ಉಡುಪಿಗೆ ಶೀಘ್ರದಲ್ಲೇ 24 ಗಂಟೆಯೂ ನೀರು ಸರಬರಾಜು
ಉಡುಪಿ, ಆಗಸ್ಟ್ 22: ಉಡುಪಿ ನಗರಕ್ಕೆ ದಿನದ ಇಪ್ಪತ್ತನಾಲ್ಕು ಗಂಟೆಯೂ ನೀರು ಕೊಡುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಮೂರು ಹಂತಗಳ 270 ಕೋಟಿ ಯೋಜನೆಗೆ ಅನುಮೋದನೆ ನೀಡಿರುವುದಾಗಿ ತಿಳಿದುಬಂದಿದೆ.
ಮೊದಲನೆಯದಾಗಿ ವರಾಹಿಯಿಂದ ನೀರು ಸಂಸ್ಕರಣಾ ಘಟಕಕ್ಕೆ ನೀರು ಕೊಂಡೊಯ್ಯುವ (119.5 ಕೋಟಿ), ಘಟಕದಲ್ಲಿ ನೀರಿನ ಸಂಸ್ಕರಣೆ ಮಾಡುವ (47.58 ಕೋಟಿ), ಆ ನೀರನ್ನು ಉಡುಪಿಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಹರಿಸುವ (103 ಕೋಟಿ) ಹಂತಗಳನ್ನು ಈ ಯೋಜನೆ ಒಳಗೊಂಡಿದೆ.
ಕುಂದಾಪುರದಲ್ಲಿನ ವರಾಹಿ ನೀರನ್ನು ನೀರು ಸಂಸ್ಕರಣಾ ಘಟಕಕ್ಕೆ 38.5 ಕಿಲೋ ಮೀಟರ್ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಸಂಸ್ಕರಣಾ ಘಟಕದಲ್ಲಿ ನೀರು ಸಂಸ್ಕರಣೆ ನಡೆದ ನಂತರ ಇಡೀ ಉಡುಪಿಗೆ ಅದನ್ನು ಹರಿಸಲಾಗುತ್ತದೆ.

35 ವಾರ್ಡ್ ಗಳ ವ್ಯಾಪ್ತಿಯಲ್ಲಿ, 17 ವಲಯಗಳ 18,737 ಮನೆಗಳಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಈ ಯೋಜನೆ ಒಳಗೊಂಡಿದೆ. ಎಲ್ಲಾ ಸಂಪರ್ಕಕ್ಕೂ ಮೀಟರ್ ಅಳವಡಿಕೆ ಮಾಡಲಾಗುವುದು. ಈ ಯೋಜನೆಯ ಕಾಂಟ್ರಾಕ್ಟನ್ನು ಎರಡು ಸಂಸ್ಥೆಗಳಿಗೆ ನೀಡಲಾಗಿದ್ದು, ಮಳೆಗಾಲ ಮುಗಿಯುತ್ತಿದ್ದಂತೆ ಯೋಜನಾ ಕಾರ್ಯ ಆರಂಭವಾಗಲಿದೆ. 2022ಕ್ಕೆ ಕಾಮಗಾರಿ ಮುಗಿಯುವ ಅಂದಾಜಿದೆ.












Click it and Unblock the Notifications