ಸಚಿವ ಜಯಚಂದ್ರ ಕೋಟ್ಯಂತರ ರುಪಾಯಿ ಮೇವು ಹಣ ಹೊಡೆದವ್ರೆ: ಮಾಜಿ ಸಚಿವ
ಮಾಜಿ ಸಚಿವ, ಜೆಡಿಎಸ್ ಮುಖಂಡ ಬಿ ಸತ್ಯನಾರಾಯಣ ಅವರು ಸಚಿವ ಜಯಚಂದ್ರ ವಿರುದ್ಧ ಮೂರು ಕೋಟಿ ರುಪಾಯಿ ಮೇವು ಹಗರಣದ ಆರೋಪ ಮಾಡಿದ್ದಾರೆ. ಶಿರಾದಲ್ಲಿ ತೆರೆದಿರುವ ಗೋ ಶಾಲೆಯಲ್ಲಿ ಈಗಲೂ ಕಳಪೆ ಮೇವು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ
ತುಮಕೂರು, ಫೆಬ್ರವರಿ 21: ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಸತ್ಯನಾರಾಯಣ ಮೇವು ಹಗರಣದ ಆರೋಪ ಮಾಡಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ಮೂರು ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ.
2011ರಿಂದ 2014-15ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಶಿರಾ ತಾಲೂಕಿನಲ್ಲಿ ಹನ್ನೊಂದು ಕಡೆ ಗೋಶಾಲೆ ತೆರೆಯಲಾಗಿತ್ತು. ಆಗ ಟಿ.ಬಿ.ಜಯಚಂದ್ರ ಪಶುಸಂಗೋಪನಾ ಸಚಿವರಾಗಿದ್ದರು. ಸಚಿವರ ಆಪ್ತ ಹಾಗೂ ಅಧಿಕಾರಿ ಜಿ.ಎಂ.ನಾಗರಾಜು ಎಂಬುವರ ಮೂಲಕ ಆಂಧ್ರ ಮೂಲದ ಸರಬರಾಜುದಾರರಿಗೆ ಟೆಂಡರ್ ಕೊಡಿಸಿದ್ದಾರೆ.[ಕಗ್ಗೆರೆ ತೋಂಟದ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಮಹಾರಥೋತ್ಸವ]

ಈ ಮೂರು ವರ್ಷದ ಅವಧಿಯಲ್ಲಿ ಮೂರು ಕೋಟಿ ರುಪಾಯಿಯಷ್ಟು ಅವ್ಯವಹಾರವಾಗಿದೆ, ಈಗಲೂ ಶಿರಾ ಭಾಗದಲ್ಲಿ ತೆರೆದಿರುವ ಗೋಶಾಲೆಗಳಲ್ಲಿ ಕಳಪೆ ಮೇವು ಸರಬರಾಜು ಆಗಿದೆ. ಜೊತೆಗೆ ಮೇವಿನ ತೂಕದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ. ಈ ವರೆಗಿನ ಎಲ್ಲ ಹಗರಣಗಳನ್ನು ಮೀರಿಸುವಂಥ ಹಗರಣ ಇದು ಎಂದು ಅವರು ಆರೋಪಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications