ಜೂನ್ 6ರಂದು ಸಂಪುಟ ವಿಸ್ತರಣೆ, ಖಾತೆ ಹಂಚಿಕೆ: ಪರಮೇಶ್ವರ್
ತುಮಕೂರು, ಜೂನ್ 4 : ಇದೇ ತಿಂಗಳ 6ನೇ ತಾರೀಕು ಸಂಪುಟ ವಿಸ್ತರಣೆ ಆಗಲಿದೆ. ಅದೇ ದಿನ ಖಾತೆಗಳನ್ನು ಹಂಚಲಾಗುತ್ತದೆ. ಅಧಿಕಾರಿಗಳಿಂದ ಉತ್ತಮವಾದ ಕೆಲಸ ಮಾಡಿಸಿ, ಯಾವುದೇ ಲೋಪ ಇಲ್ಲದೇ ಆಡಳಿತ ನಡೆಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಇಲ್ಲಿ ಸೋಮವಾರ ಹೇಳಿದರು.
ಇಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನಾವು ಸಮ್ಮಿಶ್ರ ಸರಕಾರ ಮಾಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಸಮ್ಮಿಶ್ರ ಸರಕಾರಕ್ಕೆ ಅವಕಾಶ ಇದೆ. ಈ ಕುರಿತು ರಾಜ್ಯಪಾಲರಿಗೆ ಅನುಮತಿ ಕೋರಿದ್ದೆವು. ರಾಜ್ಯಪಾಲರು ದೊಡ್ಡ ಪಕ್ಷ ಎಂಬ ತರ್ಕದೊಂದಿಗೆ ಬಿಜೆಪಿಗೆ ಮೊದಲಿಗೆ ಅವಕಾಶ ನೀಡಿದರು. ನಾವು ಇದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದೆವು ಎಂದರು.
ಆ ಬಳಿಕ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಗ್ಗೆ ಎಲ್ಲರಿಗೂ ತಿಳಿದಿದೆ. ಬಿಜೆಪಿಯ ಯಡಿಯೂರಪ್ಪ ವಿಶ್ವಾಸ ಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದರು. ಆ ನಂತರ ನಾವು ಅಂದರೆ ಕಾಂಗ್ರೆಸ್ - ಜೆಡಿಎಸ್ ಸೇರಿ ವಿಶ್ವಾಸಮತ ಸಾಬೀತು ಮಾಡಿದ್ದೇವೆ. 5 ವರ್ಷ ಸುಭದ್ರವಾಗಿ ಸರಕಾರ ನಡೆಸುತ್ತೇವೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಗೊಬ್ಬರ, ಬೀಜ ವಿತರಣೆಗೆ ಕ್ರಮ
ಸರಿಯಾದ ಸಮಯಕ್ಕೆ ಮುಂಗಾರು ಮಳೆ ಬಂದಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ವಿತರಣೆಗೆ ನಾವು ಸೂಚನೆ ನೀಡಿದ್ದೇವೆ. ರೈತರಿಗೆ ಎಷ್ಟು ಪ್ರಮಾಣದಲ್ಲಿ ಅಗತ್ಯ ಇದೆ, ಅಷ್ಟೆಲ್ಲಾ ಪೂರೈಕೆಯಾಗುತ್ತಿದೆ. ಯಾವುದೇ ಲೋಪವಿಲ್ಲದೆ ರೈತರ ಸಹಾಯಕ್ಕೆ ಕೆಲಸ ಮಾಡುತ್ತೇವೆ ಎಂದರು.

ಪ್ರತಿ ಜಿಲ್ಲೆಗೆ ಸಚಿವರ ನೇಮಕ
ಪ್ರತಿ ಜಿಲ್ಲೆಗೆ ಸಚಿವರನ್ನು ನೇಮಕ ಮಾಡಲಾಗುತ್ತದೆ. ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಮೊದಲ ಉಪ ಮುಖ್ಯಮಂತ್ರಿ ಆಗಿ ಗೌರವ ಸಿಕ್ಕಿದೆ. ಈ ಅವಕಾಶವನ್ನು ವಿನಿಯೋಗ ಮಾಡಿ, ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇನ್ನೂ ಹೆಚ್ಚಿನ ಯೋಜನೆಗಳು, ಕಾರ್ಯಕ್ರಮಗಳನ್ನು ಜಿಲ್ಲೆಗೆ ತರುತ್ತೇನೆ ಎಂದು ಹೇಳಿದರು.

ಯಾರಿಗೆ ಸಚಿವ ಸ್ಥಾನ ಎಂಬುದು ಜೂನ್ 6ರಂದು ಗೊತ್ತಾಗಲಿದೆ
ಡಿ.ಕೆ.ಶಿವಕುಮಾರ್ ಪಕ್ಷದ ಪ್ರಾಮಾಣಿಕ ಶಿಸ್ತಿನ ಸಿಪಾಯಿ. ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ ಪಕ್ಷದಿಂದ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತಾರೆ. ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬುದು ಜೂನ್ 6ರಂದು ಗೊತ್ತಾಗಲಿದೆ. ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಲಾಗುತ್ತದೆ ಎಂದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ಒಟ್ಟಿಗೆ ಸ್ಪರ್ಧೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಒಟ್ಟಿಗೆ ಹೋಗುತ್ತೇವೆ. ಆದರೆ ಯಾರು ಎಷ್ಟು ಸೀಟುಗಳನ್ನು ಹಂಚಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಇನ್ನು ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿರುತ್ತಾರಾ ಎಂಬ ಸಂಗತಿ ನಮ್ಮ ಪಕ್ಷದ ಸಮಸ್ಯೆ, ಮಾಧ್ಯಮದವರ ಸಮಸ್ಯೆ ಅಲ್ಲ. ಈಗಾಗಲೇ ಅದರ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು.












Click it and Unblock the Notifications