Vinesh Phogat: ಒಲಿಂಪಿಕ್ಸ್‌ನಿಂದ ಅನರ್ಹ; ವಿನೇಶ್ ಫೋಗಟ್ ಮೊದಲ ಪ್ರತಿಕ್ರಿಯೆ
ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್, ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಾಗಿದ್ದಾರೆ ಎನ್ನುವ ಕಾರಣಕ್ಕೆ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಪದಕವೊಂದು ಕೈತಪ್ಪಿದೆ. ಡಿಹೈಡ್ರೇಷನ್‌ನಿಂದ ಆಸ್ಪತ್ರೆ ಸೇರಿದ್ದ ವಿನೇಶ್ ಫೋಗಟ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ತಾವು ಅನರ್ಹಗೊಂಡ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು 'ಇದು ಆಟದ ಭಾಗವಾಗಿದೆ' ಎಂದು ಹೇಳಿದ್ದಾರೆ. ಮಹಿಳಾ ರಾಷ್ಟ್ರೀಯ ಕೋಚ್ ವೀರೇಂದ್ರ ದಹಿಯಾ ಮತ್ತು ಮಂಜೀತ್ ರಾಣಿ ಚಿಕಿತ್ಸೆ ಪಡೆಯುತ್ತಿದ್ದ ವಿನೇಶ್ ಫೋಗಟ್‌ರನ್ನು ಭೇಟಿಯಾದ ಬಳಿಕ ಈ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಆರಂಭಿಕ ಸುತ್ತಿನಲ್ಲಿ ವಿಶ್ವದ ನಂಬರ್ ಒನ್ ಮತ್ತು ಹಾಲಿ ಚಾಂಪಿಯನ್ ಯುಯಿ ಸುಸಾಕಿಯನ್ನು ಸೋಲಿಸುವ ಮೂಲಕ ಕುಸ್ತಿ ಅಖಾಡದಲ್ಲಿ ಸಂಚಲನ ಮೂಡಿಸಿದ್ದರು. ಕ್ವಾರ್ಟರ್ ಫೈನಲ್, ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದ್ದರು. ಭಾರತಕ್ಕೆ ಅದಾಗಲೇ ಬೆಳ್ಳಿ ಪದಕ ಖಚಿತವಾಗಿತ್ತು, ಅದರೆ ವಿನೇಶ್ ಚಿನ್ನದ ಪದಕ ಗೆದ್ದು ಬರಲಿ ಎಂದು ಕೋಟ್ಯಂತರ ಭಾರತೀಯರು ಹಾರೈಸಿದ್ದರು.
ಬುಧವಾರ ಬೆಳಗ್ಗೆ ವಿನೇಶ್ ಫೋಗಟ್‌ರ ತೂಕವನ್ನು ಪರಿಶೀಲನೆ ಮಾಡಿದ ಬಳಿಕ ಅವರನ್ನು ಅನರ್ಹ ಎಂದು ಘೋಷಣೆ ಮಾಡಲಾಯಿತು. ಇದು ಭಾರತೀಯ ಕ್ರೀಡಾಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಒಲಿಂಪಿಕ್ಸ್ ಆಡಳಿತ ಮಂಡಳಿ ವಿರುದ್ದ ಭಾರಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕೋಚ್ ಹೇಳಿದ್ದೇನು?
ವಿನೇಶ್ ಫೋಗಟ್‌ರನ್ನು ಭೇಟಿಯಾದ ಬಳಿಕ ಮಾತನಾಡಿದ ಮಹಿಳಾ ರಾಷ್ಟ್ರೀಯ ಕೋಚ್ ವೀರೇಂದ್ರ ದಹಿಯಾ ಮತ್ತು ಮಂಜೀತ್ ರಾಣಿ, ನಾವು ಆಕೆಯನ್ನು ಸಮಾಧಾನ ಮಾಡಲು ಯತ್ನಿಸಿದೆವು. ಆದರೆ ಆಕೆ ಧೈರ್ಯಶಾಲಿ, ನಾವು ಪದಕ ಕಳೆದುಕೊಂಡಿರುವುದು ಒಪ್ಪಿಕೊಳ್ಳುವುದು ಕಷ್ಟ ಆದರೆ ಇದು ಆಟದ ಭಾಗವಾಗಿದೆ ಎಂದು ಹೇಳಿರುವುದಾಗಿ ತಿಳಿಸಿದರು.












Click it and Unblock the Notifications