ತರಗತಿಯಲ್ಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕಾಮುಕ ಶಿಕ್ಷಕ ಬಂಧನ
ಉಡುಪಿ, ಡಿಸೆಂಬರ್ 14: ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕನೋರ್ವ ಅದೇ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಗೆ ತರಗತಿಯಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಾಲಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶಿಕ್ಷಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ.
ಈತ ವಿದ್ಯಾರ್ಥಿನಿಗೆ ನೀಡಿದ ಲೈಂಗಿಕ ಕಿರುಕುಳದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಾಲೆಯೊಂದರಲ್ಲಿ ನಡೆದ ದೃಶ್ಯಾವಳಿ ಇದು ಎಂದು ಹೇಳಲಾಗುತ್ತಿತ್ತು. ವಿದ್ಯಾರ್ಥಿನಿ ಧರಿಸಿರುವ ಯುನಿಫಾಂ ಆಧಾರದಲ್ಲಿ ಇದು ಕಾರ್ಕಳದ ಶಾಲೆಯೊಂದರ ದೃಶ್ಯ ಎಂದು ಹೇಳಲಾಗುತ್ತಿತ್ತು.

ತರಗತಿಗೆ ಬೇರೆ ವಿದ್ಯಾರ್ಥಿಗಳು ಬರುವ ಮೊದಲೇ ವಿದ್ಯಾರ್ಥಿನಿಯನ್ನು ಕರೆಸಿಕೊಳ್ಳುತ್ತಿದ್ದ ಈತ ತರಗತಿಯ ಕೊಠಡಿಯಲ್ಲೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಹೇಳಲಾಗಿದೆ. ಈ ವಿಚಾರ ತಿಳಿದಿದ್ದ ಕೆಲವರು ಶಿಕ್ಷಕನ ಈ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗ ಶಿಕ್ಷಕನನ್ನು ಬಂಧಿಸಿದ್ದಾರೆ.












Click it and Unblock the Notifications