KKR vs SRH: ಸನ್‌ರೈಸರ್ಸ್ ಹೈದರಾಬಾದ್ ಅಬ್ಬರಕ್ಕೆ ಶರಣಾದ ಹಾಲಿ ಚಾಂಪಿಯನ್ ಕೆಕೆಆರ್
ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದ್ದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2025ರ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಸನ್‌ರೈಸರ್ಸ್ ಹೈದರಾಬಾದ್ 110 ರನ್‌ಗಳ ಭಾರಿ ಗೆಲುವು ಸಾಧಿಸಿದೆ. ದಾಖಲೆಯ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಅಭಿಯಾನವನ್ನು ಮುಗಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್ ಗಳು 20 ಓವರ್ ಗಳಲ್ಲಿ 278 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು.

ಹೆನ್ರಿಕ್ ಕ್ಲಾಸೆನ್ ದಾಖಲೆಯ ಶತಕ
ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 32 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ 76 ರನ್ ಗಳಿಸಿದರು. ಹೆನ್ರಿಕ್ ಕ್ಲಾಸೆನ್ ಅಕ್ಷರಶಃ ಅಬ್ಬರಿಸಿದರು. 37 ಎಸೆತಗಳಲ್ಲಿ 7 ಬೌಂಡರಿ 9 ಅಮೋಘ ಸಿಕ್ಸರ್ ಸಹಿತ ಅಜೇಯ 105 ರನ್ ಗಳಿಸಿದ ಅವರು ಸನ್‌ರೈಸರ್ಸ್ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಇಶಾನ್ ಕಿಶನ್ 20 ಎಸೆತಗಳಲ್ಲಿ 29 ರನ್ ಗಳಿಸಿದರೆ, ಅನಿಕೇತ್ ವರ್ಮಾ 6 ಎಸೆತಗಳಲ್ಲಿ 12 ರನ್ ಗಳಿಸಿದರು.
ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 278 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಮೂರನೇ ಅತ್ಯಧಿಕ ಮೊತ್ತವಾಗಿದೆ. 287 ಮತ್ತು 286 ರನ್‌ಗಳನ್ನು ಕೂಡ ಸನ್‌ರೈಸರ್ಸ್ ಹೈದರಾಬಾದ್ ಗಳಿಸಿ ದಾಖಲೆ ಮಾಡಿತ್ತು. ಕ್ಲಾಸೆನ್ 37 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಪರ ವೇಗದ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಇದು ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕವಾಗಿದೆ.
ಶರಣಾದ ಕೆಕೆಆರ್
279 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 18.4 ಓವರ್ ಗಳಲ್ಲಿ 168 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿತು. ಸುನಿಲ್ ನರೈನ್ 31 ರನ್, ಮನೀಶ್ ಪಾಂಡೆ 37 ರನ್ ಗಳಿಸಿದರೆ ಹರ್ಷಿತ್ ರಾಣಾ 34 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಜಯದೇವ್ ಉನದ್ಕತ್ 4 ಓವರ್ ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರೆ, ಇಶಾನ್ ಮಲಿಂಗ ಮತ್ತು ಹರ್ಷ್ ದುಬೆ ಕೂಡ ತಲಾ 3 ವಿಕೆಟ್ ಪಡೆದರು.












Click it and Unblock the Notifications