RCB vs RR: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಸ್ಪೋಟಕ ಬ್ಯಾಟರ್ ಎಂಟ್ರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2025ರ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದರೂ ತವರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವುದು ಚಿಂತೆಗೆ ಕಾರಣವಾಗಿದೆ. ಆದರೂ ಪ್ಲೇಆಫ್ ರೇಸ್‌ನಲ್ಲಿ ಮುಂದೆ ಇದ್ದು, ಹಾದಿಯನ್ನು ಸುಲಭವಾಗಿಸಿಕೊಳ್ಳುವ ಅವಕಾಶವಿದೆ. ಭಾನುವಾರ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಮಧ್ಯಾಹ್ನ 3.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಈ ಆವೃತ್ತಿಯಲ್ಲಿ ಆರ್ ಸಿಬಿ ಮೊದಲ ಬಾರಿ ಮಧ್ಯಾಹ್ನದ ಪಂದ್ಯ ಆಡಲಿದೆ.

ತವರಿನಲ್ಲಿ ಎರಡೂ ಪಂದ್ಯ ಸೋತರೂ ತವರಿನ ಹೊರಗೆ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೇ ಆತ್ಮವಿಶ್ವಾಸದಿಂದೇ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಆರ್ ಸಿಬಿ ತಂಡದಲ್ಲಿ ಬದಲಾವಣೆ?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸ್ಫೋಟಕ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. 3 ಓವರ್ ಗಳಲ್ಲೇ 50ಕ್ಕೂ ಹೆಚ್ಚು ರನ್ ಗಳಿಸಿದರೂ ಬಳಿಕ 20 ಓವರ್ ಗಳಲ್ಲಿ ಕೇವಲ 167 ರನ್ ಮಾತ್ರ ಗಳಿಸಿತು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ವಿರುದ್ಧದ ಪಂದ್ಯಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ವೈಫಲ್ಯ ಅನುಭವಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಲಿಯಾಮ್ ಬದಲಾಗಿ ವೆಸ್ಟ್ ಇಂಡೀಸ್ ದೈತ್ಯ ರೊಮಾರಿಯೋ ಶೆಫರ್ಡ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ರೊಮಾರಿಯೋ ಶೆಫರ್ಡ್ ಸ್ಫೋಟಕ ಬ್ಯಾಟರ್ ಮತ್ತು ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡುತ್ತಾರೆ. ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ ಸ್ಪಿನ್ ದಾಳಿ ಮುಂದುವರೆಸಲಿದ್ದು, ರೊಮಾರಿಯೋ ಶೆಫರ್ಡ್ ಬೌಲಿಂಗ್‌ನಲ್ಲೂ ಕೊಡುಗೆ ನೀಡುವ ಕ್ಷಮತೆ ಹೊಂದಿದ್ದು ಅವರಿಗೆ ಅವಕಾಶ ಸಿಗಬಹುದು.
ದೇವದತ್ ಪಡಿಕ್ಕಲ್ ಉತ್ತಮವಾಗಿ ಆಡುತ್ತಿದ್ದರೂ ಎಲ್ಲಾ ಪಂದ್ಯಗಳಲ್ಲೂ ಅದನ್ನು ಮುಂದುವರೆಸುವಲ್ಲಿ ವಿಫಲವಾಗಿದ್ದಾರೆ. ಅವರ ಬದಲಾಗಿ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಸ್ವಸ್ತಿಕ್ ಚಿಕಾರ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯಬಹುದು.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್ ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ / ಸ್ವಸ್ತಿಕ್ ಚಿಕಾರ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್/ ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ನಿತೀಶ್ ರಾಣಾ, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಫಜಲ್ಹಕ್ ಫಾರೂಕಿ/ ವನಿಂದು ಹಸರಂಗ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.












Click it and Unblock the Notifications