WTC Final: ಕೆಎಲ್ ರಾಹುಲ್‌ಗೆ ಬದಲೀ ಆಟಗಾರ ಆಯ್ಕೆ: ಬಿಸಿಸಿಐ ಅಚ್ಚರಿಯ ನಿರ್ಧಾರ!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯಗೊಂಡಿದ್ದು ತಂಡದಿಂದ ಹೊರಗುಳಿದಿದ್ದಾರೆ. ರಾಹುಲ್ ಬದಲಾಗಿ ಬಿಸಿಸಿಐ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2023 ರ 43 ನೇ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ತಮ್ಮ ಬಲ ತೊಡೆಯ ಮೇಲೆ ಗಾಯಗೊಂಡರು. ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ, ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದು ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗಲು ನಿರ್ಧರಿಸಿದ್ದಾರೆ.

ಕೆಎಲ್ ರಾಹುಲ್ ಬದಲಾಗಿ ವೃದ್ಧಿಮಾನ್ ಸಾಹಾ ಅಥವಾ ಹನುಮ ವಿಹಾರಿಯನ್ನು ಆಯ್ಕೆ ಮಾಡಲಾಗುತ್ತಾರೆ ಎನ್ನಲಾಗಿತ್ತು, ಆದರೆ ಬಿಸಿಸಿಐ ಆಯ್ಕೆದಾರರು ಯುವ ವಿಕೆಟ್ ಕೀಪರ್ ಮೇಲೆ ನಂಬಿಕೆ ತೋರಿದ್ದಾರೆ. ಮತ್ತೊಂದೆಡೆ ವೇಗಿ ಜಯದೇವ್ ಉನಾದ್ಕತ್ ಕೂಡ ಭುಜದ ಗಾಯಗೊಂಡಿದ್ದು, ಎನ್‌ಸಿಎನಲ್ಲಿ ಪುನರ್ವಸತಿಯಲ್ಲಿದ್ದಾರೆ. ಬಿಸಿಸಿಐ ಅವರ ವಿಚಾರದಲ್ಲಿ ಕಾದು ನೋಡಲು ಮುಂದಾಗಿದೆ. ಕೊನೆಯ ಹಂತದಲ್ಲಿ ಅವರು ಫಿಟ್ ಆಗದಿದ್ದರೆ ಬದಲೀ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಇಶಾನ್ ಕಿಶನ್ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು, ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಜೂನ್ 7ರಿಂದ 11ರವರೆಗೆ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೆಣೆಸಲಿವೆ. ಆಸ್ಟ್ರೇಲಿಯಾದ ಬಹುತೇಕ ಆಟಗಾರರು ಈಗಾಗಲೇ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.
ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ ತಂಡಕ್ಕೆ ವಾಪಸಾಗಿದ್ದರು, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಫೈನಲ್‌ಗಾಗಿ ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಭಾರತ ಕ್ರಿಕೆಟ್ ತಂಡಕ್ಕೆ ಮೂವರು ಅಧಿಕೃತ ಸ್ಟ್ಯಾಂಡ್‌ಬೈ ಆಟಗಾರರಾಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯ್‌ಶಿಪ್ ಫೈನಲ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಸ್ಟ್ಯಾಂಡ್‌ಬೈ ಆಟಗಾರರು: ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್.












Click it and Unblock the Notifications