'ಕಾಂಗ್ರೆಸ್ಸಿಗರು ಆಧುನಿಕ ಭಸ್ಮಾಸುರರು' : ಅನಂತ್ ಕುಮಾರ್ ವಾಗ್ದಾಳಿ
Recommended Video

ಉಡುಪಿ, ಅಕ್ಟೋಬರ್ 17: ಅಹಂಕಾರ, ಅವ್ಯವಹಾರ, ಅಸಡ್ಡೆಯೇ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಅವರು ಮಾತಾಡಿದರು. ಈ ವೇಳೆ ಅವರು ಕಾಂಗ್ರೆಸ್ಸಿಗರು ಆಧುನಿಕ ಭಸ್ಮಾಸುರರು, ಅದರಲ್ಲೂ ಸಿಎಂ ಸಿದ್ದರಾಮಯ್ಯ ಅಹಂಕಾರದ ಮುಖ್ಯಮಂತ್ರಿ ಎಂದು ಕಿಡಿಕಾರಿದರು.

ಇತ್ತೀಚೆಗಷ್ಟೇ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಪಕ್ಷ ಸೇರಿದ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಅವರನ್ನು ಉದ್ದೇಶಿಸಿ ಮಾತನಾಡಿದ ಅನಂತ ಕುಮಾರ್ , "ರಾವಣನ ವಧೆ ನಂತರ ಹೊಸ ಆಡಳಿತ ಬರೋ ಮುಂಚೆ ವಿಭೀಷಣ ಅದ್ಯಾವ ರೀತಿಯಲ್ಲಿ ರಾವಣ ಸೇನೆ ಬಿಟ್ಟು ರಾಮನ ಸೇನೆಗೆ ಸೇರಿದನೋ ಅದೇ ರೀತಿ ಜಯಪ್ರಕಾಶ್ ಹೆಗ್ಡೆ ರಾವಣ ಸೇನೆ (ಕಾಂಗ್ರೆಸ್) ಬಿಟ್ಟು ರಾಮಸೇನೆ ಸೇರಿದ್ದಾರೆ," ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಡಿಸಿಎಂ ಆರ್ ಅಶೋಕ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ರಾಜ್ಯದ ಯಾವೊಬ್ಬ ಮಂತ್ರಿಗಳೂ ಕೆಲಸ ಮಾಡುತ್ತಿಲ್ಲ. ಏಕೆಂದರೆ ಇವರ ಹೆಡ್ ಮಾಸ್ಟರ್ ನಿದ್ದರಾಮಯ್ಯ; ಅದಕ್ಕಾಗಿ ನಾವು ಪದೇ ಪದೇ ಹೇಳುತ್ತಿದ್ದೇವೆ, ಎದ್ದೇಳು ನಿದ್ದರಾಮಯ್ಯ.. ಎದ್ದೇಳು ನಿದ್ದರಾಮಯ್ಯ.." ಎಂದು ಅವರು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ಕೆಲಸ ಮಾಡೋಕೆ ಬಂದಿಲ್ಲ. ರಾಜ್ಯದಲ್ಲಿ ಬೆಂಕಿ ಹಚ್ಚಲು ಬಂದಿದ್ದಾರೆ ಎಂದು ಅವರು ಆರೋಪಿಸಿದರು . ಇದೇ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕುರಿತು ಲೇವಡಿ ಮಾಡಿದ ಆರ್. ಅಶೋಕ್, "ರಾಹುಲ್ ಗಾಂಧಿ ಅಂದ್ರೆ ದೇಶದ ಜನತೆಗೆ ಯಾರೆಂದೇ ಗೊತ್ತಿಲ್ಲ. ಆದರೆ ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಲು ಮುಂದಾಗಿದೆ. ಇನ್ನು ರಾಜ್ಯಕ್ಕೆ ರಾಹುಲ್ ಗಾಂಧಿ ಕರೆತರೋದು ಬೇಡ ಅನ್ನೋದಾಗಿ ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ," ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಸೋಲು ಕಂಡಿದೆ. ಆದ್ದರಿಂದ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ್ರೆ ನಾವು ಸ್ವಾಗತಿಸುತ್ತೇವೆ ಎಂದು ಆರ್.ಅಶೋಕ್ ಕಾಂಗ್ರೆಸಿಗರನ್ನು ಕಿಚಾಯಿಸಿದರು.












Click it and Unblock the Notifications