ಉಪ ಚುನಾವಣೆ ಬಳಿಕ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ
ಉಡುಪಿ, ಅಕ್ಟೋಬರ್ 15: ಸಿಎಂ ಯಡಿಯೂರಪ್ಪನವರು ಭೀಷ್ಮಾಚಾರ್ಯ ಅವರಂತಾಗಿದ್ದಾರೆ. ಅವರಿಗೆ ಇಚ್ಛಾಮರಣ ಇತ್ತು, ಆದರೆ ಯಡಿಯೂರಪ್ಪ ಯಾವಾಗ ಬೇಕಾದರೂ ಅಧಿಕಾರದಿಂದ ಹೋಗಬಹುದು ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಹೇಳಿದರು.
ಬಿಜೆಪಿ ಪಕ್ಷದವರು ಸಿಎಂ ಯಡಿಯೂರಪ್ಪನವರನ್ನು ಶರಶಯ್ಯೆಯಲ್ಲಿ ಮಲಗಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಅವರು ಅಧಿಕಾರದಿಂದ ಇಳಿಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಭವಿಷ್ಯ ನುಡಿದಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಕೆ ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿಗೆ ಹೋಯಿತು? ಅದರಲ್ಲಿ ರಾಜ್ಯಕ್ಕೆ ಬಂದ ಪಾಲು ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹತ್ತು ಪೈಸೆ ಬೆಲೆ ಏರಿಕೆ ಆದರೂ, ಭಾಷಣ ಬಿಗಿಯುತ್ತಾ ಇದ್ದರು. ಆದರೆ ಅವರು ಘೋಷಿಸಿದ ಪ್ಯಾಕೇಜ್ ಹಾಸ್ಯಾಸ್ಪವಾಗಿದೆ. ಅವರಿಗೆ ಆಡಳಿತ ನಡೆಸುವ ನೈತಿಕತೆಯೇ ಇಲ್ಲ ಎಂದು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನೆ ವೇಳೆ ಭಾರೀ ಗೋಲ್ ಮಾಲ್ ಕಂಡುಬಂದಿದೆ ಎಂದ ಹರಿಪ್ರಸಾದ್, ಇದನ್ನು ಉದ್ದೇಶ ಪೂರ್ವಕವಾಗಿಯೇ ಬಿಜೆಪಿಯವರು ಮಾಡುತ್ತಿದ್ದಾರೆ. ಒಂದೇ ಮನೆಯ ಸದಸ್ಯರ ಹೆಸರುಗಳನ್ನು ಬೇರೆ ಬೇರೆ ಬೂತ್ ಗಳಲ್ಲಿ ಹಾಕಲಾಗಿದೆ ಎಂದು ಆರೋಪಿಸಿದರು.

ಉಡುಪಿ ಜಿಲ್ಲಾಡಳಿತದ ಸಹಕಾರದಿಂದಲೇ ಸರಕಾರ ಈ ಕೆಲಸ ಮಾಡಿದೆ. ಬಿಜೆಪಿ ಪಕ್ಷ ವಾಮಮಾರ್ಗದ ಮೂಲಕ ಗೆಲ್ಲಲು ಈ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿನ ಗೋಲ್ ಮಾಲ್ ಗಳನ್ನು ದಾಖಲೆ ಸಮೇತ ನೀಡುತ್ತೇನೆ ಎಂದರು.












Click it and Unblock the Notifications