ಕಾಲದೊಂದಿಗೆ ಓಡುವ ಕೈವಾಚು ಪುರಾಣ

Story of my wrist watch
ಇತ್ತೀಚೆಗೆ ನನ್ನ ವಾಚು (ಕೈ ಗಡಿಯಾರ) ನಿಧಾನವಾಗಿ ಹಿಂದೆ ಬೀಳತೊಡಗಿದೆ. ಈ ವಾಚನ್ನು ನಾನು ಸುಮಾರು ಏಳು ವರ್ಷಗಳ ಹಿಂದೆ ಕೊಂಡುಕೊಂಡಿದ್ದೆ. ನನ್ನ ಈ ವಾಚು ಅಂತಹ ವೈಭವಪೂರ್ಣವಾದದ್ದೇನಲ್ಲ. ತುಂಬಾ ಸರಳವಾದ ಬಿಳಿ ಹಿನ್ನೆಲೆಯಲ್ಲಿ ಒಂದರಿಂದ ಹನ್ನೆರಡರವರೆಗೆ ಎಲ್ಲ ಸಂಖ್ಯೆಗಳನ್ನು ಹೊಂದಿರುವ ಸರಳ ವಾಚು ಇದು.

ಅನೇಕ ಗಡಿಯಾರಗಳನ್ನು ನೋಡಿದ ನಂತರ ಈ ಗಡಿಯಾರವನ್ನು ನಾನು ಆರಿಸಿಕೊಂಡಾಗ ನನ್ನ ಹೆಂಡತಿಗೆ ಅದು ಇಷ್ಟವಾಗಿಲ್ಲ ಎಂಬುದು ಅವಳ ಮುಖಭಾವದಿಂದ ತಿಳಿಯಿತು. ಮೈ ಮೇಲಿನ ಬಟ್ಟೆಗಳಿಂದ ಹಿಡಿದು ಹಾಕಿಕೊಳ್ಳುವ ಪಾದರಕ್ಷೆಗಳವರೆಗೆ ಸ್ವಲ್ಪವಾದರೂ ಆಡಂಬರ ಕಾಣಬೇಕು ಎಂಬ ಅಭಿರುಚಿಯನ್ನು ಹೊಂದಿದ ಅವಳಿಗೆ ನನ್ನ ಈ ಸರ್ವ ಸಾಧಾರಣ ವಾಚು ಈ ಅನಭಿರುಚಿಯ ಪರಾಕಾಷ್ಠೆ! ಅವಳಿಗೆ ತದ್ವಿರುದ್ಧವಾಗಿ ನನ್ನ ಸ್ವಭಾವ. ಅಲ್ಲದೇ ನನ್ನದೇ ಹಠ ಸಾಧಿಸುವ ಸ್ವಭಾವ ಬೇರೆ. ಆದುದರಿಂದ ಈ ವಾಚು ನನ್ನ ಜೊತೆ ಮನೆಗೆ ಬಂದಿತು ಮತ್ತು ಕಳೆದ ಏಳು ವರ್ಷಗಳಿಂದ ನನ್ನ ನಿರಂತರ ಸಾಥಿಯಾಗಿದೆ.

ಈ ನಡುವೆ ನಾನೊಂದು ಕೆಲಸವನ್ನು ಬಿಟ್ಟು ಮತ್ತೊಂದೆಡೆ ಸೇರಿಕೊಂಡಾಗ, ನನ್ನನ್ನು ಬೀಳ್ಕೊಡುವ ಸಂದರ್ಭದಲ್ಲಿ ನನ್ನ ಹಿಂದಿನ ಕಂಪನಿಯ ನನ್ನ ಸಹೋದ್ಯೋಗಿಗಳು ನನಗೊಂದು ವಾಚನ್ನು ಕಾಣಿಕೆಯಾಗಿ ನೀಡಿದರು. ಈ ವಾಚು ಕಪ್ಪು ಡಯಲಿನಲ್ಲಿ ಬಿಳಿ ಮುಳ್ಳುಗಳನ್ನು ಹೊಂದಿದ ಮತ್ತು ನಂಬರುಗಳ ಬದಲಿಗೆ ಹರಳುಗಳನ್ನು ಹೊಂದಿದ, ಸ್ವಲ್ಪ ಹೈಫೈ ತರಹದ ಕೈಗಡಿಯಾರವಾಗಿತ್ತು. ಈ ಕೈಗಡಿಯಾರವನ್ನು ನೋಡಿದ ನನ್ನ ಪತ್ನಿ, "ನೋಡಿ, ನಿಮ್ಮ ವಾಚನ್ನು ನೋಡಿದ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಮೇಲೆ ಅನುಕಂಪವಾಗಿ ಈ ಹೊಸ ಸುಂದರ ವಾಚನ್ನು ಕೊಡಿಸಿದ್ದಾರೆ" ಎಂದಳು. ಆದರೂ ನಾನು ನನ್ನ ಹಳೆಯ ವಾಚಿಗೇ ಜೋತು ಬಿದ್ದಾಗ ಅವಳಿಗೆ ನನ್ನ ಮೇಲೆ ಅಸಾಧ್ಯ ಕೋಪ.

ಅಂತಹ ನನ್ನ ನೆಚ್ಚಿನ ಈ ಕೈಗಡಿಯಾರ ನಿಧಾನವಾಗಿ ಹಿಂದೆ ಬೀಳತೊಡಗಿದಾಗ, ಎಲ್ಲರಿಗಿಂತ ಹೆಚ್ಚು ಸಂತೋಷವಾಗಿದ್ದು ನನ್ನ ಪತ್ನಿಗೆ. ಅವಳು ಒಂದು ಹೊಸ ವಾಚನ್ನು ಕೊಂಡುಕೊಳ್ಳಿ ಎಂದು ನನ್ನ ದುಂಬಾಲು ಬಿದ್ದಳು. ಈ ವಾಚನ್ನೇ ಸ್ವಲ್ಪ ರಿಪೇರಿ ಮಾಡಿಸಿದರೆ ಇನ್ನೂ ನಾಲ್ಕೈದು ವರ್ಷ ಓಡುವದು ಗ್ಯಾರಂಟಿ ಎಂದು ನಾನು ಉತ್ತರಕೊಟ್ಟಾಗ ಇದು ಹೋಪ್‌ಲೆಸ್ ಕೇಸು ಎಂದುಕೊಂಡು ಸುಮ್ಮನಾದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+