ಸಿಡ್ನಿ ಮಳಿಗೆಯಲ್ಲಿ ಕಳುವು ಮಾಡಿದ ಆರೋಪದಲ್ಲಿ ಪೈಲಟ್ ಸಸ್ಪೆಂಡ್
ಸಿಡ್ನಿ ವಿಮಾನ ನಿಲ್ದಾಣದ ಮಳಿಗೆಯೊಂದರಲ್ಲಿ ಶನಿವಾರ ಕಳುವು ಮಾಡಿದ್ದ ಆರೋಪದಲ್ಲಿ ಹಿರಿಯ ಪೈಲಟ್ ಅನ್ನು ಏರ್ ಇಂಡಿಯಾ ಭಾನುವಾರ ಅಮಾನತು ಮಾಡಿದೆ. ಮಾಧ್ಯಮಗಳಿಗೆ ದೊರೆತಿರುವ ಆದೇಶದ ಪ್ರತಿಯ ಪ್ರಕಾರ, ಜೂನ್ ಇಪ್ಪತ್ತೆರಡನೇ ತಾರೀಕು ಪೈಲಟ್ AI301ನ ಹಾರಾಟ ನಡೆಸಬೇಕಿತ್ತು. ಸುಂಕರಹಿತ ಮಳಿಗೆಯೊಂದರಲ್ಲಿ ವಸ್ತು ಕದ್ದ ಆರೋಪ ಆತನ ಮೇಲಿದೆ.
ರೋಹಿತ್ ಭಾಸಿನ್ ಕಳುವು ಆರೋಪ ಎದುರಿಸುತ್ತಿರುವ ಹಿರಿಯ ಪೈಲಟ್. ಈ ಘಟನೆ ಬಗ್ಗೆ ಏರ್ ಇಂಡಿಯಾದಿಂದ ವಿಚಾರಣೆ ನಡೆಸಲು ತೀರ್ಮಾನಿಸಿದ್ದು, ಕ್ಯಾಪ್ಟನ್ ಅನ್ನು ಅಮಾನತಿನಲ್ಲಿ ಇಡಲಾಗಿದೆ. ಏರ್ ಇಂಡಿಯಾದ ಅಧಿಕಾರಿಗಳ ಪ್ರಕಾರ, ಆಸ್ಟ್ರೇಲಿಯಾ ರೀಜನಲ್ ಮ್ಯಾನೇಜರ್ ಈ ಪ್ರಕರಣವನ್ನು ಮುಖ್ಯ ಕಚೇರಿಗೆ ಗಮನಕ್ಕೆ ತಂದರು. ಆ ನಂತರ ಪೈಲಟ್ ಗೆ ಹಾರಾಟಕ್ಕೆ ಅವಕಾಶ ನೀಡಿದರೂ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಮಾನತು ಮಾಡಲಾಗಿದೆ.

ಆತನ ಪರವಾನಗಿಯನ್ನು ಒಪ್ಪಿಸುವಂತೆ ಹಾಗೂ ಮುಖ್ಯ ನೆಲೆಯಾದ ಕೋಲ್ಕತ್ತಾವನ್ನು ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.












Click it and Unblock the Notifications