ಮಟ್ಟು ಕಡಲ ತೀರದಲ್ಲಿ ಮೀನಿನ ಬುಗ್ಗೆ ಕಂಡು ಚಕಿತಗೊಂಡ ಮೀನುಗಾರರು
ಉಡುಪಿ, ನವೆಂಬರ್. 17: ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಮೀನಿನ ಸುಗ್ಗಿ ಕಡಲ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. 3 ದಿನಗಳ ಹಿಂದೆ ಅರಬ್ಬೀ ಸಮುದ್ರದಲ್ಲಿ ಸಿಗುವ ರುಚಿಕರ ಭೂತಾಯಿ ಮೀನುಗಳು ಕುಂದಾಪುರದ ಕೋಡಿ ತೀರಕ್ಕೆ ಚಿಮ್ಮಿ ಬಂದಿದ್ದವು.
ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಕೈರಂಪಣಿ ಬಲೆಗೆ ರಾಶಿ ರಾಶಿ ಮೀನುಗಳು ಬಿದ್ದಿದ್ದವು. ಈಗ ಉಡುಪಿಯ ಸರದಿ. ಕಳೆದ ಒಂದು ತಿಂಗಳಲ್ಲಿ ಅರಬ್ಬೀ ಸಮುದ್ರದ ತಟದಲ್ಲೇ ರಾಶಿ ರಾಶಿ ಮೀನುಗಳು ಬಲೆಗೆ ಸಿಲುಕತೊಡಗಿವೆ.
ಕಾಪು ತಾಲೂಕಿನ ಮಟ್ಟು ಕಡಲ ಕಿನಾರೆಯಲ್ಲಿ ಲೆಕ್ಕವಿಲ್ಲದಷ್ಟು ಭೂತಾಯಿ ಮೀನುಗಳು ಬಲೆಗೆ ಸಿಕ್ಕಿ ಬಿದ್ದಿದ್ದು, ಬಲೆ ಬೀಸಿದ್ದ ಮೀನುಗಾರರಿಗೆ ಬಂಪರ್ ಮೀನುಗಳೇ ಸಿಕ್ಕಿವೆ.

ಸಮುದ್ರ ತೀರದಲ್ಲಿ ನಾಡದೋಣಿ ಮೀನುಗಾರರ ಎರಡು ದೋಣಿಗಳು ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಣ್ಣು ಹಾಯಿಸಿದಲ್ಲೆಲ್ಲಾ ಬಲೆಯ ವ್ಯಾಪ್ತಿಯಿಂದ ಹಾರುವ ಮೀನು ಕಾಣುತ್ತಿದ್ದು, ವೀಡಿಯೋ ಬಹಳ ಕುತೂಹಲ ಹುಟ್ಟಿಸುತ್ತದೆ. ಸಮುದ್ರದ ಮಧ್ಯೆಯಲ್ಲಿ ಮೀನಿನ ಬುಗ್ಗೆ ಕಾಣಿಸೋದು ಸಾಮಾನ್ಯ, ಆದ್ರೆ ಕಡಲ ಬದಿಯಲ್ಲಿ ಇಷ್ಟೊಂದು ಗಾತ್ರದಲ್ಲಿ ಮೀನು ಸಿಕ್ಕಿದ್ದು ಮೀನುಗಾರರಿಗೆ ಆಶ್ಚರ್ಯ ತಂದಿದೆ.












Click it and Unblock the Notifications