ಉಡುಪಿಯಲ್ಲಿ ಕನಕನ ಗುಡಿಗೆ ಕಾಲ ಸನ್ನಿಹಿತ; ಕನಕ ಭಕ್ತರಲ್ಲಿ ಪುಳಕ
ಉಡುಪಿ, ನವೆಂಬರ್ 15: ಕನಕ ಜಯಂತಿಯಾದ ಇಂದು ಬೆಂಗಳೂರಿನಿಂದ ಕನಕ ಸದ್ಭಾವನಾ ಯಾತ್ರೆಯು ಉಡುಪಿ ತಲುಪಿದ್ದು, ಅಪಾರ ಸಂಖ್ಯೆಯ ಕನಕ ಭಕ್ತರು ಪಾಲ್ಗೊಂಡಿದ್ದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಕನಕದಾಸರಿಗೆ ಗೌರವವಿಲ್ಲ, ಭಕ್ತ ಕನಕನಿಗೆ ಸರಿಯಾದ ಪೂಜೆ ಸಲ್ಲುತ್ತಿಲ್ಲ ಎಂಬೆಲ್ಲಾ ಆರೋಪಗಳ ಪಟ್ಟಿಯೇ ಇತ್ತು. ಈ ವಿಚಾರದಲ್ಲಿ ಬಹಳ ಗೊಂದಲಗಳು, ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಈ ಮಧ್ಯೆ ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಇಂದು ಉಡುಪಿಗೆ ತಲುಪಿತು. ವರ್ಷಂಪ್ರತಿಯಂತೆ ಈ ಸಲವೂ ಕನಕ ಭಕ್ತರು ಸದ್ಭಾವನಾ ಜ್ಯೋತಿ ರಥಯಾತ್ರೆ ಮೂಲಕ ಕೃಷ್ಣಮಠದ ಕನಕ ಗೋಪುರಕ್ಕೆ ಬಂದು ಪೂಜೆ ಸಲ್ಲಿಸಿದರು. ಪರ್ಯಾಯ ಪಲಿಮಾರು ಶ್ರೀಗಳು ಕನಕದಾಸರ ಮೂರ್ತಿಗೆ ಪೂಜೆ ನೆರವೇರಿಸಿದರು.

ರಥಬೀದಿಯಲ್ಲಿ ಕನಕದಾಸರಿಗೊಂದು ದೇವಸ್ಥಾನ ನಿರ್ಮಾಣ ಮಾಡಬೇಕು ಎಂಬುದು ಬಹಳ ಹಿಂದಿನ ಬೇಡಿಕೆ. ಇದೀಗ ಮಠದ ಪಾರ್ಶ್ವದಲ್ಲಿರುವ ಕನಕ ಮಂಟಪದಲ್ಲಿ ಬೃಹತ್ ಕನಕ ಮೂರ್ತಿ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ. ಈ ಸಂಬಂಧ ಸಕಲ ಸಿದ್ಧತೆಗಳೂ ನಡೆದಿವೆ. ಜನವರಿ ನಂತರ ಈ ಕನಸು ನೆರವೇರಲಿದ್ದು ಕನಕ ಭಕ್ತರು ಪುಳಕಗೊಂಡಿದ್ದಾರೆ.
ಈಗಿರುವ ಕನಕನ ಪುತ್ಥಳಿಯಿರುವ ಸ್ಥಳದಲ್ಲೇ ಹೊಸ ಗುಡಿ ಮತ್ತು ಮೂರ್ತಿ ತಲೆಯೆತ್ತಲಿದೆ. ತಮಿಳು ನಾಡಿನ ಶಿಲ್ಪಿಗಳು ಕೆತ್ತನಾ ಕಾರ್ಯ ಶುರು ಮಾಡಿದ್ದಾರೆ. ಮುಂದಿನ ಕನಕ ಜಯಂತಿ ವೇಳೆಗೆ ಈ ದೇಗುಲ ನಿರ್ಮಾಣವಾಗಿ ಪೂಜೆ ಆರಂಭವಾಗಲಿರುವುದಾಗಿ ತಿಳಿದುಬಂದಿದೆ.












Click it and Unblock the Notifications