ಕಾಂಗ್ರೆಸ್ ನಾಯಕನ ಮೇಲೆ ಹಲ್ಲೆ: ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರುದ್ಧ ಎಫ್‌ಐಆರ್
ತುಮಕೂರು, ಮಾರ್ಚ್ 17: ಕಾಂಗ್ರೆಸ್ ನಾಯಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಟೆಂಡರ್ ಕಾಮಗಾರಿಯಲ್ಲಿನ ಅನ್ಯಾಯ ಖಂಡಿಸಿ ಹಲ್ಲೆಗೊಳಗಾದ ರವಿಕುಮಾರ್ ಪ್ರತಿಭಟನೆ ನಡೆಸುತ್ತಿದ್ದರು.
ಟೆಂಡರ್ ಕಾಮಗಾರಿಯಲ್ಲಿ ಅನ್ಯಾಯ ಖಂಡಿಸಿ, ಕಳೆದ ಗುರುವಾರ ರಾತ್ರಿ ಪಿಡಬ್ಲ್ಯುಡಿ ಇಲಾಖೆ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ, ಜಾಗತಿಕ ಲಿಂಗಾಯತ ವೇದಿಕೆ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಧರಣಿ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾ ನಿರತರಾಗಿದ್ದ ರವಿಕುಮಾರ್ ಮೇಲೆ ಶಾಸಕ ಎಸ್ ಆರ್ ಶ್ರೀನಿವಾಸ್ ಹಾಗೂ ಬೆಂಬಲಿಗರು ಏಕಾಏಕಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪವಿದೆ.

ಹಲ್ಲೆ ನಡೆದು 48 ಗಂಟೆಗಳ ಬಳಿಕ ಎಫ್‌ಐಆರ್!
ಎಸ್‌ಆರ್ ಶ್ರೀನಿವಾಸ್ ಅವರು ರಾಯಸಂದ್ರ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 48 ಗಂಟೆಗಳ ಬಳಿಕ ಎಫ್‌ಐಆರ್ ದಾಖಲಾಗಿದೆ. ಘಟನೆ ನಡೆದ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲೇ ಪೊಲೀಸರು ಹಲ್ಲೆಗೊಳಗಾದ ರವಿಕುಮಾರ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ ಪೊಲೀಸರು ಎಫ್‌ಐಆರ್ ಹಾಕಿರಲಿಲ್ಲ ಎಂಬ ವಿಷಯ ಸಕತ್ ಚರ್ಚೆಯಾಗಿತ್ತು.
ಬಳಿಕ ಘಟನೆ ನಡೆದು 48 ಗಂಟೆಗಳ ನಂತರ ಶಾಸಕ ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಟೆಂಡರ್ ಕರಾರು ಮಾಡಿಕೊಡದೇ ರದ್ದುಪಡಿಸಿದ್ದನ್ನು ಖಂಡಿಸಿ ಜಿಲ್ಲಾ ಪಂಚಾಯತ್ ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ ವಿರುದ್ಧ ರವಿಕುಮಾರ್ ಗುರುವಾರ ಪಿಡಬ್ಲ್ಯುಡಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದರು.
ತಡರಾತ್ರಿ ಸುಮಾರು 11.30 ಗಂಟೆಗೆ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಮತ್ತು ಸಹಚರರು ಪಿಡಬ್ಲ್ಯುಡಿ ಕಚೇರಿ ಆವರಣಕ್ಕೆ ನುಗ್ಗಿ ರಾಯಸಂದ್ರ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಸ್ಥಳವನ್ನು ಅಸ್ತವ್ಯಸ್ಥ ಮಾಡಿದ್ದಾರೆ.

ರಾಯಸಂದ್ರ ರವಿಕುಮಾರ್ ದೂರಿನ ಆಧಾರದ ಮೇಲೆ ಪೊಲೀಸರು ಎಸ್ ಆರ್ ಶ್ರೀನಿವಾಸ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 511, 506,504,143,149, 323,363 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಈ ಕುರಿತು ತಿಲಕ್ ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟೆಂಡರ್ ಏನು..?
ತುಮಕೂರು ಜಿಲ್ಲೆಯ ಗುಬ್ಬಿ, ತಿಪಟೂರು ತಾಲೂಕುಗಳ ಗಣಿಬಾಧಿತ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಲು ಕಳೆದ ಸೆಪ್ಟೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ರಾಯಸಂದ್ರ ರವಿಕುಮಾರ್ ಅವರಿಗೆ ಟೆಂಡರ್ ಆಗಿತ್ತು. ಕೊನೆಯ ಕ್ಷಣದಲ್ಲಿ ದಾಖಲೆ ಸಹಿತ ಟೆಂಡರ್ ಕರಾರು ಮಾಡಿಕೊಳ್ಳಲು ಹೋದಾಗ ನಿಮ್ಮ ಟೆಂಡರ್ ರದ್ದಾಗಿದೆ ಎಂದು ರಾಯಸಂದ್ರ ರವಿಕುಮಾರ್ ಅವರಿಗೆ ಹೇಳಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಅವರು ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ ವಿರುದ್ಧ ತಡರಾತ್ರಿಯಲ್ಲಿ ಪಿಡಬ್ಲ್ಯುಡಿ ಇಲಾಖೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದರು.












Click it and Unblock the Notifications