ಗುಬ್ಬಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಗೆ ಯತ್ನ, ಬಿಜೆಪಿ ಕೆಂಡ
ತುಮಕೂರು, ಫೆಬ್ರವರಿ 20: ಮಂಗಳೂರು ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹಿಂದೂ ಹಾಗು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಂಥ ಕೃತ್ಯ ತುಮಕೂರು ಜಿಲ್ಲೆಗೂ ಕಾಲಿಟ್ಟಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ ಬಿ ಜ್ಯೋತಿ ಗಣೇಶ್ ಆರೋಪಿಸಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಬ್ಬಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಆರೆಸ್ಸೆಸ್ ಕಾರ್ಯಕರ್ತನ ಕೊಲೆಗೆ ಸಂಚು ನಡೆದಿದ್ದು, ಈ ಸಂಚಿನ ಹಿಂದೆ ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆ ಕೈವಾಡ ಇದೆ ಎಂದು ಅವರು ಆರೋಪ ಮಾಡಿದರು.
ಆರೆಸ್ಸೆಸ್ ಕಾರ್ಯಕರ್ತ ಸೋಮಣ್ಣ ಮಂಗಳವಾರ ಬೆಳಗ್ಗೆ ಪತ್ರಿಕೆ ವಿತರಣೆ ಮಾಡಲು ಹೋದ ಸಂದರ್ಭದಲ್ಲಿ ಮುಸುಕುಧಾರಿ ಆಗಂತುಕರು ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಸೋಮಣ್ಣ ತಪ್ಪಿಸಿಕೊಂಡು ಬಂದಿದ್ದಾರೆ. ಈ ಕೃತ್ಯದ ಹಿಂದೆ ಎಸ್ ಡಿಪಿಐ ಹಾಗೂ ಪಿಎಫ್ ಐ ಕೈವಾಡ ಇದೆ ಎಂದು ಆರೋಪಿಸಿದರು.

ಸೋಮಣ್ಣ ಆರೆಸ್ಸೆಸ್ ಸ್ವಯಂಸೇವಕ. ಹಿಂದೂವಾದಿ. ಕಳಂಕರಹಿತ ವ್ಯಕ್ತಿ. ನರೇಂದ್ರ ಮೋದಿ ಬಳಗ ಹುಟ್ಟು ಹಾಕಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಅಂತಹವರ ಮೇಲೆ ಕೊಲೆ ಯತ್ನ ನಡೆದಿರುವುದರ ಹಿಂದೆ ಕೋಮುವಾದಿಗಳ ಕೈವಾಡ ಇರುವ ಶಂಕೆ ಇದೆ ಎಂದರು.
ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಬೇಕು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಆರೆಸ್ಸೆಸ್ ತಾಲೂಕು ಅಧ್ಯಕ್ಷ ಅ.ನ.ಲಿಂಗಪ್ಪ, ವಕ್ತಾರ ಶಂಭುಲಿಂಗಸ್ವಾಮಿ ಇದ್ದರು.











Click it and Unblock the Notifications