RCB: ವಿರಾಟ್ ಕೊಹ್ಲಿ ಶಿಷ್ಯನಿಗೆ ಆರ್‌ಸಿಬಿ ನಾಯಕತ್ವ?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಿರುವ ಆರ್ ಸಿಬಿ ಮೊದಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಕೆಎಲ್ ರಾಹುಲ್, ರಿಷಬ್ ಪಂತ್ ಇಬ್ಬರಲ್ಲಿ ಒಬ್ಬರನ್ನು ಆರ್ ಸಿಬಿ ಖರೀದಿ ಮಾಡಲಿದ್ದು ನಾಯಕರಾಗಲಿದ್ದಾರೆ ಎಂದು ಮೆಗಾ ಹರಾಜಿಗೆ ಮೊದಲು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಆರ್ ಸಿಬಿ ಅಭಿಮಾನಿಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿತ್ತು. ಆಲ್‌ರೌಂಡರ್, ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದ್ದು, ಈಗ ನಾಯಕ ಯಾರು ಎನ್ನುವ ಪ್ರಶ್ನೆ ಆರಂಭವಾಗಿದೆ.
ಐಪಿಎಲ್ ಆರಂಭದಿಂದಲೂ ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಯಿದ್ದಾರೆ. ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸಲು ನಾಯಕತ್ವ ಬಿಟ್ಟುಕೊಟ್ಟಿದ್ದರು. 2025ರ ಐಪಿಎಲ್‌ನಲ್ಲಿ ಮತ್ತೆ ವಿರಾಟ್ ಕೊಹ್ಲಿ ಅವರೇ ನಾಯಕತ್ವ ವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಫ್ರಾಂಚೈಸಿಗೆ ಕೂಡ ಮೊದಲ ಆಯ್ಕೆ ವಿರಾಟ್ ಕೊಹ್ಲಿಯೇ ಆಗಿದ್ದಾರೆ. ಆದರೆ ಕೊಹ್ಲಿ ನಾಯಕತ್ವದ ಹೊರೆ ಬೇಡ ಎಂದರೆ ಮಾತ್ರ ಉಳಿದ ಆಟಗಾರರ ಕಡೆ ನೋಡಬೇಕಾಗುತ್ತದೆ. ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಆರ್ ಸಿಬಿಯಲ್ಲಿ ನಾಯಕರಾಗುವ ಕ್ಷಮತೆ ಯಾರಿಗಿದೆ ಎಂದು ನೋಡಿದರೆ ಹಲವು ಹೆಸರುಗಳಿವೆ. ಆದರೆ ಅದರಲ್ಲಿ ಮೊದಲು ಬರುವುದು ರಜತ್ ಪಟಿದಾರ್.
ನಾಯಕನಾಗಿ ಯಶಸ್ಸು ಕಂಡ ಪಟಿದಾರ್
ಇತ್ತೀಚೆಗೆ ಮುಕ್ತಾಯವಾದ ಸೈಯದ್ ಮುಷ್ತಾಕ್ ಅಲಿ ಟ್ರೊಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕತ್ವ ವಹಿಸಿಕೊಂಡಿದ್ದ ರಜತ್ ಪಟಿದಾರ್ ಭರ್ಜರಿ ಯಶಸ್ಸು ಕಂಡಿದ್ದಾರೆ. ನಾಯಕತ್ವ ಜವಾಬ್ದಾರಿ ನಿಭಾಯಿಸುವ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ.
ಪಂದ್ಯಾವಳಿಯಲ್ಲಿ 10 ಪಂದ್ಯಗಳನ್ನಾಡಿದ ರಜತ್ ಪಟಿದಾರ್ 9 ಇನ್ನಿಂಗ್ಸ್‌ಗಳಿಂದ 61.14 ಸರಾಸರಿಯಲ್ಲಿ ಬರೋಬ್ಬರಿ 428 ರನ್ ಕಲೆಹಾಕಿದ್ದಾರೆ. 186.04 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದು, 32 ಬೌಂಡರಿ, 31 ಭರ್ಜರಿ ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ. 5 ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ತಮ್ಮ ತಂಡವನ್ನು ಫೈನಲ್‌ಗೆ ಮುನ್ನಡೆಸಿದ ಪಟಿದಾರ್, ಫೈನಲ್ ಪಂದ್ಯದಲ್ಲೂ 40 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದ್ದರು. ಪಟಿದಾರ್ ಏಕಾಂಗಿ ಹೋರಾಟದ ಹೊರತಾಗಿಯೂ ಮುಂಬೈ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮೊದಲ ಬಾರಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ಪಟಿದಾರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯ 10 ಪಂದ್ಯಗಳಲ್ಲಿ ಮಧ್ಯ ಪ್ರದೇಶ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ನಾಯಕ ರಜತ್ ಪಟಿದಾರ್ ಪಾತ್ರ ಮುಖ್ಯವಾಗಿದೆ. ತನ್ನಲ್ಲೂ ಉತ್ತಮ ನಾಯಕತ್ವ ಗುಣವಿದೆ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಐಪಿಎಲ್‌ಗೆ ಹೋಲಿಕೆ ಮಾಡಲು ಆಗದು ಎನ್ನುವುದು ನಿಜ. ಅಲ್ಲಿನ ಒತ್ತಡಕ್ಕೂ ಇಲ್ಲಿನ ಒತ್ತಡಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಆದರೆ ವಿರಾಟ್ ಕೊಹ್ಲಿ ಪಟಿದಾರ್ ನಾಯಕತ್ವಕ್ಕೆ ಬೆಂಬಲ ಕೊಟ್ಟರೆ ಅವರ ಕೆಲಸ ಮತ್ತಷ್ಟು ಸುಲಭವಾಗಬಹುದು.












Click it and Unblock the Notifications