Lok Sabha Election 2024: ಉಡುಪಿ-ಚಿಕ್ಕಮಗಳೂರಿನಲ್ಲಿ ಯಾರಿಗೆ ಗೆಲುವು? ಹೀಗೊಂದು ಲೆಕ್ಕಚಾರ, ವಿಶ್ಲೇಷಣೆ
ಉಡುಪಿ, ಮೇ 1: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಮುಗಿದು ಅಭ್ಯರ್ಥಿಗಳು ಪಕ್ಕದ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರು ಗೆಲುವು ನಮ್ಮದೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಬೂತ್ ಮಟ್ಟದ ಮತದಾನದ ಲೆಕ್ಕಾಚಾರ ಹಿಡಿದು ಎರಡು ಪಕ್ಷಗಳು ನಾವೇ ಜಯಶಾಲಿ ಎನ್ನುವ ಫೋಸ್ ನೀಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಮತದಾನದ ಬಳಿಕವೂ ಫಿಫ್ಟಿ ಫಿಫ್ಟಿ ಅವಕಾಶಗಳು ಎದ್ದು ಕಾಣುತ್ತಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದು ಐದು ದಿನಗಳೆ ಕಳೆದಿದೆ. ಸದ್ಯ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪಕ್ಕದ ಶಿವಮೊಗ್ಗ ಕ್ಷೇತ್ರದಲ್ಲಿ ಅಭ್ಯರ್ಥಿಯ ಪರ ಪ್ರಚಾರ ನಿರತರಾಗಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗಡೆ ದೇವಸ್ಥಾನ, ಬಂದು ಮಿತ್ರರು, ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಎರಡು ಪಕ್ಷದ ಕಾರ್ಯಕರ್ತರು ಮಾತ್ರ ಈ ಬಾರಿ ಜಯ ನಮ್ಮದೇ ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಾದ ವಿವಾದ ನಡೆಸುತ್ತಿದ್ದಾರೆ.\

ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಜಿಲ್ಲೆ ಬರುವುದರಿಂದ ಉಡುಪಿಯಲ್ಲಿ ನಾಲ್ವರು ಬಿಜೆಪಿ ಶಾಸಕರು ಹಾಗೂ ಚಿಕ್ಕಮಗಳೂರಿನ ನಾಲ್ಕೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಭಿನ್ನ ರೀತಿಯಲ್ಲಿ ಚುನಾವಣೆಯನ್ನು ವಿಶ್ಲೇಷಿಸಲಾಗುತ್ತಿದೆ. ಯಾರೇ ಗೆದ್ದರೂ ಅತ್ಯಂತ ಸಣ್ಣ ಮಾರ್ಜಿನ್‌ನಲ್ಲಿ ಗೆಲ್ಲಬಹುದು. ದಾಖಲೆಯ ಗೆಲುವು ಅಥವಾ ದೊಡ್ಡ ಅಂತರದ ಗೆಲವು ಸಿಗುವುದು ಕಷ್ಟ ಎಂಬುದು ಎರಡೂ ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಪಕ್ಷದ ಅಭ್ಯರ್ಥಿಗೆ ಲೀಡ್ ಬಂದರೆ, ಇನ್ನೊಂದು ಪಕ್ಷದ ಅಭ್ಯರ್ಥಿ ತೀವ್ರ ಹೋರಾಟ ನೀಡಲಿದ್ದಾರೆ. ಹಾಗೆಯೇ ಚಿಕ್ಕಮಗಳೂರಿನಲ್ಲಿ ತೀವ್ರ ಪೈಪೋಟಿ ನೀಡಿದ ಪಕ್ಷದ ಅಭ್ಯರ್ಥಿಗೆ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಬರುವ ಸಾಧ್ಯತೆಯಿದೆ ಹಾಗೂ ಇನ್ನೊಂದು ಪಕ್ಷದ ಅಭ್ಯರ್ಥಿ ಇಲ್ಲಿ ಪ್ರಬಲ ಹೋರಾಟ ನೀಡಲಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಅದು ಕನಿಷ್ಠ ಅಂತರದ ಗೆಲುವಾಗಲಿದೆ ಎಂಬ ಮಾತುಗಳು ಕ್ಷೇತ್ರದುದ್ದಕ್ಕೂ ಕೇಳಿ ಬರುತ್ತಿವೆ.
ಚುನಾವಣೆ ಮುಗಿದ ದಿನದಿಂದಲೇ ಎರಡೂ ಪಕ್ಷದ ನಾಯಕರು ಎಲ್ಲ ಬೂತ್‌ಗಳ ಅಂದಾಜು ಮತ ಗಳನ್ನು ಕ್ರೋಡೀಕರಿಸಿಕೊಂಡು, ಜಾತಿ ಲೆಕ್ಕಾಚಾರದಲ್ಲಿ ನಿರ್ದಿಷ್ಟ ಮತಗಳ ಅಂತರದ ಗೆಲುವು ಬರಲಿದೆ ಎಂಬುದನ್ನು ಎರಡೂ ಪಕ್ಷಗಳಲ್ಲೂ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಬೂತ್‌ಗಳಿಂದ ಬಂದಿರುವ ಮಾಹಿತಿ ಪಕ್ಷಗಳ ಲೆಕ್ಕಾಚಾರದ ಪ್ರಕಾರ ಪಕ್ಕ ಇರಲಿದೆ. ಹೀಗಾಗಿ ಎರಡೂ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿವೆ.

ಒಟ್ಟಾರೆಯಾಗಿ, ಲೋಕ ಸಮರದಲ್ಲಿ ಯಾರು ವಿಜಯ ಮಾಲೆ ಹಾಕಿಕೊಳ್ಳುತ್ತಾರೆ ಎನ್ನುವುದು ತಿಳಿಯಲು ಜೂ. 4ರವರೆಗೂ ಕಾಯಲೇಬೇಕು. ಫಲಿತಾಂಶಕ್ಕೆ ಇನ್ನೂ ಒಂದುವರೆ ತಿಂಗಳು ಇರುವುದರಿಂದ ಎರಡು ಪಕ್ಷದ ಕಾರ್ಯಕರ್ತರು ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಸಮಪರ್ಕವಾಗಿ ಬಳಸಿಕೊಳ್ಳುತ್ತಿದ್ದಾರೆ.












Click it and Unblock the Notifications