RCB vs LSG: ಚನ್ನಾಗಿ ಆಡಿದ್ರೂ ಅವಕಾಶ ಕೊಡಲ್ವಾ? ಕನ್ನಡಿಗನ ಕೈಬಿಟ್ಟ ಆರ್‌ಸಿಬಿ ವಿರುದ್ಧ ಆಕ್ರೋಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್‌ಮೆಂಟ್ ಪದೇ ಪದೇ ಅಭಿಮಾನಿಗಳ ಕೋಪಕ್ಕೆ ತುತ್ತಾಗುತ್ತಿದೆ. ಕಳೆದ ಮೂರು ಪಂದ್ಯಗಳಲ್ಲಿ ತಂಡದಲ್ಲಿ ಬದಲಾವಣೆ ಮಾಡದೆ ಬೆಲೆ ತೆತ್ತಿದ್ದ ಆರ್‌ಸಿಬಿ ಈಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಚಿನ್ನಸ್ವಾಮಿಯಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಆಯ್ಕೆ ಮಾಡಿಕೊಂಡ ಆರ್‌ಸಿಬಿ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ ಅವರನ್ನೇ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿದೆ.

ಆರ್ ಸಿಬಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ಪಡೆಯಲು ವಿಫಲವಾಗಿದ್ದ ವೈಶಾಖ್ ವಿಜಯ್ ಕುಮಾರ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವಕಾಶ ಪಡೆದರೂ ಅತ್ಯುತ್ತಮ ಪ್ರದರ್ಶನ ನೀಡಿದರು.
4 ಓವರ್ ಗಳಲ್ಲಿ ಕೇವಲ 23 ರನ್ ಬಿಟ್ಟುಕೊಟ್ಟಿದ್ದ ಅವರು ಒಂದು ವಿಕೆಟ್ ಕೂಡ ಪಡೆದುಕೊಂಡಿದ್ದರು. ನಿಧಾನಗತಿಯ ಎಸೆತಗಳನ್ನು ಪರಿಣಾಮಕಾರಿಯಾಗಿ ಎಸೆಯುತ್ತಿದ್ದ ಅವರು, ಕೆಕೆಆರ್ ಬಲಿಷ್ಠ ಬ್ಯಾಟರ್ ಗಳನ್ನೇ ಕಟ್ಟಿಹಾಕಿದ್ದರು. ಅವರ ಪ್ರದರ್ಶನ ನೋಡಿದ್ದ ಅಭಿಮಾನಿಗಳು ಕೂಡ ಮುಂದಿನ ಪಂದ್ಯದಲ್ಲಿ ವೈಶಾಖ್ ಕಣಕ್ಕಿಳಿಯುವುದು ಪಕ್ಕಾ ಎಂದುಕೊಂಡಿದ್ದರು.
ಅಭಿಮಾನಿಗಳಿಗೆ ಶಾಕ್!
ಆದರೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಟಾಸ್ ಗೆದ್ದ ಬಳಿಕ ಆಡುವ ಬಳಗದಲ್ಲಿ ವೈಶಾಖ್ ಹೆಸರೇ ಕಾಣೆಯಾಗಿತ್ತು, ಅವರ ಹೆಸರು ಇಂಪ್ಯಾಕ್ಟ್ ಪ್ಲೇಯರ್ಸ್ ಪಟ್ಟಿಯಲ್ಲಿದ್ದರೂ, ಅವರು ಅವಕಾಶ ಪಡೆಯಲ್ಲ ಎನ್ನುವುದು ಗೊತ್ತಾಗಿತ್ತು. ಆರ್ ಸಿಬಿ ಮ್ಯಾನೇಜ್‌ಮೆಂಟ್ ಯೋಚನಾ ಲಹರಿ ಕಂಡು ಅಭಿಮಾನಿಗಳೇ ತಲೆ ಚಚ್ಚಿಕೊಂಡಿದ್ದಾರೆ.
Vyshak despite being the best bowler in the last game doesn’t start in the playing XI, and the fact that RCB is bowling first it’s highly unlikely he’ll get to bowl as an IP. Crazy stuff from the RCB think tank 🤷♂️ #IPL2024
— Dodda Ganesh | ದೊಡ್ಡ ಗಣೇಶ್ (Modi Ka Parivar) (@doddaganesha) April 2, 2024
ದೊಡ್ಡ ಗಣೇಶ್ ಬೇಸರ
ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ವೈಶಾಖ್ ವಿಜಯ್ ಕುಮಾರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. "ಕೊನೆಯ ಪಂದ್ಯದಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಮೊದಲು ಬೌಲಿಂಗ್ ಮಾಡುತ್ತಿರುವ ಕಾರಣ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವುದು ಅಸಾಧ್ಯ, ಆರ್ ಸಿಬಿ ಥಿಂಕ್ ಟ್ಯಾಂಕ್‌ನಿಂದ ಇದು ಮೂರ್ಖತನದ ನಿರ್ಧಾರ" ಎಂದು ಎಕ್ಸ್ ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಕೂಡ ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಚನ್ನಾಗಿ ಆಡಿದವರನ್ನೇ ಬೆಂಚ್‌ನಲ್ಲಿ ಕೂರಿಸ್ತಿರಾ, ಹಿಂಗಾದ್ರೆ ಕಪ್ ಅಲ್ಲ ನೀವು ಮ್ಯಾಚ್ ಕೂಡ ಗೆಲ್ಲಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.












Click it and Unblock the Notifications