ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಅತ್ಯಾಚಾರ ಆರೋಪಿ ಕೊನೆಗೂ ಸೆರೆ
ಉಡುಪಿ, ಏಪ್ರಿಲ್ 02:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧಿತನಾಗಿದ್ದ ಆರೋಪಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಇದೀಗ ಮತ್ತೆ ಆರೋಪಿಯನ್ನು ಪುನಃ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರ ಸಹಾಯದಿಂದ ಆರೋಪಿ ಹನುಮಂತ ಬಸಪ್ಪ ಕಂಬಳಿಯನ್ನು ಪೊಲೀಸರು ಪುನಃ ಬಂಧಿಸಿದ್ದಾರೆ.
ಪ್ರಕರಣದ ವಿವರ
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು ನಡೆದ ಆಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನುಮಂತ ಬಸಪ್ಪ ಕಂಬಳಿಯನ್ನು ಬಂಧಿಸಿದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಲ್ಲಿಂದ ಹಿರಿಯಡ್ಕ ಸಬ್ ಜೈಲ್ ಗೆ ಕರೆದುಕೊಂಡು ಹೋಗುವಾಗ ಜೈಲಿನ ಸಮೀಪ ತಿರುವಿನಲ್ಲಿ ಪೊಲೀಸ್ ಜೀಪ್ ನಿಧಾನವಾಗುತ್ತಿದ್ದಂತೆ ಜೀಪ್ ನಿಂದು ಜಿಗಿದ ಹನುಮಂತ ಬಸಪ್ಪ ಪರಾರಿಯಾಗಿದ್ದ.
ಪೊಲೀಸ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ಆರೋಪಿ ಹಿರಿಯಡಕದಲ್ಲಿರುವ ಸಬ್ ಜೈಲು ಬಳಿ ಹಾಡಿಯಲ್ಲಿ ಓಡಿ ಅವಿತುಕೊಂಡಿದ್ದ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಅಲರ್ಟ್ ಘೋಷಣೆ ಮಾಡಿದ್ದರು. ನಾಕಬಂದಿ ನಡೆಸಿ ಆರೋಪಿ ಹನುಮಂತ ಬಸಪ್ಪ ಕಂಬಳಿ ತಪ್ಪಿಸಿಕೊಳ್ಳದಂತೆ ನಿಗಾ ವಹಿಸಿದ್ದರು.
ಆರೋಪಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿ ಶೋಧಕಾರ್ಯ ಆರಂಭಿಸಿದ್ದರು. ಈ ನಡುವೆ ಸಾರ್ವಜನಿಕರ ಸಹಾಯದಿಂದ ಪೊಲೀಸರು ಪೆರ್ಣಂಕಿಲ ಕಾಡಿನಲ್ಲಿ ಆರೋಪಿ ಹನುಮಂತ ಬಸಪ್ಪ ಕಂಬಳಿಯನ್ನು ಬಂಧಿಸಿದ್ದಾರೆ.












Click it and Unblock the Notifications