RCB vs KKR: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅಬ್ಬರಕ್ಕೆ ಶರಣಾದ ಕೆಕೆಆರ್: ಆರ್‌ಸಿಬಿಗೆ 7 ವಿಕೆಟ್‌ಗಳ ಭರ್ಜರಿ ಗೆಲುವು
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 18ನೇ ಆವೃತ್ತಿಯಲ್ಲಿ ಆರ್ ಸಿಬಿ ಗೆಲುವಿನ ಶುಭಾರಂಭ ಮಾಡಿದೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು. ಮೊದಲ ಓವರ್ ನಲ್ಲೇ ಜೋಶ್ ಹೇಜಲ್‌ವುಡ್ ಕ್ವಿಂಟನ್ ಡಿ ಕಾಕ್‌ರನ್ನು ಔಟ್ ಮಾಡುವ ಮೂಲಕ ಆರ್ ಸಿಬಿಗೆ ಉತ್ತಮ ಆರಂಭ ಒದಗಿಸಿದರು. ಆದರೆ ನಾಯಕ ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೇನ್ ಅಬ್ಬರದ ಬ್ಯಾಟಿಂಗ್ ಮೂಲಕ ಕೆಕೆಆರ್ ತಂಡಕ್ಕೆ ಅಸರೆಯಾದರು.

ನಾಯಕ ಅಜಿಂಕ್ಯ ರಹಾನೆ 31 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಹಿತ 56 ರನ್ ಗಳಿಸಿದರು. ಸುನಿಲ್ ನರೇನ್ ಕೂಡ 26 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 44 ರನ್ ಗಳಿಸಿದರು. ಆದರೆ ಇವರಿಬ್ಬರನ್ನು ಔಟ್ ಮಾಡಿದ ಬಳಿಕ ಆರ್ ಸಿಬಿ ಸಂಪೂರ್ಣ ಮೇಲುಗೈ ಸಾಧಿಸಿತು. ಕೃನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ರಸಿಕ್ ದಾರ್ ಮತ್ತು ಸುಯಶ್ ಶರ್ಮಾ ಸತತವಾಗಿ ವಿಕೆಟ್ ಪಡೆದು ರನ್ ಗಳಿಕೆಗೆ ಕಡಿವಾಣ ಹಾಕಿದರು.
ಮೊದಲ 10.3 ಓವರ್ ನಲ್ಲಿ 109 ರನ್ ಗಳಿಸಿದ್ದ ಕೆಕೆಆರ್ ಬಳಿಕ 9.3 ಓವರ್ ನಲ್ಲಿ ಕೇವಲ 65 ರನ್ ಮಾತ್ರ ಗಳಿಸಿತು. ಇದು ಕೆಕೆಆರ್ ಗೆ ದೊಡ್ಡ ಹಿನ್ನಡೆಯಾಯಿತು. ವೆಂಕಟೇಶ್ ಅಯ್ಯರ್ 6 ರನ್ ಮಾತ್ರ ಗಳಿಸಿ ಔಟಾದರೆ, ಆಂಗ್ಕ್ರಿಶ್ ರಘುವಂಶಿ 22 ಎಸೆತಗಳಲ್ಲಿ 30 ರನ್ ಗಳಿಸಿದರು. ರಿಂಕು ಸಿಂಗ್ 12 ರನ್ ಗಳಿಸಿದರೆ, ರಸೆಲ್ ಕೇವಲ 4 ರನ್ ಗಳಿಸಿ ಔಟಾದರು. ಹರ್ಷಿತ್ ರಾಣಾ 5 ರನ್ ಗಳಿಸಿದರು.
ಕೃನಾಲ್ ಪಾಂಡ್ಯ 4 ಓವರ್ ಗಳಲ್ಲಿ 29 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಜೋಶ್ ಹೇಜಲ್‌ವುಡ್ 4 ಓವರ್ ಗಳಲ್ಲಿ ಕೇವಲ 22 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಯಶ್ ದಯಾಳ್, ರಸಿಕ್ ಸಲಾಂ ದಾರ್ ಮತ್ತು ಸುಯಶ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಅಬ್ಬರಿಸಿದ ಕೊಹ್ಲಿ, ಸಾಲ್ಟ್
175 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಸ್ಫೋಟಕ ಆರಂಭ ಪಡೆಯಿತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಕೆಕೆಆರ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಕಳೆದ ವರ್ಷ ಕೆಕೆಆರ್ ತಂಡಕ್ಕೆ ಆಡಿದ್ದ ಫಿಲ್ ಸಾಲ್ಟ್ ಈ ಬಾರಿ ಆರ್ ಸಿಬಿಗಾಗಿ ಆಡುತ್ತಿದ್ದು ಮಾಜಿ ತಂಡದ ವಿರುದ್ಧ ಅಬ್ಬರಿಸಿದರು. ಅದರಲ್ಲೂ ವರುಣ್ ಚಕ್ರವರ್ತಿಗೆ ಒಂದೇ ಓವರ್ ನಲ್ಲಿ 21 ರನ್ ಬಾರಿಸಿದರು. ಕೊನೆಗೆ 31 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 56 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 10 ರನ್ ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ಕೂಡ ಮೊದಲ ಪಂದ್ಯದಲ್ಲೇ ಅರ್ಧಶತಕ ಗಳಿಸುವ ಮೂಲಕ ಮಿಂಚಿದರು. 36 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 59 ರನ್ ಗಳಿಸಿದರು. ನಾಯಕ ರಜತ್ ಪಟಿದಾರ್ 16 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 34 ರನ್ ಗಳಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ 5 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದರು. 16.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.












Click it and Unblock the Notifications