ಗೌರಿ ಲಂಕೇಶ್ ಹತ್ಯೆಯ ಹಿಂದೆ ಇದೆಯಾ ಕರಾವಳಿಯ ನಂಟು?
ಉಡುಪಿ, ಆಗಸ್ಟ್.09: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಇಬ್ಬರನ್ನು ಎಸ್ ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದ್ದು , ಇವರು ಹಿಂದೂ ಜಾಗರಣ ವೇದಿಕೆಯ ಕಾಪು ಸಂಘಟನೆಯ ಪ್ರಮುಖರಾಗಿದ್ದಾರೆ.
ಸಂದೇಶ್ ಶೆಟ್ಟಿ ಪಾದೆಬೆಟ್ಟು (28) ಹಾಗೂ ಯುವರಾಜ್ ಕಂಚಿನಡ್ಕ(30) ಬಂಧಿತರು. ಬೆಂಗಳೂರು ಎಸ್ ಐ ಟಿಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಗೌರಿ ಹತ್ಯೆ ಪ್ರಕರಣದ ಆರೋಪಿಗಳೊಂದಿಗೆ ಲಿಂಕ್ ಹೊಂದಿದ್ದರು ಎಂಬ ಆರೋಪ ಇವರಿಬ್ಬರ ಮೇಲಿದೆ.
ಇವರಿಬ್ಬರನ್ನು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಮನೆಯಿಂದಲೇ ವಶಕ್ಕೆ ಪಡೆದುಕೊಳ್ಳಲಾಯಿತು. ಮೂವರು ಎಸ್ ಐಟಿ ಅಧಿಕಾರಿಗಳು ಮತ್ತು ಸ್ಥಳೀಯ ಪಡುಬಿದ್ರೆ ಠಾಣೆಯ ಪೊಲೀಸರು ಆರೋಪಿಗಳ ಮನೆಗೇ ಆಗಮಿಸಿ ವಿಚಾರಣೆ ಮಾಡಬೇಕಿದೆ ಎಂದು ಹೇಳಿ ಕರೆದೊಯ್ದಿದ್ದಾರೆ.

ಬಂಧಿತ ಇಬ್ಬರೂ ಗೆಳೆಯರಾಗಿದ್ದು, ಯುವರಾಜ್ ಹಿಂದೂ ಜಾಗರಣ ವೇದಿಕೆಯ ನಿಧಿ ಪ್ರಮುಖ್ ಆಗಿದ್ದರೆ , ಸಂದೇಶ್ ಶೆಟ್ಟಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಹ ಸಂಯೋಜಕನಾಗಿದ್ದ. ಆದರೆ ಸ್ಥಳೀಯ ಹಿಂದೂ ಜಾಗರಣೆ ವೇದಿಕೆ ಮುಖಂಡ ಪ್ರತಿಕ್ರಿಯೆ ನೀಡಿ ಈ ಇಬ್ಬರನ್ನೂ ಯಾವ ವಿಷಯದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಇಲ್ಲ. ಸಂಘಟನೆಯಲ್ಲಿ ಸಕ್ರಿಯವಾಗಿದ್ದದ್ದು ನಿಜ. ಆದರೆ ಯಾವುದೇ ಕೊಲೆ ಕೃತ್ಯದಲ್ಲಿ ಭಾಗಿಯಾದವರಲ್ಲ ಎಂದಿದ್ದಾರೆ.
ಗುತ್ತಿಗೆದಾರ ಯುವರಾಜ್ ಮನೆಯಲ್ಲಿ ತಂದೆ ತಾಯಿ ಮತ್ತು ಅಕ್ಕನ ಜೊತೆ ಇರುವಾತ. ಇವತ್ತು ಬೆಳಗ್ಗೆ ಮನೆಗೆ ಪೊಲೀಸರು ಬಂದಾಗ ಮನೆಯವರಿಗೆ ಏನೂ ತೋಚಿರಲಿಲ್ಲ. ಮಗನನ್ನು ಬೆಂಗಳೂರಿಗೆ ಕರೆದೊಯ್ದ ಮಾಹಿತಿ ಯುವರಾಜ್ ಸ್ನೇಹಿತರ ಮೂಲಕ ಮನೆಯವರಿಗೆ ಗೊತ್ತಾಗಿದೆ. ವಿಷಯ ತಿಳಿದ ತಾಯಿ ಕಣ್ಣೀರಾಗಿದ್ದಾರೆ.
"ನನ್ನ ಮಗನಿಗೆ ಏನಾದ್ರೂ ಆದರೆ ಅದಕ್ಕೆ ಸರಕಾರವೇ ಹೊಣೆ. ಆತ ಸಾಧು ಮನುಷ್ಯ. ಯಾವುದೇ ದುರಭ್ಯಾಸಗಳೂ ಇರಲಿಲ್ಲ. ನನ್ನ ಮಗ ಜಗಳ ಮಾಡುವವನಲ್ಲ. ಆದ್ರೆ ಜಗಳ ಬಿಡಿಸಲು ಹೋಗುತ್ತಿದ್ದ" ಅಂತ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದೆಡೆ ಯುವರಾಜ್ ಸ್ನೇಹಿತ ಸಂದೇಶ್ ಶೆಟ್ಟಿ ಪಾದೆಬೆಟ್ಟು ನಿವಾಸಿ. ಈತ ಡೈರಿಯೊಂದನ್ನು ನಡೆಸುತ್ತಿದ್ದ. ಇವರಿಬ್ಬರ ಬಗ್ಗೆ ಮಾಹಿತಿ ಪಡೆದಿದ್ದ ಎಸ್ ಐಟಿ ಬೆಳಗ್ಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಕರೆದೊಯ್ದಿದೆ. ಈ ಇಬ್ಬರ ಮೇಲೂ ಅಂತಹ ಗಂಭೀರ ಆರೋಪಗಳಾಗಲೀ ಪ್ರಕರಣಗಳಾಗಲೀ ಇಲ್ಲ ಎಂಬುದು ಗಮನಾರ್ಹ ಸಂಗತಿ.
ಆದ್ರೆ ಎಸ್ ಐಟಿ ಪೊಲೀಸರು ಈಗಾಗಲೇ ಬಂಧಿಸಿರುವ ಗೌರಿ ಹತ್ಯೆ ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಬಂಧಿತರು ಪತ್ರಕರ್ತೆ ಗೌರಿಯ ಕೊಲೆಯಲ್ಲಿ ಯಾವ ಪಾತ್ರ ವಹಿಸಿದ್ದಾರೆ ಎಂಬುದು ಹೆಚ್ಚಿನ ವಿಚಾರಣೆಯ ಬಳಿಕವೇ ಸ್ಪಷ್ಟವಾಗಲಿದೆ.












Click it and Unblock the Notifications