ಅಧಿಕಾರ, ಹಣದ ಕಾರಣಕ್ಕೆ ಸಿದ್ದರಾಮಯ್ಯರಿಂದ ಇಂಥ ಮಾತು: ಎಚ್ ಡಿಡಿ
ತುಮಕೂರು, ಅಕ್ಟೋಬರ್ 4 : ಸಿದ್ದರಾಮಯ್ಯ ಅವರಿಗೆ ಅಧಿಕಾರ, ಹಣ ಇರುವುದರಿಂದ ಹಾಗೆ ಮಾತನಾಡುತ್ತಾರೆ. ಅವರಂತೆ ನಾನು ಅಹಂಕಾರದಿಂದ ಮಾತನಾಡಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದಲ್ಲಿ ಚಾಲನೆ ನೀಡಿದ ನಂತರ ಮಾತನಾಡಿದರು. "ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ" ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

"ಸಿದ್ದರಾಮಯ್ಯ ಅವರನ್ನು ಗುರುತಿಸಿ ಉಪ ಮುಖ್ಯಮಂತ್ರಿಯಾಗಿ ಮಾಡಿದೆ. ಅವರನ್ನು ಮೊದಲಿಗೆ ಗುರುತಿಸಿದ್ದು ಕಾಂಗ್ರೆಸ್ ಅಲ್ಲ. ಆ ನಂತರ ಕಾಂಗ್ರೆಸ್ ಗೆ ಸೆಳೆದರು. ಅದಕ್ಕೆ ಎಸ್ಸೆಂ ಕೃಷ್ಣ, ವಿಶ್ವನಾಥ್ ಕಾರಣ" ಎಂದರು.
ಇನ್ನು ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹ್ಮದ್ ಬಗ್ಗೆ ಕಿಡಿ ಕಾರಿದ ದೇವೇಗೌಡರು, ಕಾಂಗ್ರೆಸ್ ಅವನತಿಗಾಗಿ ಜಮೀರ್ ಅಹ್ಮದ್ ಆ ಪಕ್ಷಕ್ಕೆ ಹೋಗುತ್ತಿದ್ದಾರೆ. ಅವರಿಂದ ಕಾಂಗ್ರೆಸ್ ಪಕ್ಷ ಏನಾಗುತ್ತದೆ ಎಂದು ಜನರೇ ನಿರ್ಧಾರ ಮಾಡುತ್ತಾರೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸಾಧ್ಯತೆ ಬಗ್ಗೆ ಚರ್ಚೆ ಜಾರಿಯಲ್ಲಿರುವಾಗಲೇ ದೇವೇಗೌಡರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications