ಹಿಂದಿಗೆ ಬಂದ ವಿಂಡೋಸ್‌ ಎಕ್ಸ್‌ಪಿ ಕನ್ನಡಕ್ಕೆ ಬಾರದೆ?

ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಇಚ್ಛಾಶಕ್ತಿ ಮತ್ತು ತಾಕತ್ತಿದ್ದಲ್ಲಿ ಕನ್ನಡವೂ ಕಂಪ್ಯೂಟರ್‌ನ ಒಂದು ಭಾಷೆಯಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಬಹಳ ದಿನಗಳಿಂದ ಕನ್ನಡ, ಕಂಪ್ಯೂಟರ್‌, ಫಾಂಟುಗಳು, ಕನ್ನಡದಲ್ಲಿ ವಿಂಡೋಸ್‌ ಎಕ್‌ಪಿ ಆಪರೇಟಿಂಗ್‌ ಸಿಸ್ಟಂ, ಇತ್ಯಾದಿಗಳ ಬಗ್ಗೆ ನಡೆಯುತ್ತಿದ್ದ ಚರ್ಚೆ ಮತ್ತು ಅಗತ್ಯಗಳು ಒಂದು ತಾರ್ಕಿಕ ಘಟ್ಟ ಮುಟ್ಟುವ ಸಾಧ್ಯತೆ ಇದೆ.

ಸೆಪ್ಟೆಂಬರ್‌ 29 ರ ಬುಧವಾರ, ಮೈಕ್ರೋಸಾಫ್ಟ್‌ ಕಂಪನಿ ತನ್ನ ಪ್ರಕಟಣೆಯಲ್ಲಿ ಹಿಂದಿ ಭಾಷೆಯಲ್ಲಿ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಮ್‌ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹೆಚ್‌.ಪಿ, ವಿಪ್ರೋ, ಹೆಚ್‌.ಸಿ.ಎಲ್‌ ನಂತಹ ಕಂಪನಿಗಳು ಈ ಯೋಜನೆಗೆ ಬೆನ್ನೆಲುಬಾಗಿ ಸಹಕರಿಸಿದ್ದು 2005ರ ಮೊದಲ ದಿನಗಳಲ್ಲಿ ಈ ಆವೃತ್ತಿ ಹೊಸ ಕಂಪ್ಯೂಟರ್‌ಗಳಲ್ಲಿ ಪ್ರಾಯೋಗಿಕವಾಗಿ ದೊರಕಲಿವೆ.

ಮೈಕ್ರೋಸಾಫ್ಟ್‌ ಇದರ ಬೆಲೆಯನ್ನು ತಿಳಿಸಿಲ್ಲವಾದರೂ ತಜ್ಞರು ಸುಮಾರು 36 ಡಾಲರುಗಳಿರಬಹುದು ಎಂದು ಅಂದಾಜು ಮಾಡಿದ್ದಾರೆ. ಇದು ಇಂಗ್ಲಿಷ್‌ ಆವೃತ್ತಿಯ ಬೆಲೆಯ ಶೇ. 20 ಅಷ್ಟೆ . ಈ ರೀತಿಯ ಸರಳೀಕೃತ ಆವೃತ್ತಿಗಳನ್ನು ಈ ಬೆಲೆಯ ಸುಮಾರಿನಲ್ಲಿಯೇ ಮೈಕ್ರೋಸಾಫ್ಟ್‌ ರಷ್ಯ, ಇಂಡೋನೇಷ್ಯ, ಮಲೇಷಿಯ ಮತ್ತು ಥಾಯ್‌ ಭಾಷೆಗಳಲ್ಲಿ ಸಿದ್ಧಪಡಿಸಿದೆ.

