಳುತ್ತಾರೆ.

ಜಾತ್ರೆಯಲ್ಲಿ ಚೇಳು, ಹಾವು, ಜರಿ ಅರ್ಪಿಸುವ ಭಕ್ತರು
ಯಾರಿಗಾದರೂ ಹಾವು, ಚೇಳು, ಜರಿ, ಹಲ್ಲಿ, ಇರುವೆ, ತಿಗಣೆ ಇತರೆ ವಿಷ ಜಂತುಗಳು ಕಡಿದಾಗ ಅಥವಾ ಕಣ್ಣಿಗೆ ಕಂಡಾಗ ಮೊದಲು ನೆನಪಿಸಿಕೊಳ್ಳುವುದೇ ಹಾರನಕಣಿವೆ ಶ್ರೀರಂಗನಾಥನನ್ನು. ಮನೆಗಳಲ್ಲಿ, ಹೊಲ- ಗದ್ದೆಗಳಲ್ಲಿ ಹಾವು, ಚೇಳು ಕಡಿದಾಗ ಅಥವಾ ಕಾಣಿಸಿಕೊಂಡಾಗ, 'ಅಂಬಿನೋತ್ಸವದ ಜಾತ್ರೆಗೆ ಬಂದು ಹಾವು, ಚೇಳು, ಜರಿ ಕೊಟ್ಟು ಹರಕೆ ತೀರಿಸುತ್ತೇನೆ' ಎಂದು ಜನರು ದೇವರಿಗೆ ಹರಕೆ ಮಾಡಿಕೊಳ್ಳುವ ಪದ್ಧತಿ ಭಕ್ತ ಸಮೂಹದಲ್ಲಿದೆ.
ತಾವು ಹರಕೆ ಹೊತ್ತಂತೆ ಜಾತ್ರೆಯಲ್ಲಿ ತಾಮ್ರ, ಬೆಳ್ಳಿಯ ಹಾವು, ಚೇಳು, ಹಲ್ಲಿ, ಜರಿ ಇತರೆ ವಿಷ ಜಂತುಗಳನ್ನು ಖರೀದಿಸಿ ದೇವರಿಗೆ ಅರ್ಪಿಸುತ್ತಾರೆ. ಒಂದು ಚೇಳು, ಹಾವಿನ ಪ್ರತಿಕೃತಿ 20 ರೂ.ನಂತೆ ಮಾರಾಟವಾಗುತ್ತದೆ. ದೇವಸ್ಥಾನ ವತಿಯಿಂದ ಟೆಂಡರ್ ಕರೆದು ಮಾರಾಟ ಮಾಡಲು ಅನುಮತಿ ನೀಡಿರುತ್ತಾರೆ. ಅಂಗಡಿಗಳು ಅನುಮತಿ ಪಡೆದು ಈ ಹರಕೆ ಪ್ರತಿಕೃತಿಗಳಿಗೆಂದೇ ಜಾತ್ರೆ ಸಮಯದಲ್ಲಿ ತೆರೆದುಕೊಂಡಿರುತ್ತವೆ.
ನೆರೆಯ ರಾಜ್ಯವಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ. ಒಮ್ಮೆ ದಸರಾ ಹಬ್ಬ ಮುಗಿದ ಬಳಿಕ ಆಗಮಿಸಬೇಕೆಂದರೆ ಈ ಮಾರ್ಗವಾಗಿ ಬಂದರೆ ಹಾರನಕಣಿವೆ ರಂಗನಾಥ ಸ್ವಾಮಿಯ ದೇವಸ್ಥಾನ ಪ್ರವೇಶಿಸಬಹುದಾಗಿದೆ.

ಹಾರನಕಣಿವೆಗೆ ಹೋಗುವ ಮಾರ್ಗ
ಚಿತ್ರದುರ್ಗದಿಂದ ಬೆಂಗಳೂರು ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಂತೆ ಹಿರಿಯೂರಿನಿಂದ ಹೊಸದುರ್ಗ ಮಾರ್ಗವಾಗಿ 20 ಕಿ.ಮೀ. ದೂರ ಹಾಗೂ ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ 35 ಕಿ.ಮೀ. ದೂರದಲ್ಲಿ ಈ ದೇವಸ್ಥಾನ ಇದೆ. ಈ ರಂಗನಾಥ ಸ್ವಾಮಿಯ ದರ್ಶನ ಪಡೆದು ನಂತರ ಸಮೀಪದಲ್ಲಿರುವ ಮೈಸೂರು ಮಹಾರಾಜರು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ವಾಣಿವಿಲಾಸ ಜಲಾಶಯವನ್ನು ವೀಕ್ಷಿಸಬಹುದಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಜಾತ್ರೆಯಲ್ಲಿ ಚಿತ್ರದುರ್ಗ ಡಿಎಚ್ಒ ರಂಗನಾಥ್, ಹೊಸದುರ್ಗ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಹಾಗೂ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.












Click it and Unblock the Notifications