ಮರ್ಯಾದೆ ಇದ್ದರೆ ಜನತೆ ಕ್ಷಮೆ ಕೇಳಿ: ಸಿದ್ದು ವಿರುದ್ದ ಸೊಗಡು ಶಿವಣ್ಣ ವಾಗ್ದಾಳಿ
ತುಮಕೂರು, ಡಿಸೆಂಬರ್ 10: ಕರ್ನಾಟಕ ಮತದಾರರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ತೀರ್ಪು ಕೊಟ್ಟಿದ್ದಾರೆ, ದುರಹಂಕಾರಿ ಸಿದ್ದರಾಮಯ್ಯನನ್ನು ತಿರಸ್ಕರಿಸಿದ್ದಾರೆ. ಅವರಿಗೆ ಮರ್ಯಾದೆ ಇದ್ದರೆ ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ರಾಜ್ಯದ ಜನ ಗೃಹ ಬಂಧನದ ಶಿಕ್ಷೆ ಕೊಟ್ಟಿದ್ದಾರೆ, ಆದ್ದರಿಂದ ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜ್ಯದ ಜನರ ಕ್ಷಮೆ ಕೇಳಿ ಮನೆಯಲ್ಲಿರಬೇಕು ಎಂದು ಗುಡುಗಿದರು.
ಉಪ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯನವರು ಮಾತೆತ್ತಿದರೆ ಯಡಿಯೂರಪ್ಪ ಅವರನ್ನು ಟೀಕೆ ಮಾಡುತ್ತಿದ್ದರು, ಇವರೇ ಎನೂ ತಪ್ಪು ಮಾಡದ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿಸಿ ಜೈಲಿಗೆ ಹೋಗಿ ಬಂದವರು ಎಂದು ಪದೇ ಪದೇ ಹೋದಲೆಲ್ಲಾ ಹೇಳುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಇಷ್ಟೊತ್ತಗೆ ಕ್ಷಮೆ ಕೇಳಿರುತ್ತಿದ್ದರು. ಈಗಲಾದರೂ ಯಡಿಯೂರಪ್ಪ ಹಾಗೂ ಜನತೆಯ ಕ್ಷಮೆ ಕೇಳಿ ತಮ್ಮ ಗೌರವ ಹೆಚ್ಚಿಸಿಕೊಳ್ಳಲಿ, ಇನ್ನಾದರೂ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದನ್ನು ಕೈಬಿಡಲಿ ಎಂದು ಸಲಹೆ ಕೊಟ್ಟರು.
ಈ ಉಪ ಚುನಾವಣೆಯ ಫಲಿತಾಂಶದಲ್ಲಿ ಜನ ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ, ಇನ್ನು ಮೂರುವರೆ ವರ್ಷ ಗೃಹ ಬಂಧನದಲ್ಲಿ ಇರಿ ಎಂದು ತೀರ್ಪು ಕೊಟ್ಟಿದ್ದಾರೆ. ನಾನೇ ಧೀರ, ಶೂರ, ಕರ್ಣ ಎಂದು ದುರಹಂಕಾರಿಯಾಗಿದ್ದರು. ಜನ ತಕ್ಕ ಪಾಠವನ್ನು ಕಲಿಸಿದ್ದಾರೆ. ಉಪ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಜಯ ಗಳಿಸಿದೆ.












Click it and Unblock the Notifications