ರಾಬಿನ್ ಉತ್ತಪ್ಪರನ್ನು ಔಟ್ ಮಾಡಿದ ಶಿವಣ್ಣ: ಇವರನ್ನಾದ್ರೂ ಆರ್‌ಸಿಬಿಗೆ ತಗೊಳಿ ಎಂದ ಫ್ಯಾನ್ಸ್
ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಶಿವರಾಜ್ ಕುಮಾರ್ ರಾಬಿನ್ ಉತ್ತಪ್ಪ ಅವರನ್ನು ಔಟ್ ಮಾಡಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಉತ್ತಪ್ಪ ಅವರನ್ನು ಔಟ್ ಮಾಡುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಶಿವಣ್ಣರನ್ನು ಎತ್ತುವ ಮೂಲಕ ಸಂಭ್ರಮಿಸಿದರು.
ಮೂರು ದಿನಗಳ ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿಗೆ ತೆರೆ ಬಿದ್ದಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಈ ಬಾರಿ ಕಪ್ ಗೆದ್ದಿದೆ. ಈ ಪಂದ್ಯಾವಳಿಯಲ್ಲಿ ಜನಪ್ರಿಯ ನಟರು, ತಂತ್ರಜ್ಞರ ಜೊತೆ ಸ್ಟಾರ್ ಕ್ರಿಕೆಟಿಗರು ಕೂಡ ಆಡಿದ್ದಾರೆ.
ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಷಾನ್, ವಿಜಯ್, ಎಸ್ ಬದ್ರಿನಾಥ್ ಕೂಡ ಸಿನಿಮಾ ತಾರೆಯರ ಜೊತೆ ಆಡಿದ್ದು ಕ್ರಿಕೆಟ್‌ಗೆ ರೋಚಕತೆ ತಂದುಕೊಟ್ಟಿತ್ತು. ಶಿವರಾಜ್ ಕುಮಾರ್, ಗಣೇಶ್ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದರು.

ರನ್ನರ್ ಅಪ್ ತಂಡವಾದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಕ್ಕೆ ಶಿವಣ್ಣ ನಾಯಕತ್ವ ವಹಿಸಿಕೊಂಡಿದ್ದರು. ಸುರೇಶ್ ರೈನಾ ಕೂಡ ಈ ತಂಡದಲ್ಲಿದ್ದರು. ಇದೀಗ ಶಿವರಾಜ್ ಕುಮಾರ್ ಬೌಲಿಂಗ್‌ನಲ್ಲಿ ರಾಬಿನ್ ಉತ್ತಪ್ಪ ಔಟಾಗಿದ್ದು ವಿಡಿಯೋ ಸಕತ್ ವೈರಲ್ ಆಗಿದೆ.
ಆರ್‌ಸಿಬಿಗೆ ತಗೊಳ್ಳಿ ಎಂದ ಫ್ಯಾನ್ಸ್
ಶಿವರಾಜ್ ಕುಮಾರ್ ಇದ್ದಾರೆ ಅಂದ್ರೆ ಅಲ್ಲಿ ಯಾವಾಗ್ಲೂ ಹೆಚ್ಚಿನ ಜೋಶ್, ಎನರ್ಜಿ ಇರುತ್ತೆ. ವಯಸ್ಸು 61 ಆದರೂ ಅವರು ಮೈದಾನದಲ್ಲಿ ಬೌಲಿಂಗ್ ಮಾಡಿದರು, ಫೀಲ್ಡಿಂಗ್ ಮಾಡಿದರು, ಮೈದಾನದಲ್ಲೇ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ಇನ್ನು ಕದಂಬ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಶಿವರಾಜ್‌ಕುಮಾರ್ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ವಿಕೆಟ್ ಪಡೆದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅವರು ಸಂಭ್ರಮಿಸಿದ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಶಿವಣ್ಣ ಅವರ ಬೌಲಿಂಗ್ ನೋಡಿದ ಅಭಿಮಾನಿಗಳು ಶಿವಣ್ಣರನ್ನಾದ್ರೂ ಆರ್ ಸಿಬಿ ತಂಡಕ್ಕೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ. 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆರ್ ಸಿಬಿ ಯಶ್ ದಯಾಳ್, ಅಲ್ಜಾರಿ ಜೋಸೆಫ್‌ರಂತಹ ಬೌಲರ್ ಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ, ಆದರೂ ಅಭಿಮಾನಿಗಳು ಆರ್ ಸಿಬಿ ಬೌಲಿಂಗ್ ಬಗ್ಗೆ ಆತಂಕದಲ್ಲಿದ್ದಾರೆ.
ಇನ್ನೂ ಒಳ್ಳೆಯ ಬೌಲರ್ ಗಳನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಪಟ್ಟಿದ್ದರು. ಈಗ ಶಿವಣ್ಣ ಬೌಲಿಂಗ್ ನೋಡಿದ ಅಭಿಮಾನಿಗಳು ಇವರನ್ನಾದ್ರೂ ತಂಡಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ.
ಇದಕ್ಕೂ ಮುನ್ನ ರಾಬಿನ್ ಉತ್ತಪ್ಪ ಅವರನ್ನು ಮೈದಾನದಲ್ಲೇ ಅಭಿಮಾನಿಗಳು ಆರ್ ಸಿಬಿಗೆ ಬನ್ನಿ ಎಂದಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಬಿನ್ ಉತ್ತಪ್ಪ ಅವರು ಕರ್ನಾಟಕ ಆಟಗಾರರನ್ನು ತೆಗೆದುಕೊಳ್ಳಲ್ಲ ಎಂದು ಹೇಳಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.












Click it and Unblock the Notifications