ಇದೇ ಸಮಯದಲ್ಲಿ ಭಾರತದ ಇತರ ಭಾಷೆಗಳಲ್ಲಿ ಹೊರತರುವ ಬಗ್ಗೆ ಅಂತಹ ಉತ್ಸಾಹಕರ ಸುದ್ದಿ ಇಲ್ಲ. ಹಿಂದಿಯದರ ಯಶಸ್ಸಿನ ಮೇಲೆ ಬೇರೆ ಭಾರತೀಯ ಭಾಷೆಗಳ ಭವಿಷ್ಯ ನಿಂತ ಹಾಗಿದೆ. ಆದರೂ ಮೈಕ್ರೋಸಾಫ್ಟ್‌ನ ಬುದ್ಧಿವಂತ ಮ್ಯಾನೇಜರ್‌ ಒಬ್ಬ ಹೇಳುವುದು : ‘ಇದು ಭಾರತದಲ್ಲಿ ಪ್ರಸ್ತುತವಾಗಬೇಕಾದರೆ ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಬೇಕು'. ಅಂದರೆ, ಬೇರೆ ಭಾಷೆಗಳಲ್ಲಿ ಬೇಡಿಕೆ ಬಂದರೆ ಅಲ್ಲೂ ತರುತ್ತೇವೆ ಎಂದರ್ಥವಲ್ಲವೆ?

ಸುಮಾರು ದಿನಗಳಿಂದ ಕರ್ನಾಟಕದ ವಿವಿಧ ವೇದಿಕೆಗಳಲ್ಲಿ ‘ಕಂಪ್ಯೂಟರ್‌ನಲ್ಲಿ ಕನ್ನಡ'ದ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಇದು ಪ್ರಮುಖ ತಿರುವು. ಈಗ ಭಾರತದ ಭಾಷೆಗಳಲ್ಲಿಯೂ ಕಂಪ್ಯೂಟರ್‌ ಬರುತ್ತದೆ ಎನ್ನುವುದು ವಾಸ್ತವವಾಯಿತು. ಆದರೆ, ಈಗ ಎಂದಿನಂತೆ ಬೇಕಾಗಿರುವುದು ಆಡಳಿತಾಂಗದ ಇಚ್ಛಾಶಕ್ತಿ. ಆದಷ್ಟು ಬೇಗ ಸರ್ಕಾರ ಮತ್ತು ವಿವಿಧ ಕರ್ನಾಟಕದ ಸಂಸ್ಥೆಗಳು, ಉದ್ದಿಮೆಗಳು ಕನ್ನಡದಲ್ಲಿಯೂ ಆಪರೇಟಿಂಗ್‌ ಸಿಸ್ಟಂ ತರುವಂತೆ ಮೈಕ್ರೋಸಾಫ್ಟ್‌ನ ಮೇಲೆ ಒತ್ತಡ ತರಬೇಕು. ಹಿಂದಿಯದರ ಫಲಿತಾಂಶದ ಮೇಲೆ ನಮ್ಮ ಭವಿಷ್ಯ ನಿಲ್ಲಬಾರದು; ಬದಲು ಅದರ ಸಮಾನಾಂತರದಲ್ಲಿ ಬೆಳೆಯಬೇಕು.

ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮೈಕ್ರೋಸಾಫ್ಟ್‌ನಿಂದ ಒಂದು ಪ್ರಕಟಣೆ ಹೊರಡಿಸಲು ಸಾಧ್ಯವಾದರೆ ಈ ವರ್ಷದ ನವೆಂಬರ್‌ ತಿಂಗಳಿನ ರಾಜ್ಯೋತ್ಸವಕ್ಕೆ ಕನ್ನಡ ಭಾಷೆಗೆ, ಕನ್ನಡ ಜನತೆಗೆ ಇದಕ್ಕಿಂತ ಉತ್ತಮ ಉಡುಗೊರೆ ಯಾವುದೂ ಇಲ್ಲ. ಇದು ಅಸಾಧ್ಯವೂ ಅಲ್ಲ. ಇದೇ ನಿಟ್ಟಿನಲ್ಲಿ ವಿಶ್ವದ ವಿವಿಧ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿರುವ ಪ್ರಭಾವಶಾಲಿ ಕನ್ನಡಿಗರು ಸಹ ಪರಿಣಾಮಕಾರಿಯಾಗಿ, ತ್ವರಿತವಾಗಿ ತಮ್ಮ ಪ್ರಭಾವ ಬೀರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+